ಸಾರಾಂಶ
ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ‘ವರ್ಗಾವಣೆ ಪರ್ವ’ಕ್ಕೆ ಆರಂಭದಲ್ಲೇ ರಾಜಕೀಯ ವಿಘ್ನ ಎದುರಾಗಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಎರಡು ಬಣಗಳ ತಿಕ್ಕಾಟದ ಪರಿಣಾಮ ಬೆಂಗಳೂರು ಸೇರಿ ಕೆಲ ಜಿಲ್ಲೆಗಳ ಪೊಲೀಸರ ವರ್ಗವನ್ನು ಇಲಾಖೆ ತಡೆ ಹಿಡಿದಿದೆ.
ರಾಜ್ಯದಲ್ಲಿ 131 ಇನ್ಸ್‌ಪೆಕ್ಟರ್ ಹಾಗೂ 27 ಡಿವೈಎಸ್ಪಿಗಳನ್ನು ಪೊಲೀಸ್ ಮಹಾನಿರ್ದೇಶಕರು ಸೋಮವಾರ ಸಂಜೆ ವರ್ಗಾವಣೆಗೊಳಿಸಿ ಆದೇಶಿಸಿದ್ದಾರೆ. ಆದರೆ ಈ 148 ಪೊಲೀಸ್ ಅಧಿಕಾರಿಗಳ ಪೈಕಿ ಬೆಂಗಳೂರು ನಗರ ಮಾತ್ರವಲ್ಲದೆ ಮೈಸೂರು ಹಾಗೂ ರಾಮನಗರ ಸೇರಿ ಕೆಲ ಜಿಲ್ಲೆಗಳ ಪೊಲೀಸರ ಹೆಸರಿಲ್ಲ. ಬೆಂಗಳೂರು ಸೇರಿ ಪ್ರಮುಖ ಜಿಲ್ಲೆಗಳ ಆಯಕಟ್ಟಿನ ಸ್ಥಾನಗಳಿಗೆ ಪಿಐ-ಡಿವೈಎಸ್ಪಿಗಳ ಪರ ರಾಜಕೀಯ ಲಾಬಿಯಿಂದ ವರ್ಗಾವಣೆ ವಿಳಂಬವಾಗಲಿದೆ ಎನ್ನಲಾಗಿದೆ.
ಪೊಲೀಸರ ವರ್ಗಾವಣೆ ವಿಷಯ ದೆಹಲಿ ರಾಜಕೀಯ ಅಂಗಳಕ್ಕೂ ತಲುಪಿದೆ. ಒಂದೆಡೆ ಕೆಲ ಪೊಲೀಸರ ಪರ ನೇರವಾಗಿ ದೆಹಲಿ ಹಿರಿಯ ನಾಯಕರು ವಕಾಲತ್ತು ನಡೆಸಿದ್ದರೆ, ಮತ್ತೊಂದೆಡೆ ಪೊಲೀಸರ ವರ್ಗಾವಣೆ ವಿಚಾರವಾಗಿ ರಾಜ್ಯ ನಾಯಕರ ನಡುವೆ ತಲೆದೂರಿರುವ ವಿರಸ ಶಮನಕ್ಕೆ ದೆಹಲಿ ನಾಯಕರು ಮಧ್ಯಸ್ಥಿಕೆ ವಹಿಸಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ 2ನೇ ಬಾರಿಗೆ ಇನ್ಸ್‌ಪೆಕ್ಟರ್ ಹಾಗೂ ಡಿವೈಎಸ್ಪಿಗಳ ಸಾಮೂಹಿಕ ವರ್ಗಾವಣೆಗೆ ರಾಜ್ಯ ಪೊಲೀಸ್ ಇಲಾಖೆ ಮುಂದಾಗಿದೆ. ಕಳೆದ ಸಲ ಪೊಲೀಸರ ವರ್ಗಾವಣೆ ವಿಚಾರವಾಗಿ ಆಡಳಿತ ಪಕ್ಷದಲ್ಲಿ ದೊಡ್ಡಮಟ್ಟದ ಭಿನ್ನಾಭಿಪ್ರಾಯ ವ್ಯಕ್ತವಾಗಿತ್ತು. ಅಲ್ಲದೆ, ತಮ್ಮ ಶಿಫಾರಸು (ಮಿನಿಟ್) ಕಡೆಗಣಿಸಿ ವರ್ಗಾವಣೆ ಪಟ್ಟಿ ಸಿದ್ಧಗೊಳಿಸಿದ್ದಕ್ಕೆ ಆಡಳಿತ ಪಕ್ಷದ ಶಾಸಕರು ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತ ಕಾಂಗ್ರೆಸ್ ಹುರಿಯಾಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಭಿನ್ನಾಭಿಪ್ರಾಯ ಕಾರಣಕ್ಕೆ ವರ್ಗಾವಣೆ ಪಟ್ಟಿ ಎರಡ್ಮೂರು ಬಾರಿ ಪರಿಷ್ಕರಣೆ ಸಹ ನಡೆದಿತ್ತು. ಕೊನೆಗೆ ಸಿಎಂ ಸಿದ್ದರಾಮಯ್ಯ ಅವರೇ ಶಾಸಕರ ಜತೆ ಮಾತನಾಡಿ ಸಮಸ್ಯೆ ಪರಿಹರಿಸಿದ್ದರು. ಈಗ ಮತ್ತೆ ಪೊಲೀಸ್ ಇಲಾಖೆ ಸ್ಥಾನ ಬದಲಾವಣೆ ವಿಚಾರ ರಾಜಕೀಯ ಗುದ್ದಾಟಕ್ಕೆ ಎಡೆ ಮಾಡಿಕೊಟ್ಟಿದೆ ಎನ್ನಲಾಗಿದೆ.
ಜಿಬಿಎ ಚುನಾವಣೆಗೆ ಅವಕಾಶ?:
ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಬಳಿಕ ಐದು ಪಾಲಿಕೆಗಳ ಚುನಾವಣೆಗೆ ಸರ್ಕಾರ ಸಿದ್ಧತೆ ನಡೆಸಿದೆ. ಹೀಗಾಗಿ ಈ ಚುನಾವಣೆ ಕಾರಣಕ್ಕೆ ಪೊಲೀಸ್ ವರ್ಗಾವಣೆ ಮೇಲೂ ಪ್ರಭಾವ ಬೀರಿದೆ. ತಮ್ಮ ಕ್ಷೇತ್ರಗಳಿಗೆ ತಾವು ಶಿಫಾರಸು (ಮಿನಿಟ್) ಮಾಡಿದ ಪಿಐ-ಎಸಿಪಿಗಳಿಗೆ ಅವಕಾಶ ನೀಡುವಂತೆ ಆಡಳಿತ ಪಕ್ಷದ ಶಾಸಕರು ಹಾಗೂ ನಾಯಕರು ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಜೆಬಿಎ ಚುನಾವಣಾ ಸಾರಥ್ಯ ವಹಿಸಲಿರುವ ಹಿರಿಯ ನಾಯಕರೊಬ್ಬರು ಪೊಲೀಸರ ವರ್ಗಾವಣೆ ವೇಳೆ ತಮ್ಮ ಮಾತಿಗೆ ಮನ್ನಣೆ ನೀಡುವಂತೆ ಆಗ್ರಹಿಸಿದ್ದಾರೆ. ಆದರೆ ಇದಕ್ಕೆ ಮತ್ತಿಬ್ಬರು ನಾಯಕರ ವಿರೋಧ ವ್ಯಕ್ತವಾಗಿದೆ ಎನ್ನಲಾಗಿದೆ.
)
;Resize=(128,128))
;Resize=(128,128))
;Resize=(128,128))
;Resize=(128,128))