ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಈ ಬಾರಿಯ ಹಾಸನಾಂಭ ಉತ್ಸವ ಅ.9ರಿಂದ 23ರವರೆಗೆ ನಡೆಯಲಿದ್ದು, ಹಾಸನಾಂಬ ದರ್ಶನದಲ್ಲಿ ಗೊಂದಲ ಉಂಟಾಗುವುದನ್ನು ತಡೆಯಲು ವಿಐಪಿ ಪಾಸ್ ಸೇರಿ ಇನ್ನಿತರ ಪಾಸ್‌ಗಳಿಗೆ ಕೆಲ ನಿರ್ಬಂಧ ಹೇರಲಾಗಿದೆ ಎಂದು ಹಾಸನ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.ವಿಕಾಸಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷ್ಣಬೈರೇಗೌಡ, ವರ್ಷದಿಂದ ವರ್ಷಕ್ಕೆ ಹಾಸನಾಂಬ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. 2021ರಲ್ಲಿ 1 ಲಕ್ಷವಿದ್ದ ಭಕ್ತರ ಸಂಖ್ಯೆ 2024ಕ್ಕೆ 20 ಲಕ್ಷ ತಲುಪಿತ್ತು. ಈ ವರ್ಷ 25 ಲಕ್ಷ ಭಕ್ತರು ದರ್ಶನಕ್ಕೆ ಬರುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಮಾಡಲು ‘ಪಾಸ್ ಪಡೆದು ದರ್ಶನ’ಕ್ಕೆ ಕೆಲ ನಿರ್ಬಂಧ ಹೇರಲಾಗಿದೆ. ಆ ಮೂಲಕ ಸಾರ್ವಜನಿಕರ ದರ್ಶನಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.
ರಾಜ್ಯಪಾಲರು, ಮುಖ್ಯಮಂತ್ರಿಗಳು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಮತ್ತು ಮಾಜಿ ಪ್ರಧಾನಿಗಳು ಮಾತ್ರ ಎಸ್ಕಾರ್ಟ್ ಮೂಲಕ ದೇವಸ್ಥಾನಕ್ಕೆ ತೆರಳಬಹುದು. ಉಳಿದಂತೆ ಸಚಿವರು, ಶಾಸಕರು, ನ್ಯಾಯಮೂರ್ತಿಗಳು ಸೇರಿ ಉಳಿದ ಗಣ್ಯರು ದೇವಸ್ಥಾನಕ್ಕೆ ನೇರ ಭೇಟಿಗೆ ಅವಕಾಶವಿಲ್ಲ. ಅವರು ಮೊದಲಿಗೆ ತಾವು ಯಾವ ದಿನದಂದು ದೇವಸ್ಥಾನಕ್ಕೆ ಬರಲಿದ್ದೇವೆ ಎಂಬುದನ್ನು ಜಿಲ್ಲಾಡಳಿತಕ್ಕೆ ಇಮೇಲ್ ಅಥವಾ ದೂರವಾಣಿ ಮೂಲಕ ತಿಳಿಸಬೇಕು. ನಂತರ ಅವರು ನಿಗದಿತ ದಿನದಂದು ಹಾಸನದ ಪರಿವೀಕ್ಷಣಾ ಮಂದಿರಕ್ಕೆ ಬರಬೇಕು. ಅಲ್ಲಿಂದ ಅವರು ಮತ್ತು ಅವರೊಂದಿಗೆ ನಾಲ್ಕು ಮಂದಿಯನ್ನು ಜಿಲ್ಲಾಡಳಿತದ ವಾಹನದಲ್ಲಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಲಾಗುವುದು. ಇದರಿಂದಾಗಿ ಭದ್ರತೆ ಸಮಸ್ಯೆ ಮತ್ತು ಸಾರ್ವಜನಿಕರ ದರ್ಶನಕ್ಕೆ ಎದುರಾಗುವ ತೊಡಕು ನಿವಾರಣೆಯಾಗುವಂತೆ ಮಾಡಲಾಗುವುದು ಎಂದರು.ಉಳಿದಂತೆ ಪ್ರತಿನಿತ್ಯ 1 ಸಾವಿರ ಗೋಲ್ಡ್ ಪಾಸ್‌ಗಳನ್ನು ವಿತರಿಸಲಾಗುವುದು. ಅದು ಸಮಾಜದ ಗಣ್ಯ ವ್ಯಕ್ತಿಗಳಿಗೆ ನೀಡಲಾಗುವುದು. ಆ ಪಾಸ್‌ನಲ್ಲಿ ಒಬ್ಬರು ಮಾತ್ರ ದೇವಸ್ಥಾನಕ್ಕೆ ಹೋಗಲು ಅವಕಾಶ ನೀಡಲಾಗುತ್ತಿದ್ದು, ಪಾಸ್ ಪಡೆದವರು ಪಾಸ್‌ನಲ್ಲಿ ಮುದ್ರಿಸಲಾದ ದಿನದಂದೇ ಬರಬೇಕು. ಈ ಗೋಲ್ಡ್ ಪಾಸ್ ಹೊಂದಿರುವವರು ಬೆಳಗ್ಗೆ 7.30ರಿಂದ 10 ಗಂಟೆಗೆ ಮಾತ್ರ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ಉಳಿದಂತೆ ವಿಐಪಿಗಳಿಗೆ 10.30ರಿಂದ 12.30ರವರೆಗೆ ಅವಕಾಶವಿರಲಿದೆ. ಆ ಅವಧಿ ಮುಗಿದ ನಂತರ ಆ ಗೇಟ್‌ಗಳನ್ನು ಮುಚ್ಚಲಾಗುವುದು ಎಂದರು.ಸಾರ್ವಜನಿಕರ ದರ್ಶನಕ್ಕಾಗಿ 300 ರು. ಮತ್ತು 1 ಸಾವಿರ ರು. ಬೆಲೆಯ ಪಾಸ್‌ಗಳನ್ನು ವಿತರಿಸಲಾಗುವುದು. ಪಾಸ್ ಹೊಂದಿರುವವರೆಗೆ ದೇವರ ದರ್ಶನದ ಜತೆಗೆ ಪ್ರಸಾದವನ್ನೂ ನೀಡಲಾಗುವುದು. ಒಂದು ಪಾಸ್‌ನಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಇರಲಿದೆ. ಪ್ರತಿನಿತ್ಯ 70ರಿಂದ 80 ಸಾವಿರ ಭಕ್ತರು ಹಾಸನಾಂಬ ದರ್ಶನ ಪಡೆಯುವಂತೆ ಮಾಡಲಾಗುವುದು ಎಂದು ವಿವರಿಸಿದರು.
ಹಾಸನಾಂಬ ದೇವಸ್ಥಾನ ಅ.9ರಿಂದ 23ರವರೆಗೆ ತೆರೆದಿರಲಿದೆ. ಅ.9 ಮತ್ತು 23ರಂದು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಇರಲಿದ್ದು, ಆ ದಿನಗಳಂದು ಪೂಜಾ ಕೈಂಕರ್ಯಗಳಿರಲಿವೆ. ಉಳಿದಂತೆ ಅ.10ರಿಂದ 22ರವರೆಗೆ ನಿರಂತರವಾಗಿ ಹಾಸನಾಂಭೆ ದರ್ಶನಕ್ಕೆ ಅವಕಾಶವಿರಲಿದೆ.==== ಇನ್ನು, ಹಾಸನಾಂಬ ದರ್ಶನಕ್ಕೆ ಬರುವವರಿಗೆ ನಮ್ಮ ಸಂಸ್ಕೃತಿ, ಜಾನಪದ ಪರಿಚಯಿಸಲು 3 ಕಡೆ ವೇದಿಕೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಅದರಲ್ಲಿ ಒಂದು ವೇದಿಕೆಯನ್ನು ಜಾನಪದ ಕಲೆಗಳ ಪ್ರದರ್ಶನಕ್ಕೆ ಸೀಮಿತಗೊಳಿಸಲಾಗುವುದು. ಉಳಿದ ವೇದಿಕೆಗಳಲ್ಲಿ ಒಂದರಲ್ಲಿ ಸ್ಥಳೀಯ ಯುವ ಜನರ ಕಲಾ ಪ್ರದರ್ಶನಕ್ಕೆ ಮತ್ತು ಮತ್ತೊಂದರಲ್ಲಿ ಸಾಂಪ್ರದಾಯಿಕ ನೃತ್ಯ ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಅದರೊಂದಿಗೆ ಹೆಲಿ ಟೂರಿಸಂ, ಫಲಪುಷ್ಪ ಪ್ರದರ್ಶನ, ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟ ಮೇಳ ಇರಲಿದೆ. ಜತೆಗೆ ಪ್ರವಾಸೋದ್ಯಮ ಇಲಾಖೆ ಮೂಲಕ ಹಾಸನಾಂಬ ಪ್ರವಾಸಿ ಪ್ಯಾಕೇಶ್ ಆರಂಭಿಸುವ ಬಗ್ಗೆಯೂ ಚರ್ಚೆ ಮಾಡಲಾಗಿದೆ ಎಂದರು.2 ಸಾವಿರ ಪೊಲೀಸರ ನಿಯೋಜನೆ:ಹಾಸನಾಂಬ ದರ್ಶನದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮತ್ತು ಭದ್ರತೆಗಾಗಿ 2 ಸಾವಿರಕ್ಕೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ನಗರದಲ್ಲಿ 280ಕ್ಕೂ ಹೆಚ್ಚಿನ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಡ್ರೋನ್ ಕ್ಯಾಮರಾ, ಎಐ ತಂತ್ರಜ್ಞಾನ ಬಳಸಲಾಗುತ್ತಿದೆ. ದೇವಸ್ಥಾನದ ಬಳಿ ಕಂಟ್ರೋಲ್ ರೂಂ ಸ್ಥಾಪಿಸಲಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.ಯಾರ್ಯಾರಿಗೆ ಎಸ್ಕಾಟ್ ಪ್ರರಾಜ್ಯಪಾಲರು, ಮುಖ್ಯಮಂತ್ರಿಗಳು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಮತ್ತು ಮಾಜಿ ಪ್ರಧಾನಿಗಳು ಮಾತ್ರ ಎಸ್ಕಾರ್ಟ್ ಮೂಲಕ ದೇವಸ್ಥಾನಕ್ಕೆ ತೆರಳಬಹುದು. ಸಚಿವರು, ಶಾಸಕರು, ನ್ಯಾಯಮೂರ್ತಿಗಳು ಸೇರಿ ಉಳಿದ ಗಣ್ಯರಿಗೆ ನೇರ ಭೇಟಿಗೆ ಅವಕಾಶ ಇಲ್ಲ. ಇವರು ಭೇಟಿ ಕುರಿತು ದೇಗುಲಕ್ಕೆ ಮೊದಲೇ ಮಾಹಿತಿ ನೀಡಬೇಕು.