ಕುಂದಾಪುರ: ಶೆಟ್ರಕಟ್ಟೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಬೆಳವಣಿಗೆಯಲ್ಲಿ ಕಂಡ್ಲೂರಿನ ಕುಂದಾಪುರ ಗ್ರಾಮಾಂತರ ಠಾಣೆಯ ಪಿಎಸ್ಐ ನಾಸಿರ್ ಹುಸೇನ್ ಅವರನ್ನು ಅಜೆಕಾರು ಪೊಲೀಸ್ ಠಾಣೆಗೆ ಅನ್ಯ ಕರ್ತವ್ಯದ ಮೇಲೆ ನಿಯೋಜನೆಯ ಮಾಡಿ ಜಿಲ್ಲಾ ಎಸ್ಪಿ ಹರಿರಾಮ್ ಶಂಕರ್ ಮಂಗಳವಾರ ರಾತ್ರಿ ಆದೇಶಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಯ ಬೀಟ್ ಪೊಲೀಸ್ ಯಾದವ್ ಅವರನ್ನು ಅಮಾನತುಗೊಳಿಸಲಾಗಿದೆ.

ನಿಯಮ ಮೀರಿ ಮಣ್ಣು ತುಂಬಿಸಿ, ನಿರ್ಲಕ್ಷದ ಸಾಗಾಟ ನಡೆಸಿ 14ಕ್ಕೂ ಹೆಚ್ಚು ಮಂದಿ ಬಸ್ ಪ್ರಯಾಣಿಕರು ಗಾಯಾಳುಗಳಾಗಿ ಆಸ್ಪತ್ರೆಗೆ ಸೇರಲು ಕಾರಣವಾಗಿತ್ತು.ಗ್ರಾಮಾಂತರ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಜವಾಬ್ದಾರಿಯನ್ನು ಶಂಕರನಾರಾಯಣದ ಕುಂದಾಪುರ ಗ್ರಾಮಾಂತರ ವೃತ್ತದ ಸಿಪಿಐ ಸಂತೋಷ್ ಕಾಯ್ಕಿಣಿ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ಜಿಲ್ಲಾ ಎಸ್ಪಿ ಹರಿರಾಮ್ ಶಂಕರ್ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಚಾರ ಖಚಿತಪಡಿಸಿದ್ದಾರೆ. ಸೋಮವಾರ ಸಂಜೆ ಗುಲ್ವಾಡಿ ಗ್ರಾಮದ ಶೆಟ್ರಕಟ್ಟೆ ಎಂಬಲ್ಲಿ ಕುಂದಾಪುರದಿಂದ ಆಜ್ರಿಗೆ ತೆರಳುತ್ತಿದ್ದ ಸರ್ಕಾರಿ ಬಸ್ ಗೆ ವಿರುದ್ದ ದಿಕ್ಕಿನಿಂದ ಬಂದಿದ್ದ ಕೇರಳ ರಾಜ್ಯ ಪರವಾನಗಿಯ ಟಿಪ್ಪರ್ ವೇಗವಾಗಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಚಾಲಕನ ನಿರ್ಲಕ್ಷ, ಮಣ್ಣು ಸಾಗಾಟ ಹಾಗೂ ಟಿಪ್ಪರ್ ದಾಖಲೆಯ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಕರಣದ ಪ್ರಮುಖ ಆರೋಪಿ ಟಿಪ್ಪರ್ ಚಾಲಕ ಬಿದ್ಕಲ್ ಕಟ್ಟೆ ನಿವಾಸಿ ರಾಘವೇಂದ್ರ ಸದ್ಯ ಕುಂದಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಪೊಲೀಸ್ ಇಲಾಖೆ ಆತನ ಮೇಲೆ ನಿಗಾ ಇರಿಸಿದೆ. ಮಣ್ಣು ಸಾಗಾಟ ಗುತ್ತಿಗೆದಾರ ಬಳ್ಕೂರಿನ ಶ್ರೀಧರ್ ಅವರನ್ನು ಮಂಗಳವಾರ ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಲಾಗಿದ್ದು, ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಟಿಪ್ಪರ್ ಮಾಲಕಿ ಸುಮಾ ಅವರ ಮೇಲೂ ಪ್ರಕರಣ ದಾಖಲಾಗಿದೆ.ಮಾಮೂಲಿ ಅಪಘಾತ ಸೆಕ್ಷನ್‌ಗಳಲ್ಲದೆ, 110, 303(2) ಬಿಎನ್ ಎಸ್ ಮತ್ತು 4(1ಎ), 21(4) ಎಮ್ಎಮ್ಆರ್ಡಿ ಕಾಯ್ದೆ ಮತ್ತು 183, 146,192,182 ಐಎಮ್ ವಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕುಂದಾಪುರ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಅಮಾಸೆಬೈಲು, ಬೈಂದೂರು, ಕುಂದಾಪುರ, ಕೊಲ್ಲೂರು, ಶಂಕರನಾರಾಯಣ ಮುಂತಾದ ಕಡೆಯಲ್ಲಿ ಜನಾನುರಾಗಿ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಎಸ್ಐ ನಾಸಿರ್ ಹುಸೇನ್ ಇತ್ತೀಚೆಗಷ್ಟೇ ಕಂಡ್ಲೂರಿನ ಗ್ರಾಮಾಂತರ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪನಿರೀಕ್ಷಕರಾಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ ಅವರ ಹಠಾತ್ತ್ ವರ್ಗಾವಣೆಯಾಗಿದೆ.