ಸಾರಾಂಶ
ಲಕ್ಷ್ಮೇಶ್ವರ: ಸಮೀಪದ ಶಿಗ್ಲಿ ಗ್ರಾಮದಲ್ಲಿ ಗುರು ಕೊಟ್ಟೂರೇಶ್ವರ ದೇವಸ್ಥಾನದ ಲೋಕಾರ್ಪಣೆಯ ಕಾರ್ಯವು ಮೇ 6, 7 ಹಾಗೂ 8ರಂದು ಅದ್ಧೂರಿಯಾಗಿ ನೆರವೇರುವುದು. ನಾಡಿನ ಪ್ರಮುಖ ಮಠಾಧೀಶರು ಹಾಗೂ ರಾಜಕೀಯ ಮುಖಂಡರು ಸಮಾರಂಭಕ್ಕೆ ಆಗಮಿಸುವರು ಎಂದು ಕೊಟ್ಟೂರೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಮಹಾದೇವಪ್ಪ ಬೆಳವಿಗಿ ಹೇಳಿದರು.
ಶಿಗ್ಲಿ ಗ್ರಾಮದಲ್ಲಿ ಭಾನುವಾರ ಗುರು ಕೊಟ್ಟೂರೇಶ್ವರ ದೇವಸ್ಥಾನದ ಲೋಕಾರ್ಪಣೆ ಕುರಿತ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಶಿಗ್ಲಿ ಗ್ರಾಮದಲ್ಲಿ ಸುಮಾರು 1 ಕೋಟಿ ಹಾಗೂ 20 ಲಕ್ಷ ವೆಚ್ಚದಲ್ಲಿ ಸುಂದರ ಹಾಗೂ ಭವ್ಯ ದೇವಸ್ಥಾನ ನಿರ್ಮಾಣ ಕಾರ್ಯ ಮಾಡಲಾಗಿದೆ. ಕೊಟ್ಟೂರೇಶ್ವರ ಪಾದಯಾತ್ರೆ ಸಮಿತಿಯ ಹಾಗೂ ಗ್ರಾಮದ, ಕೊಟ್ಟೂರೇಶ್ವರ ಸ್ವಾಮಿಯ ಭಕ್ತರ ತನು ಮನ ಧನದ ಸಹಾಯ ಸಹಕಾರ ಹಾಗೂ ಪಾದಯಾತ್ರಾ ಸಮಿತಿಯು ದೇವಸ್ಥಾನದ ನಿರ್ಮಾಣ ಕಾರ್ಯದಲ್ಲಿ ಹಗಲಿರುಳು ಶ್ರಮಿವಹಿಸಿದ್ದರಿಂದ ಭವ್ಯ ದೇವಸ್ಥಾನ ನಿರ್ಮಾಣ ಕಾರ್ಯ ಮಾಡಲು ಸಾಧ್ಯವಾಗಿದೆ ಎಂದು ಹೇಳಿದ ಅವರು, ಗುರು ಕೊಟ್ಟೂರೇಶ್ವರ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ಏಪ್ರೀಲ್ 28ರಿಂದ ಮೇ 6 ರವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ಕೊಟ್ಟೂರ ಬಸವೇಶ್ವರ ಸ್ವಾಮಿಯ ಪುರಾಣ ಪ್ರವಚನ ಕಾರ್ಯಕ್ರಮವನ್ನು ಹೂವಿನ ಶಿಗ್ಲಿಯ ವಿರಕ್ತಮಠದ ಚನ್ನವೀರ ಸ್ವಾಮಿಗಳು ನಡೆಸಿಕೊಡುತ್ತಿದ್ದಾರೆ.
ಮೇ 6ರಂದು ಬೆಳಗ್ಗೆ 8.30ಕ್ಕೆ ಮಹಿಳೆಯರು ಕುಂಭ ಹೊತ್ತು ಕೊಟ್ಟೂರೇಶ್ವರ ಮೂರ್ತಿ ಹಾಗೂ ಕಳಸದ ಮೆರವಣಿಗೆ ಆರಂಭವಾಗುತ್ತದೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೊಟ್ಟೂರೇಶ್ವರ ದೇವಸ್ಥಾನಕ್ಕೆ ಆಗಮಿಸಲಿದೆ. ಈ ವೇಳೆ ವಿವಿಧ ವಾದ್ಯಗಳೊಂದಿಗೆ ಹಾಗೂ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸುವರು.ಮಂಗಳವಾರ ಸಂಜೆ 6 ಗಂಟೆಗೆ ಧರ್ಮ ಸಭೆ ಜರುಗುತ್ತದೆ. ನೀಲಗುಂದದ ಗುಡ್ಡದ ಸಂಸ್ಥಾನಮಠದ ಚನ್ನಬಸವ ಸ್ವಾಮಿಗಳು ಸಮಾರಂಭದ ಸಾನಿಧ್ಯವಹಿಸುವರು. ಹೂವಿನಹಡಗಲಿಯ ಗವಿಮಠದ ಡಾ. ಹಿರಿಶಾಂತವೀರ ಸ್ವಾಮಿಗಳು ಪ್ರವಚನ ಮಂಗಲ ನುಡಿಯುವರು. ಶಿಗ್ಲಿಯ ಇಷ್ಟಲಿಂಗ ಸ್ವಾಮಿಗಳು ಸಮಾರಂಭದ ನೇತೃತ್ವ ವಹಿಸುವರು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಸ್ತುವಾರಿ ಸಚಿವ ಎಚ್.ಕೆ. ಪಾಟೀಲ ನೆರವೇರಿಸುವರು. ಸಭೆಯಲ್ಲಿ ಶಾಸಕ ಜಿ.ಎಸ್. ಪಾಟೀಲ, ಸಿ.ಸಿ. ಪಾಟೀಲ, ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಸೇರಿದಂತೆ ಅನೇಕ ಮುಖಂಡರು ಭಾಗವಹಿಸುವರು.
ಬುಧವಾರ ಬೆಳಗ್ಗೆ 6 ಗಂಟೆಗೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗುತ್ತವೆ. ಸಂಜೆ 6 ಗಂಟೆಗೆ ಧರ್ಮ ಸಭೆಯ ಜರುಗುತ್ತದೆ.ಗುರುವಾರ ಬೆಳಗ್ಗೆ 6 ಗಂಟೆಗೆ ನೂತನ ದೇವಸ್ಥಾನದ ಉದ್ಘಾಟನೆ ಹಾಗೂ ಕಳಸಾರೋಹಣ ಮತ್ತು ದೇವಸಥಾನದ ಲೋಕಾರ್ಪಣೆ ಕಾರ್ಯಕ್ರಮವು ಜರುಗುತ್ತದೆ. ಮಧ್ಯಾಹ್ನ 11 ಗಂಟೆಗೆ ಧರ್ಮ ಸಭೆ ಜರುಗುತ್ತದೆ. ಧರ್ಮಸಭೆಯ ದಿವ್ಯ ಸಾನಿಧ್ಯವನ್ನು ಶಿರಹಟ್ಟಿಯ ಫಕ್ಕೀರ ದಿಂಗಾಲೇಶ್ವರ ಸ್ವಾಮಿಗಳು ವಹಿಸಿಕೊಳ್ಳುವರು. ಸಭೆಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಡಾ. ಚಂದ್ರು ಲಮಾಣಿ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಭಾಗವಹಿಸುವರು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಾಗಪ್ಪ ತಂಬ್ರಳ್ಳಿ, ನಾಗರಾಜ ಬೆಳವಿಗಿ, ಶಿವಯೋಗಿ ಹಿರೇಮಠ, ಶಿವಯ್ಯ ಪೂಜಾರ, ಗಂಗಾಧರಯ್ಯ ರಿತ್ತಿಮಠ, ಬಸವರಾಜ ಹಂಗನಕಟ್ಟಿ, ಸಂತೋಷ ತಾಂದಳೆ, ರಾಮಣ್ಣ ಲಮಾಣಿ. ಮಂಜುನಾಥ ಬೀಳಗಿ, ರಾಘವೇಂದ್ರ ಅಸುಂಡಿ ಇದ್ದರು.