ಸಾರಾಂಶ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದ ಅಭಿವೃದ್ದಿಗೆ ನಿಸ್ವಾರ್ಥವಾಗಿ ಶ್ರಮಿಸಿದ ಕೊಂಗಾಡಿಯಪ್ಪ ಅವರ ಪುತ್ಥಳಿಯನ್ನು ನಗರಸಭೆ ಆಡಳಿತ ಭವನದ ಮುಂಭಾಗ ಪ್ರತಿಷ್ಠಾಪಿಸಬೇಕು ಎಂಬ ಬೇಡಿಕೆ ಈಡೇರಿಸಲು ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ. ಪುತ್ಥಳಿ ಸ್ಥಾಪನೆ ಬಗ್ಗೆ ಘೋಷಣೆ ಮಾಡದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ದೇವಾಂಗ ಮಂಡಲಿ ಅಧ್ಯಕ್ಷ, ನಗರಸಭಾ ಸದಸ್ಯ ಎಂ.ಜಿ.ಶ್ರೀನಿವಾಸ್ ಹೇಳಿದರು.
ಲೋಕಸೇವಾನಿರತ ಡಿ.ಕೊಂಗಾಡಿಯಪ್ಪನವರ 165 ನೇ ಜನ್ಮದಿನಾಚರಣೆ ಅಂಗವಾಗಿ ನಗರದ ಮುಖ್ಯರಸ್ತೆಯ ಮಾರುಕಟ್ಟೆ ಶಾಲೆಯ ಮುಂಭಾಗದಲ್ಲಿನ ಕೊಂಗಾಡಿಯಪ್ಪನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.ನೇಕಾರಿಕೆಯಲ್ಲಿ ಪ್ರಸಿದ್ದವಾಗಿರುವ ದೊಡ್ಡಬಳ್ಳಾಪುರಕ್ಕೆ ಹೆಸರು ಬರಲು ಕೊಂಗಾಡಿಯಪ್ಪನವರ ಪರಿಶ್ರಮ ಕಾರಣವಾಗಿದೆ. ಇಂತಹ ಮಹನೀಯರ ನಿಂತಿರುವ ಭಂಗಿಯ ಪುತ್ಥಳಿಯನ್ನು ಸ್ಥಾಪಿಸಲು ಹಲವಾರು ಒತ್ತಾಯಗಳನ್ನು ಮಾಡಲಾಗಿದೆ. ಆದರೆ ಫಲಪ್ರದವಾಗಿಲ್ಲದಿರುವುದು ಬೇಸರದ ಸಂಗತಿಯಾಗಿದೆ. ಕೊಂಗಾಡಿಯಪ್ಪನವರ ಪರಿಶ್ರಮದಿಂದಾಗಿ ನಮ್ಮ ಊರಿನಲ್ಲಿ ಅಂದಿನ ಕಾಲದಲ್ಲಿಯೇ ವಿದ್ಯುತ್, ಕೊಳವೆ ಬಾವಿ, ಪ್ರೌಢಶಾಲೆ, ಆಸ್ಪತ್ರೆ, ಪಶು ವೈದ್ಯಶಾಲೆ, ಕೈಮಗ್ಗ ಮತ್ತು ಗೃಹ ಕೈಗಾರಿಕಾ ತರಬೇತಿ ಕೇಂದ್ರಗಳು ಸ್ಥಾಪನೆಯಾಗಿದ್ದವು. ಅಧಿಕಾರಿಗಳ ಬಳಿಗೆ ತೆರಳಿ ಊರಿಗೆ ಆಗಬೇಕಾದ ಕೆಲಸಗಳನ್ನು ನಿವೇದನೆ ಮಾಡಿ ಆಗುವವರೆಗೂ ಬೆಂಬಿಡದೇ ಮಾಡಿಸುತ್ತಿದ್ದರು. ಕೊಂಗಾಡಿಯಪ್ಪನವರು ಊರಿನ ಯಾವ ಸಮಸ್ಯೆಯನ್ನಾಗಲೀ ಬಗೆಹರಿಸಲು ದುಡಿಯುತ್ತಿದ್ದರು. ಶಿಕ್ಷಣ, ಪರಿಸರ, ಸಮಾಜ ಸೇವೆಗಳಿಗೆ ಒತ್ತು ನೀಡಿದ್ದ ಅವರ ಬದುಕು ಹಾಗೂ ಜೀವನ ಕ್ರಮ ಇಂದಿನ ಪೀಳಿಗೆಗೆ ತಿಳಿಯಬೇಕು ಎಂದರು.
ಈ ಸಂದರ್ಭದಲ್ಲಿ ದೇವಾಂಗ ಮಂಡಲಿ ಗೌರವ ಕಾರ್ಯದರ್ಶಿ ಎಂ.ಜಿ.ಅಮರನಾಥ್, ಉಪಾಧ್ಯಕ್ಷರಾದ ಬಿ.ಜಿ.ಅಮರನಾಥ್, ಪಿ.ಗೋಪಾಲ್, ಸಹ ಕಾರ್ಯದರ್ಶಿ ಎ.ನಟರಾಜ್, ಖಜಾಂಚಿ ಎಚ್.ವಿ.ಅಖಿಲೇಶ್, ನಗರಸಭೆ ಮಾಜಿ ಅಧ್ಯಕ್ಷರಾದ ತ.ನ.ಪ್ರಭುದೇವ್, ಸುಧಾರಾಣಿ ಲಕ್ಷ್ಮೀನಾರಾಯಣ್, ಉಪಾಧ್ಯಕ್ಷ ಮಲ್ಲೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ಸದಸ್ಯರಾದ ಎಚ್.ಎಸ್.ಶಿವಶಂಕರ್, ಬಂತಿ ವೆಂಕಟೇಶ್, ವತ್ಸಲ, ಪ್ರಭಾ, ನಾಗವೇಣಿ, ಮಾಜಿ ಸದಸ್ಯ ಜಿ.ಸತ್ಯನಾರಾಯಣ್, ಪೌರಾಯುಕ್ತ ಕಾರ್ತಿಕೇಶ್ವರ್ ಸೇರಿದಂತೆ ನಗರಸಭೆ ಸದಸ್ಯರು, ದೇವಾಂಗ ಮಂಡಲಿ ನಿರ್ದೇಶಕರು ಭಾಗವಹಿಸಿದ್ದರು.ಫೋಟೋ:
22ಕೆಡಿಬಿಪಿ1- ದೊಡ್ಡಬಳ್ಳಾಪುರದಲ್ಲಿ ಲೋಕಸೇವಾನಿರತ ಕೊಂಗಾಡಿಯಪ್ಪನವರ 165ನೇ ಜನ್ಮದಿನಾಚರಣೆ ಅಂಗವಾಗಿ ದೇವಾಂಗ ಮಂಡಲಿಯಿಂದ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.