ಸಾರಾಂಶ
ತೊಟ್ಟಿಲು ತೂಗುವ ಕೈಗಳು ದೇಶವನ್ನು ಮುನ್ನಡೆಸುತ್ತವೆ ಎಂಬ ಘೋಷಣೆಯೊಂದಿಗೆ ಸಾವಿತ್ರಿಬಾಯಿ ಫುಲೆ ಅವರು ಮಹಿಳಾ ಶಿಕ್ಷಣ ವ್ಯವಸ್ಥೆ ಜಾರಿಗಾಗಿ ಸಾಕಷ್ಟು ಹೋರಾಟ ಮಾಡಿದರು. ಪ್ರತಿ ವರ್ಷ ಫುಲೆ ಅವರ ಜನ್ಮದಿನವನ್ನು ಶಿಕ್ಷಕಿಯರ ದಿನವನ್ನಾಗಿ ಆಚರಿಸಿದಲ್ಲಿ ಹೆಚ್ಚಿನ ಅರ್ಥ ಸಿಗಲಿದೆ .
ಕನ್ನಡಪ್ರಭ ವಾರ್ತೆ ಮೈಸೂರು
ಕೆಲ ವರ್ಗಕ್ಕೆ ಮಾತ್ರ ಸೀಮಿತವಾಗಿದ್ದ ಶಿಕ್ಷಣವನ್ನು ಸರ್ವರಿಗೂ ಸಿಗುವಂತೆ ಮಾಡಿದ ಕೀರ್ತಿ ಸಾವಿತ್ರಿಬಾಯಿ ಫುಲೆ ಅವರಿಗೆ ಸಲ್ಲುತ್ತದೆ. ಇದಕ್ಕಾಗಿ ಅವರು ಪಟ್ಟ ಶ್ರಮ ಸ್ಮರಣೀಯ ಎಂದು ಹಿರಿಯ ಸಮಾಜ ಸೇವಕ ಕೆ. ರಘುರಾಂ ತಿಳಿಸಿದರು.ನಗರದ ಚಾಮರಾಜಪುರಂನ ವಿಷ್ಣುವರ್ಧನ ರಸ್ತೆಯಲ್ಲಿ ಶ್ರೀ ದುರ್ಗಾ ಫೌಂಡೇಶನ್ ಆಯೋಜಿಸಿದ್ದ ಮಹಿಳಾ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಜಯಂತಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆ ಆರಂಭಿಸುವ ಮೂಲಕ ಮಹಿಳಾ ಶಿಕ್ಷಣ ಪದ್ಧತಿಗೆ ಸಾವಿತ್ರಿಬಾಯಿ ಫುಲೆ ಮುನ್ನುಡಿ ಬರೆದರು ಎಂದರು.
ಮಹಿಳೆಯರನ್ನು ಅಡುಗೆ ಮನೆಗೆ ಸೀಮಿತ ಮಾಡಿದ ಕಾಲದಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ಪರಿಣಾಮ ಇಂದು ಮಹಿಳೆಯರು ಎಲ್ಲಾ ರಂಗಗಳಲ್ಲಿ ಸಾಧನೆ ಮಾಡಲು ಕಾರಣವಾಗಿದೆ ಎಂದರು.ಸಮುದಾಯ ಕಲಿಕಾ ಕೇಂದ್ರದ ಶಿಕ್ಷಕ ಸತೀಶ್ ಮೇತ್ರಿ ಮಾತನಾಡಿ, ತೊಟ್ಟಿಲು ತೂಗುವ ಕೈಗಳು ದೇಶವನ್ನು ಮುನ್ನಡೆಸುತ್ತವೆ ಎಂಬ ಘೋಷಣೆಯೊಂದಿಗೆ ಸಾವಿತ್ರಿಬಾಯಿ ಫುಲೆ ಅವರು ಮಹಿಳಾ ಶಿಕ್ಷಣ ವ್ಯವಸ್ಥೆ ಜಾರಿಗಾಗಿ ಸಾಕಷ್ಟು ಹೋರಾಟ ಮಾಡಿದರು. ಪ್ರತಿ ವರ್ಷ ಫುಲೆ ಅವರ ಜನ್ಮದಿನವನ್ನು ಶಿಕ್ಷಕಿಯರ ದಿನವನ್ನಾಗಿ ಆಚರಿಸಿದಲ್ಲಿ ಹೆಚ್ಚಿನ ಅರ್ಥ ಸಿಗಲಿದೆ ಎಂದರು.
ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಶ್ರೀದುರ್ಗಾ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಕೆ.ಆರ್. ಬ್ಯಾಂಕ್ ಅಧ್ಯಕ್ಷ ಬಸವರಾಜ್, ಶಿಕ್ಷಕಿ ಸುಶೀಲ ರಾವ್, ಮುಖಂಡರಾದ ಅಜಯ್ ಶಾಸ್ತ್ರಿ, ಸುಚಿಂದ್ರ, ಜಿ. ರಾಘವೇಂದ್ರ, ಮಹಾನ್ ಶ್ರೇಯಸ್, ಮಂಜುನಾಥ್ ಮೊದಲಾದವರು ಇದ್ದರು.