ಬಾಣಂತಿಯರ ಸರಣಿ ಸಾವು: ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

| Published : Jan 05 2025, 01:32 AM IST

ಸಾರಾಂಶ

ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಖಂಡಿಸಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಶನಿವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಹಾವೇರಿ: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಖಂಡಿಸಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಶನಿವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೋಭಾ ನಿಸ್ಸಿಮಗೌಡ್ರ ಮಾತನಾಡಿ, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಈವರೆಗೂ ಒಟ್ಟು 348 ಬಾಣಂತಿಯರು ಹಾಗೂ 500 ನವಜಾತ ಶಿಶುಗಳು ಸಾವನ್ನಪ್ಪಿವೆ. ಇದಕ್ಕೆ ಮುಖ್ಯ ಕಾರಣ ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಮತ್ತು ಶಿಶುಗಳಿಗೆ ಸರಿಯಾದ ಸೌಲಭ್ಯಗಳು ಸಿಗದಿರುವುದು ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಕೊಡುತ್ತಿರುವ ಕಳಪೆ ಗುಣಮಟ್ಟದ ಔಷಧಿಗಳು. ಕೇಂದ್ರ ಸರ್ಕಾರ ನೀಡಿದ ಸೌಲಭ್ಯಗಳಾದ ಜನನಿ ಸುರಕ್ಷಾ ಯೋಜನೆ, ಶಿಶು ಸುರಕ್ಷಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ, ಮಾತೃ ವಂದನ ಯೋಜನೆ, ಪೋಷಣ ಅಭಿಯಾನ ಇತ್ಯಾದಿ ಯೋಜನೆಗಳನ್ನು ರಾಜ್ಯ ಸರ್ಕಾರ ನೀಡುತ್ತಿಲ್ಲ ಎಂದು ದೂರಿದರು. ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸೃಷ್ಟಿ ಪಾಟೀಲ ಮಾತನಾಡಿ, ರಾಜ್ಯದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸಿಬ್ಬಂದಿಗಳ ಕೊರತೆಯಿಂದ ಪಿಎಚ್‌ಸಿಗಳು ಸೊರಗುತ್ತಿವೆ. ಅಂಬುಲೆನ್ಸ್ ಚಾಲಕರಿಗೆ ಸರ್ಕಾರ ಸರಿಯಾಗಿ ಸಂಬಳ ನೀಡುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಐ.ಸಿ.ಯು, ಬ್ಲಡ್ ಬ್ಯಾಂಕ್, ತರಬೇತಿ ಹೊಂದಿದ ಸಿಬ್ಬಂದಿ ಕೊರತೆ ಇದ್ದು, ಈ ಕಾರಣಗಳಿಂದ ಬಾಣಂತಿಯರ ಮತ್ತು ಶಿಶುಗಳ ಸಾವು ಹೆಚ್ಚುತ್ತಿದೆ. ಇದನ್ನು ಮುಖ್ಯಮಂತ್ರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯ ಸಚಿವರು ಗಂಭೀರವಾಗಿ ಪರಿಗಣಿಸಿ ಸಾವನ್ನಪ್ಪಿದ ಬಾಣಂತಿಯರ ಹಾಗೂ ನವಜಾತ ಶಿಶುಗಳ ಕುಟುಂಬಕ್ಕೆ 25 ಲಕ್ಷ ರು., ಪರಿಹಾರ ಹಣ ನೀಡಬೇಕು, ಅನಾಥ ಮಕ್ಕಳಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಸಂತೋಷ ಆಲದಕಟ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ರಾಜೇಶ್ವರಿ ಬಿಷ್ಠನಗೌಡ್ರ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲಲಿತಾ ಗುಂಡೇನಹಳ್ಳಿ, ವಿದ್ಯಾ ಶೆಟ್ಟಿ, ಸುಜಾತಾ ಆರಾಧ್ಯಮಠ, ಸರೋಜಾ ವಳ್ಳಾಗಡ್ಡಿ, ಉಷಾ ಬಿಳೆಕುದರಿ, ಇಂದಿರಾ ಪುಟ್ಟನಗೌಡ್ರ, ಶಿಲ್ಪಾ ಮರಳಪ್ಪನವರ, ಲತಾ ಬಡ್ನಿಮಠ ಮತ್ತು ಮಹಿಳಾ ಕಾರ್ಯರ್ತರಾದ ಪುಷ್ಪಾ ಚಕ್ರಸಾಲಿ, ಚನ್ನಮ್ಮ ಗುರುಪಾದಮಠ, ಲಕ್ಷ್ಮಿ ತೋಟದ, ರತ್ನಾ ಬನ್ನಿಕೊಪ್ಪ, ವೀಣಾ ಹಿರೇಮಠ, ಭಾಗ್ಯಶ್ರೀ ಮೋರೆ, ಶ್ರೀದೇವಿ ರೆಡ್ಡಿ, ಅನಿತಾ ಹಬಿಬ, ರಾಮಕ್ಕ ಮುತ್ತಳ್ಳಿ, ಕಲಾವತಿ ಬಡಿಗೇರ, ಗಾಯಿತ್ರಿ ರಾಯ್ಕರ, ಲಲಿತಾ ಕುಬಸದ, ಅಕ್ಷತಾ ಮಾಳಗಿಮನಿ, ಮಮತಾ ಕಟ್ಟೆಪ್ಪನವರ, ಸರೋಜಾ, ಪಾರ್ವತಿ, ಗೀತಾ, ಲೀಲಾ, ಸುಮಾ, ಜಗದೀಶ ಕನವಳ್ಳಿ, ಶಿವಬಸವ ಚೌಶೆಟ್ಟಿ, ಶಂಭು ಹತ್ತಿ, ಫಕ್ಕಿರೇಶ ಹಾವನೂರ ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.