ಸಾರಾಂಶ
ಆಂಧ್ರಪ್ರದೇಶದ ಗಡಿ ಭಾಗದಲ್ಲಿ ಹರಿಯುವ ಕೃಷ್ಣಾ ನದಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹರಿಸಲು ಸಹೋದರ ಭಾವನೆಯಿಂದ ಪ್ರಯತ್ನ ಮಾಡುವುದಾಗಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ತೆಲುಗಿನ ಖ್ಯಾತ ನಟ ಪವನ್ ಕಲ್ಯಾಣ್ ಭರವಸೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಫುರ/ ಚಿಂತಾಮಣಿ
ಆಂಧ್ರಪ್ರದೇಶದ ಗಡಿ ಭಾಗದಲ್ಲಿ ಹರಿಯುವ ಕೃಷ್ಣಾ ನದಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹರಿಸಲು ಸಹೋದರ ಭಾವನೆಯಿಂದ ಪ್ರಯತ್ನ ಮಾಡುವುದಾಗಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ತೆಲುಗಿನ ಖ್ಯಾತ ನಟ ಪವನ್ ಕಲ್ಯಾಣ್ ಭರವಸೆ ನೀಡಿದ್ದಾರೆ.ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಅವರ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ನಿವೃತ್ತ ನ್ಯಾ. ಗೋಪಾಲಗೌಡರು ಜನಸೇನಾ ಪಕ್ಷಕ್ಕೆ ಬಲ ತುಂಬಿದವರು. ಅವರಿಂದಲೇ ನಾನು ರಾಜಕೀಯಕ್ಕೆ ಬಂದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಬೆಂಗಳೂರು ನಗರಕ್ಕೆ ಆಹಾರ ಕೊಡುವ ಅಕ್ಷಯ ಪಾತ್ರೆಗಳು. ಹೀಗಾಗಿ ನೀರಾವರಿ ಯೋಜನೆ ಬಗ್ಗೆ ನನ್ನ ಪ್ರಯತ್ನ ಮಾಡುತ್ತೇನೆ. ಆಂಧ್ರ ಪ್ರದೇಶಕ್ಕೆ ಕರ್ನಾಟಕದ ಮೇಲೆ ತುಂಬಾ ಪ್ರೀತಿ ಇದೆ. ನಾವೆಲ್ಲಾ ಒಂದೇ ತಾಯಿಯ ಮಕ್ಕಳು ಎಂದರು.
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಚರ್ಚಿಸಿ, ಮೂರು ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು ಹರಿಸಲು ಸಹಕಾರ ನೀಡಬೇಕು ಎಂದು ಕೇಂದ್ರ ಸಚಿವ ವಿ. ಸೋಮಣ್ಣ, ಮಾಜಿ ಶಾಸಕ ಎಂ. ಕೃಷ್ಣಾರೆಡ್ಡಿ ಮತ್ತು ನ್ಯಾ.ವಿ.ಗೋಪಾಲಗೌಡ ಮನವಿ ಮಾಡಿದರು. ಆಗ ಈ ನಿಟ್ಟಿನಲ್ಲಿ ಪ್ರಯತ್ನ ಮಾಡುವುದಾಗಿ ಪವನ್ ಕಲ್ಯಾಣ್ ಭರವಸೆ ನೀಡಿದರು.--
ಕನ್ನಡದಲ್ಲಿ ಮಾತು ಆರಂಭಿಸಿದ ಪವನ್ಕಾರ್ಯಕ್ರಮದಲ್ಲಿ ಕನ್ನಡದಲ್ಲಿಯೇ ಮಾತು ಆರಂಭಿಸಿದ ಪವನ್ ಕಲ್ಯಾಣ್, ‘ಚಿಂತಾಮಣಿಯ ಸಹೋದರ- ಸಹೋದರಿಯರೇ, ಜನಸೇನಾ ಸೇನಾನಿಗಳೇ ಹಾಗೂ ನೆಚ್ಚಿನ ಅಭಿಮಾನಿ ದೇವರುಗಳೇ... ಭಾರತ ಮಾತೆಯ ಮುದ್ದಿನ ಮಗಳು ಕನ್ನಡಮ್ಮನಿಗೆ ನಮನಗಳು. ಕನ್ನಡ ನಾಡು ಅದ್ಭುತ ಪರಂಪರೆ ಮತ್ತು ಸಂಸ್ಕೃತಿ, ಹಲವು ಕವಿಗಳ ನಾಡು ಮತ್ತು ಶಿಲ್ಪಕಲೆಗಳ ಬೀಡಾಗಿದ್ದು, ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ ಮೋಕ್ಷಂಗುಂಡಂ ವಿಶ್ವೇಶ್ವರಯ್ಯ, ವಿಶ್ವ ಮಾನವತೆಯ ತತ್ವ ಸಾರಿದ ರಾಷ್ಟ್ರಕವಿ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪರಂಥ ಮಹನೀಯರನ್ನು ಪಡೆದಿರುವ ಕರ್ನಾಟಕದ ಜನತೆ ನಿಜಕ್ಕೂ ಪುಣ್ಯವಂತರೆಂದು ಹೇಳಿದರು.