ಸಾರಾಂಶ
ಪ್ರಾರಂಭ ನಿರೀಕ್ಷೆ । ಚನ್ನಗಿರಿಯಲ್ಲಿ ಬಸ್ ತಂಗುದಾಣದ ಕಾಮಗಾರಿ ಪೂರ್ಣ । ಧಾರ್ಮಿಕ ಕ್ಷೇತ್ರಗಳಿಗೆ ತೆರಳುವವರಿಗೆ ಅನುಕೂಲ
ಬಾ.ರಾ.ಮಹೇಶ್ ಚನ್ನಗಿರಿ
ಕನ್ನಡಪ್ರಭ ವಾರ್ತೆ ಚನ್ನಗಿರಿಪಟ್ಟಣದ ಹೊರ ವಲಯದ ಅಜ್ಜಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ ಕೆಎಸ್‌ಆರ್‌ಟಿಸಿ ಬಸ್ ಡಿಪೋದ ಕಾಮಗಾರಿ ಕೆಲಸ ಬಹುತೇಕ ಪೂರ್ಣಗೊಂಡಿದ್ದು ಬರುವ ಮಾರ್ಚ್ ತಿಂಗಳ ಒಳಗೆ ಆರಂಭವಾಗಲು ದಿನಗಣನೆ ಆರಂಭವಾಗಿದೆ.
ಚನ್ನಗಿರಿ ತಾಲೂಕು ರಾಜ್ಯದಲ್ಲಿಯೇ ಅತಿದೊಡ್ಡ ತಾಲೂಕು ಕೇಂದ್ರವಾಗಿದ್ದು 61 ಗ್ರಾಮ ಪಂಚಾಯಿತಿಗಳನ್ನು ಹೊಂದಿದೆ. ತಾಲೂಕಿನ ಜನರು ಧರ್ಮಸ್ಥಳ, ತಿರುಪತಿ, ಮಂತ್ರಾಲಯ, ಕೊಲ್ಲೂರು, ಪಾವಗಡ ಇಂತಹ ಧಾರ್ಮಿಕ ಕ್ಷೇತ್ರಗಳಿಗೆ ಹೋಗಲು ಜನರು ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಈ ಪ್ರದೇಶಗಳಿಗೆ ಹೋಗಿ ಅಲ್ಲಿಂದ ಬೇರೆ ಬಸ್ಸುಗಳನ್ನು ಹತ್ತ ಬೇಕಾಗಿತ್ತು. ಈಗ ಈ ಧಾರ್ಮಿಕ ಕ್ಷೇತ್ರಗಳಿಗೆ ನೇರವಾಗಿ ಬಸ್‌ಗಳ ಸೌಲಭ್ಯ ದೊರೆಯಲಿದೆ. ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಕಲಬುರಗಿ, ಮಡಕೇರಿ, ಬೀದರ್ ಇನ್ನು ರಾಜ್ಯದ ಅನೇಕ ಕಡೆಗಳಿಗೆ ನೇರ ಬಸ್ ವ್ಯವಸ್ಥೆ ಆಗಲಿದೆ.ತಾಲೂಕು ಕೇಂದ್ರದಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ಬೇಕು ಎಂಬ ಕೂಗು ಕಳೆದ 4-5 ವರ್ಷಗಳ ಹಿಂದೆ ತಾಲೂಕಿನ ಜನರಿಂದ ಕೇಳಿ ಬಂದ ಹಿನ್ನೆಲೆಯಲ್ಲಿ ಆಗಿನ ಶಾಸಕ ರಾಗಿದ್ದ ಮಾಡಾಳು ವಿರೂಪಾಕ್ಷಪ್ಪ ಪಟ್ಟಣದ ಹೊರ ವಲಯದ ಅಜ್ಜಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರದ 4 ಎಕರೆ ಜಮೀನನ್ನು ಗುರ್ತಿಸಿ, ಮಂಜೂರು ಮಾಡಿಸುವ ಜೊತೆಗೆ 8 ಕೋಟಿ ರು. ಹಣವನ್ನು ಸಹ ಸರ್ಕಾರದಿಂದ ಮಂಜೂರು ಮಾಡಿಸಿದ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಆಗಿನ ಕೆ.ಎಸ್.ಆರ್.ಟಿ.ಸಿ ನಿಗಮದ ಅಧ್ಯಕ್ಷರಾಗಿದ್ದ ಹೊಳಲ್ಕೆರೆಯ ಶಾಸಕ ಚಂದ್ರಪ್ಪ ಇವರನ್ನು ಕರೆಸಿ ಭೂಮಿಪೂಜೆಯನ್ನು ನೆರವೇರಿಸಿದ್ದರು.
ಈ ಡಿಪೋದಲ್ಲಿ ಭದ್ರತಾ ಕೊಠಡಿ, ಟಿಕೇಟ್ ನಗದು ಕೊಠಡಿ, ಡಿಪೋ ವ್ಯವಸ್ಥಾಪಕರ ಕೊಠಡಿ, ಸುಸಜ್ಜಿತ ಗ್ಯಾರೇಜ್, ಡೀಸೆಲ್ ಬಂಕ್, ತೈಲ ಕೊಠಡಿ ಇವೆಲ್ಲವೂ ಸುಸಜ್ಜಿತವಾಗಿ ನಿರ್ಮಾಣಗೊಂಡಿವೆ.ರಾಜ್ಯ ಸರ್ಕಾರದ ಮಹತ್ವಕಾಂಶೆಯ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಇದು ಶಕ್ತಿ ತುಂಬಲಿದ್ದು ತಾಲೂಕಿನ ಬಸ್ಸುಗಳ ಸಂಪರ್ಕವೇ ಇಲ್ಲದಂತಹ ಅನೇಕ ಗ್ರಾಮಾಂತರ ಪ್ರದೇಶಗಳು, ಗ್ರಾಮಗಳಿಗೂ ಬಸ್ಸುಗಳು ಸಂಚರಿಸಲಿವೆ.
ಚನ್ನಗಿರಿಯ ಹೊಸ ಡಿಪೋದಿಂದ 35ರಿಂದ 40 ಬಸ್ಸುಗಳು ಸಂಚಾರ ನಡೆಸಲಿದ್ದು ಕೆಎಸ್‌ಆರ್‌ಟಿಸಿಯ ಸ್ವಂತ ಬಸ್ ನಿಲ್ದಾಣ ಇಲ್ಲದೆ ಇರುವುದರಿಂದ ತಾತ್ಕಾಲಿಕವಾಗಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿಯೇ ಬಸ್ಸುಗಳು ಬಂದು ಹೋಗಲಿವೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.ಈ ಡಿಪೋದ ಸಂಪೂರ್ಣ ಕೆಲಸ ಮುಗಿಯುತ್ತಿದ್ದಂತೆಯೇ ಕ್ಷೇತ್ರದ ಶಾಸಕ ಬಸವರಾಜ ವಿ.ಶಿವಗಂಗಾ, ಜಿಲ್ಲಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಾರಿಗೆ ಸಚಿವರಿಂದ ಉದ್ಘಾಟನೆಯ ದಿನಾಂಕವನ್ನು ನಿಗದಿಪಡಿಸಿಕೊಂಡು ಶೀಘ್ರದಲ್ಲಿಯೇ ಡಿಪೋದ ಲೋಕಾರ್ಪಣೆ ಆಗಲಿದೆ ಎಂದು ಹೇಳಿದ್ದಾರೆ.