ಮೊಬೈಲ್, ಟಿವಿ, ದುಶ್ಚಟಗಳಿಗೆ ಬಲಿಯಾಗುವ ಈ ದಿನಗಳಲ್ಲಿ ಭಜನೆಯ ಮೂಲಕ ಸಂಘವು ಅನೇಕ ಯುವಕರನ್ನು ಆಧ್ಯಾತ್ಮದತ್ತ ಕೊಂಡೊಯ್ಯುತ್ತಿದೆ.
ಎಂ. ಪ್ರಹ್ಲಾದ್ ಕನಕಗಿರಿ
ಭಜನೆಯ ಮೂಲಕ ದಾಸ ಸಾಹಿತ್ಯ ಪಸರಿಸುತ್ತಿರುವ ಸ್ಥಳೀಯ ಶ್ರೀ ರಾಘವೇಂದ್ರಸ್ವಾಮಿ ಭಜನಾ ಮಂಡಳಿಯು ಸಂಕ್ರಾಂತಿ ಅಂಗವಾಗಿ ಮಂತ್ರಾಲಯದ ಪಾದಯಾತ್ರೆಗೆ 25 ವರ್ಷಗಳು ತುಂಬಿದ್ದು, ಪ್ರಸಕ್ತ ವರ್ಷ ರಜತ ಮಹೋತ್ಸವ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.ಮೊಬೈಲ್, ಟಿವಿ, ದುಶ್ಚಟಗಳಿಗೆ ಬಲಿಯಾಗುವ ಈ ದಿನಗಳಲ್ಲಿ ಭಜನೆಯ ಮೂಲಕ ಸಂಘವು ಅನೇಕ ಯುವಕರನ್ನು ಆಧ್ಯಾತ್ಮದತ್ತ ಕೊಂಡೊಯ್ಯುತ್ತಿದೆ. ೨೦೦೨ರಲ್ಲಿ ಆರಂಭಗೊಂಡಿರುವ ಶ್ರೀಕ್ಷೇತ್ರ ಮಂತ್ರಾಲಯ ಪಾದಯಾತ್ರೆಗೆ ವಯಸ್ಸಿನ ಮಿತಿ ಇಲ್ಲದೆ ಸ್ಪಂದಿಸುತ್ತಾ ಬಂದಿದ್ದಾರೆ.
೧೫೫ ಕಿಮೀ ದೂರದ ಮಂತ್ರಾಲಯದ ರಾಯರ ಸನ್ನಿಧಾನವನ್ನು ೪ ದಿನಗಳಲ್ಲಿ ತಲುಪಲಾಗುತ್ತದೆ. ಬೆರಳೆಣಿಕೆ ಭಕ್ತರಿಂದ ಆರಂಭವಾದ ಈ ಪಾದಯಾತ್ರೆಗೆ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಾ ಸಾಗಿದ್ದು, ಇದೀಗ ನೂರಕ್ಕೂ ಹೆಚ್ಚು ಭಕ್ತರು ಪಾದಯಾತ್ರೆಯ ಮೂಲಕ ರಾಯರ ಮಠ ತಲುಪಿ ಮಕರ ಸಂಕ್ರಮಣದ ಉತ್ತರಾಯಣ ಪುಣ್ಯಕಾಲದಂದು (ಜ.೧೫) ತುಂಗಾ ನದಿಯಲ್ಲಿ ಮಿಂದೆದ್ದು, ರಾಯರ ದರ್ಶನ ಪಡೆಯಲಿದ್ದಾರೆ.ಭಕ್ತರಿಂದ ಪ್ರಸಾದ ವ್ಯವಸ್ಥೆ: ಯಾತ್ರೆ ತೆರಳುವ ಭಕ್ತರಿಗೆ ಆರಂಭದ ದಿನದಿಂದ ೩ ದಿನಗಳವರೆಗೆ ಮಾರ್ಗ ಮಧ್ಯೆ ಭಕ್ತರು ಊಟೋಪಚಾರ ಒದಗಿಸುತ್ತಾ ಬಂದಿದ್ದಾರೆ. ಮೈಲಾಪುರ, ಸಿಂಧನೂರು ತಾಲೂಕಿನ ಜಾಲಿಹಾಳ ಗ್ರಾಮ, ರವಡಕುಂದಾದ ರಂಗನಾಥ ಸ್ವಾಮಿ ಅರ್ಚಕರ ಮನೆ, ದಢೇಸ್ಗೂರು ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನ, ಆಂಧ್ರಪ್ರದೇಶದ ಬುಡಮಲದೊಡ್ಡಿ ಆಂಜನೇಯಸ್ವಾಮಿ ದೇವಸ್ಥಾನ ಹೀಗೆ ನಾಲ್ಕಾರು ಕಡೆಗಳಲ್ಲಿ ಉಪಹಾರ, ಭೋಜನದ ವ್ಯವಸ್ಥೆ ಆಯಾ ಗ್ರಾಮಗಳ ಭಕ್ತರು ಮಾಡಿರುತ್ತಾರೆ.
ಕಲಾವಿದರ ಸನ್ಮಾನಕ್ಕೆ ನಿರ್ಧಾರ: ತತ್ವ, ಭಜನಾ, ದಾಸ ಸಾಹಿತ್ಯ, ಬಯಲಾಟ ಹಾಗೂ ಹಾರ್ಮೋನಿಯಂ ಸೇವೆ ಸಲ್ಲಿಸಿದ ೫೦ ಜನ ಹಿರಿಯ ಕಲಾವಿದರಿಗೆ ಬೆಳ್ಳಿ ಮಹೋತ್ಸವದ ಹಿನ್ನೆಲೆಯಲ್ಲಿ ಸನ್ಮಾನಿಸಲು ಸಂಘವು ನಿರ್ಧರಿಸಿದ್ದು, ಮಂತ್ರಾಲಯದಿಂದ ಮರಳಿದ ಬಳಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಅಲ್ಲದೇ ಸಂಕ್ರಾಂತಿ ದಿನದಂದು ಮಂತ್ರಾಲಯದಲ್ಲಿ ಸಾವಿರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಮಾಡಿಕೊಂಡಿದೆ.ಸೌಹಾರ್ದತೆಯ ಪಾದಯಾತ್ರೆ: ಜಾತಿ, ಧರ್ಮ, ಲಿಂಗ ಬೇಧವಿಲ್ಲದೇ ಮಂತ್ರಾಲಯ ಪಾದಯಾತ್ರೆಯಲ್ಲಿ ಭಕ್ತರು ಪ್ರತಿ ವರ್ಷ ಪಾಲ್ಗೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಮುಸ್ಲಿಂ ಸಮುದಾಯದ ಯುವಕರು ಭಜನೆಯೊಂದಿಗೆ ಮಂತ್ರಾಲಯಕ್ಕೆ ಪಾದಯಾತ್ರೆಯ ಮೂಲಕ ತೆರಳಿ ತುಂಗಾನದಿಯ ಪುಣ್ಯ ಸ್ನಾನದ ಜತೆಗೆ ರಾಯರ ದರ್ಶನ ಪಡೆದು ಕೋಮು ಸೌಹಾರ್ಧತೆ ಮೆರೆಯುತ್ತಿದ್ದಾರೆ.
ದಾಸರ ಆರಾಧನೆ, ಪ್ರತಿ ಗುರುವಾರಕ್ಕೊಮ್ಮೆ ನಡೆಯುವ ರಾಯರ ಭಜನಾ ಸೇವೆ. ಕಾರ್ತಿಕ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜನರಲ್ಲಿ ದಾಸ ಸಾಹಿತ್ಯ ಪಸರಿಸುವ ಕಾಯಕ ನಿರಂತರವಾಗಿ ಮಾಡುತ್ತಿದ್ದೇವೆ. ದಾಸರ ಕೀರ್ತನೆ ಹಾಗೂ ಭಕ್ತಿ ಮಾರ್ಗದ ಮೂಲಕ ರಾಯರನ್ನು ಕಾಣುವ ಪ್ರಯತ್ನ ಕಳೆದ ೨೫ ವರ್ಷಗಳಿಂದ ಆಗುತ್ತಿದೆ ಎಂದು ಭಕ್ತ ಪರಂಧಾಮರೆಡ್ಡಿ ಬೀರಳ್ಳಿ ತಿಳಿಸಿದ್ದಾರೆ.