ಸವಣೂರು: ಶಿವ ಪಥವನರಿವಡೆ ಗುರು ಪಥವೇ ಮೊದಲು ಎಂಬ ವಚನದಂತೆ ಶಿವಪಥವು ಜೀವನದ ಉನ್ನತ ಗುರಿ ಸಾಧಿಸುವ ಆಧಾರ. ಗುರುತತ್ವವನ್ನು ಗೌರವಿಸಿದರೆ ಮಾತ್ರ ಜೀವನದಲ್ಲಿ ಸಾರ್ಥಕತೆ ಸಾಧ್ಯ ಎಂದು ಧಾರವಾಡ ಮುರಘಾಮಠದ ಶ್ರೀಗಳಾದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಶ್ರೀ ಕಲ್ಮಠದ ಶ್ರೀ ಲಿಂ. ಪೂಜ್ಯ ಸಿದ್ಧಲಿಂಗಸ್ವಾಮಿಗಳ ಹಾಗೂ ಶ್ರೀ ಲಿಂ. ಪೂಜ್ಯ ಸಂಗನಬಸವ ಸ್ವಾಮಿಗಳ ಸಂಸ್ಮರಣ ಮಹೋತ್ಸವ ಹಾಗೂ ಮಾತೃ ಹೃದಯಿ ಮಹಾಂತ ಶ್ರೀ ಅಭಿನಂದನಾ ಗ್ರಂಥ ಬಿಡುಗಡೆ, 206ನೇ ಮಾಸಿಕ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.ಅಜ್ಞಾನವನ್ನು ದೂರ ಮಾಡಿ ಜ್ಞಾನಪ್ರಕಾಶ ನೀಡುವವನು, ಜೀವನದ ಗೊಂದಲಗಳಲ್ಲಿ ಸರಿ ತಪ್ಪನ್ನು ತಿಳಿಸಿ, ಮೌಲ್ಯಾಧಾರಿತ ಬದುಕಿಗೆ ದಾರಿ ತೋರಿಸುವವನೇ ನಿಜವಾದ ಗುರು. ಆದ್ದರಿಂದ, ಶಿವತತ್ವವನ್ನು ಅರಿಯುವ ಮೊದಲು ಗುರುತತ್ವವನ್ನು ಅಳವಡಿಸಿಕೊಳ್ಳಬೇಕು. ಅಂತಹ ಗುರುವಿನ ಸ್ಥಾನವನ್ನು ಶ್ರೀಮಠದ ಮಹಾಂತಪ್ಪಗಳು ಹೊಂದಿದ್ದು, ಇಂದು ಉಭಯ ಶ್ರೀಗಳ ಸಂಸ್ಮರಣೆ ಹಾಗೂ 206 ಶಿವಾನುಭವ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಸಮಾಜದಲ್ಲಿ ಧಾರ್ಮಿಕ ಜಾಗೃತಿ, ಸಾಂಸ್ಕೃತಿಕ ಸಂವೇದನೆ ಮತ್ತು ನೈತಿಕ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುವ ಮಹತ್ವದ ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಮಹಾಂತ ಸ್ವಾಮಿಗಳು ಪಟ್ಟಾಧಿಕಾರ ಸ್ವೀಕರಿಸಿದ ನಂತರ ಮಠಗಳ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳು ಹೊಸ ಆಯಾಮವನ್ನು ಪಡೆದುಕೊಂಡಿವೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಹಿತಿಗಳು, ಕಲಾವಿದರು, ಸಂಗೀತಗಾರರು, ನೃತ್ಯಗಾರರು ಹಾಗೂ ಸಮಾಜಸೇವಕರನ್ನು ಗೌರವಿಸಿ ಪ್ರೋತ್ಸಾಹಿಸುವ ಅಂತಹ ಪೂಜ್ಯರ ಅಭಿನಂದನಾ ಗ್ರಂಥ ಚಿರಸ್ಥಾಯಿಯಾಗಿ ಉಳಿಯಲು ಸಂಪಾದಕರಾದ ಕೌಜಲಗಿ ಅವರು ಉತ್ತಮ ಗ್ರಂಥವನ್ನು ಸಂಪಾದಿಸಿದ್ದಾರೆ. ಅಂತಹ ಅದ್ಭುತ ಗ್ರಂಥವನ್ನು ಪ್ರತಿಯೊಬ್ಬ ಸದ್ಭಕ್ತರು ಓದಿ ಅರಿತುಕೊಂಡಲ್ಲಿ ಸಾರ್ಥಕತೆ ಬದುಕು ನಿಮ್ಮದಾಗಲಿದೆ ಎಂದು ನುಡಿದರು.
ಸಾನಿಧ್ಯ ವಹಿಸಿದ್ದ ಶ್ರೀಮಠದ ಮಹಾಂತಸ್ವಾಮೀಜಿ ಆಶೀರ್ವಚನ ನೀಡಿ, ನಾಡಿನಲ್ಲಿ ಸಾಕಷ್ಟು ಮಠಗಳಿವೆ. ಆದರೆ, ನಿಮ್ಮ ಅಚಲ ಭಕ್ತಿ, ನಿಷ್ಠೆ ಮತ್ತು ಸೇವಾಭಾವ ನಿಜಕ್ಕೂ ಶ್ಲಾಘನೀಯ. ಮಠದ ಕಾರ್ಯಗಳಲ್ಲಿ ನೀವು ತೋರಿದ ಸಮರ್ಪಣೆ, ಧರ್ಮಪಾಲನೆ ಹಾಗೂ ಗುರುಭಕ್ತಿ ಎಲ್ಲರಿಗೂ ಆದರ್ಶವಾಗಿದೆ. ನಿಮ್ಮ ಸಹಕಾರ ಮತ್ತು ಪ್ರೋತ್ಸಾಹದಿಂದ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆ ಯಶಸ್ವಿಯಾಗಿ ನೆರವೇರಿವೆ. ನಿಮ್ಮ ಪ್ರೀತಿ ಮತ್ತು ವಿಶ್ವಾಸವೇ ನಮ್ಮ ಶಕ್ತಿಯ ಮೂಲ ಆದ್ದರಿಂದ ಉಭಯ ಮಠಗಳು ಇಂದು ಸಾಕಷ್ಟು ಅಭಿವೃದ್ಧಿ ಕಾಣುತ್ತಿವೆ. ಧರ್ಮಮಾರ್ಗದಲ್ಲಿ ದೃಢವಾಗಿ ನಡೆಯುತ್ತ, ಸತ್ಯ, ಶಾಂತಿ ಮತ್ತು ಸೇವೆ ಎಂಬ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಆಶಿಸುತ್ತೇವೆ ಎಂದು ನುಡಿದರು.ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಕಾರ್ಯಕ್ರಮದನ್ವಯ ಸಂಪಾದಕರು, ಹಲವು ಗಣ್ಯರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಿ, ಗುರುರಕ್ಷೆ ನೀಡಲಾಯಿತು.
ರಂಭಾಪುರಿ ಪಿ.ಯು ಕಾಲೇಜಿನ ಉಪನ್ಯಾಸಕ ಎಸ್.ವಿ. ಕುಲಕರ್ಣಿ ಅಭಿನಂದನಾ ಗ್ರಂಥವನ್ನು ಸದ್ಭಕ್ತರಿಗೆ ಪರಿಚಯಿಸಿದರು. ಶಿಕ್ಷಕಿ ಗಿರಿಜಾ ಎಸ್. ಹಿರೇಮಠ ಉಪನ್ಯಾಸ ನೀಡಿದರು. ಸಂಪಾದಕ ಪ್ರೊ. ಕೆ.ಎಸ್ ಕೌಜಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸುಜನಿ ನಾಟ್ಯಶಾಲೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನಗೊಂಡಿತು.ಈ ಸಂದರ್ಭದಲ್ಲಿ ತಹಸೀಲ್ದಾರ್ ರವಿ ಕುಮಾರ ಕೊರವರ, ಸುಭಾಸ ಗಡೆಪ್ಪನವರ, ಸುಮಂತ ಸಿಂಧೂರ, ಮಲ್ಲಿಕಾರ್ಜುನ ಹಾವಣಗಿ, ಮಂಜುನಾಥ ಗಾಣಿಗೇರ, ವಿದ್ಯಾವತಿ ಹಾವಣಗಿ, ರಾವುತಪ್ಪ ಬಿಕ್ಕಣ್ಣನವರ, ಸಿದ್ದಲಿಂಗಪ್ಪ ತೆಗ್ಗಿಹಳ್ಳಿ, ಬಂಕಾಪುರದ ವೈದ್ಯ ಡಾ. ಆರ್.ಎಸ್ ಅರಳೆಲೆಮಠ, ಗ್ರಂಥದ ಪ್ರಧಾನ ಸಂಪಾದಕ ಸಿಎನ್ ಪಾಟೀಲ್, ಪ್ರಭು ಅರೆಗೋಳ, ಎ.ಕೆ. ಅವಧಾನಿಮಠ, ಉಪನ್ಯಾಸಕ ಮಹಾಂತೇಶ ಕುತನಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ವಿದ್ಯಾಧರ ಕುತುನಿ ಹಾಗೂ ದಾನೇಶ ಬಿಂದಲಗಿ ನಿರ್ವಹಿಸಿದರು.