ಸಾರಾಂಶ
ಶಿರಸಿ: ಕನ್ನಡದ ಮೊದಲ ರಾಜಧಾನಿ ಬನವಾಸಿಯಲ್ಲಿ ಆಚರಿಸುವ ರಾಜ್ಯ ಮಟ್ಟದ ಕದಂಬೋತ್ಸವವು ಎಪ್ರಿಲ್ ೧೨, ೧೩ರಂದು ಮಯೂರ ವರ್ಮ ವೇದಿಕೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಶನಿವಾರ ನಗರದ ಆಡಳಿತ ಸೌಧದಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್, ಶಿರಸಿ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ನೇತೃತ್ವದಲ್ಲಿ ನಡೆದ ಕದಂಬೋತ್ಸವ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಮಾಡಲಾಯಿತು.ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿ, ಮಾ.೩ರಿಂದ ೨೧ರವರೆಗೆ ಅಧಿವೇಶನ ನಡೆಯಲಿದೆ. ಬಳಿಕ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದೆ. ಹೀಗಾಗಿ ಎಪ್ರಿಲ್ ೧೨, ೧೩ರಂದು ಕದಂಬೋತ್ಸವ ಹಮ್ಮಿಕೊಂಡಲ್ಲಿ ಎಲ್ಲರಿಗೂ ಅನುಕೂಲ ಆಗಲಿದೆ. ಅಂದು ಮುಖ್ಯಮಂತ್ರಿ ಆಗಮಿಸಲಿದ್ದು, ಶಿಸ್ತಿನಿಂದ ಕಾರ್ಯಕ್ರಮ ನಡೆಯಬೇಕು. ಎಲ್ಲರೂ ಇದಕ್ಕೆ ಶ್ರಮಿಸಬೇಕು ಎಂದರು.
ಜಿಲ್ಲಾಧಿಕಾರಿ ರಾಜ್ಯ, ರಾಷ್ಟ್ರ ಮಟ್ಟದ ಕಲಾವಿದರನ್ನು ಕೂಡಲೇ ಕಾಯ್ದಿರಿಸಬೇಕು. ಅನುದಾನ ಬಿಡುಗಡೆಗೆ ಅಗತ್ಯ ಪ್ರಸ್ತಾವನೆ ಕಳಿಸಬೇಕು. ಮುಖ್ಯಮಂತ್ರಿ, ಸಚಿವರ ಬಳಿ ನಾವು ಮಾತನಾಡುತ್ತೇವೆ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಜೊತೆಗೆ ಕಳೆದ ಕದಂಬೋತ್ಸವದಲ್ಲಿ ಅರ್ಜಿ ಹಾಕಿ, ಅವಕಾಶ ವಂಚಿತರಿಗೆ ಹೆಚ್ಚಿನ ಮಹತ್ವ ನೀಡಬೇಕು. ಕ್ರೀಡೆಗೆ ಸಂಬಂಧಿಸಿ ಹೆಚ್ಚಿನ ಮುತುವರ್ಜಿ ನೀಡಬೇಕು. ಕೃಷಿ, ಶಿಕ್ಷಣ, ತೋಟಗಾರಿಕೆ, ಸಾರಿಗೆ ಇಲಾಖೆಗಳು ಹೆಚ್ಚು ಕೆಲಸ ಮಾಡಬೇಕು. ಪೊಲೀಸ್ ಇಲಾಖೆ ಸಂಪೂರ್ಣ ಬಂದೋಬಸ್ತ್ ನೋಡಬೇಕು ಎಂದರು.ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಕದಂಬೋತ್ಸವ ಕೇವಲ ಸರ್ಕಾರಿ ಕಾರ್ಯಕ್ರಮ ಆಗಬಾರದು. ಇಲ್ಲಿ ಪ್ರತಿಯೊಬ್ಬರು ಕೆಲಸ ಮಾಡಬೇಕು. ಕುಸ್ತಿ ಅಖಾಡವನ್ನು ಬನವಾಸಿಯಲ್ಲಿ ನಿರಂತರವಾಗಿ ಇರುವಂತೆ ಮಾಡಬೇಕು. ಅದರಿಂದ ಸ್ಥಳೀಯರಿಗೆ ಅನುಕೂಲ ಆಗಲಿದೆ. ಸಾಂಸ್ಕೃತಿಕ, ಕ್ರೀಡೆಯಲ್ಲಿ ಸ್ಥಳೀಯ ಆಯ್ದ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂದರು.
ಇದಕ್ಕೂ ಮೊದಲು ಕದಂಬೋತ್ಸವ ಆಚರಣೆಯ ವಿವರವನ್ನು ಪಿಪಿಟಿ ಮೂಲಕ ವಿವರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ, ಡಿಎಸ್ಪಿ ಕೆ.ಎಲ್. ಗಣೇಶ, ಸಿಪಿಐ ಶಶಿಕಾಂತ ವರ್ಮ, ಶಿರಸಿ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಬನವಾಸಿ ಭಾಗದ ಪ್ರಮುಖರಾದ ಸಿ.ಎಫ್.ನಾಯ್ಕ, ಉದಯಕುಮಾರ ಕಾನಳ್ಳಿ, ಬಿ.ಶಿವಾಜಿ, ಪ್ರಶಾಂತ ಗೌಡ ಮತ್ತಿತರರು ಇದ್ದರು.ಸಹಾಯಕ ಆಯುಕ್ತೆ ಕೆ.ವಿ.ಕಾವ್ಯಾರಾಣಿ ಸ್ವಾಗತಿಸಿ, ಕದಂಬೋತ್ಸವ ಆಚರಣೆಯ ಸಮಿತಿಯ ಕುರಿತು ಮಾಹಿತಿ ನೀಡಿದರು.