ಆನಂದಪುರ ಕಡ್ಲೆ ಹಂಕ್ಲು ಮಾರಿಕಾಂಬ ಜಾತ್ರೆಯಲ್ಲಿ ಯಾವುದೇ ರೀತಿಯ ಮೂಲ ಸೌಕರ್ಯಗಳ ಕೊರತೆ ಉಂಟಾಗದಂತೆ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸೂಚಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಆನಂದಪುರ ಕಡ್ಲೆ ಹಂಕ್ಲು ಮಾರಿಕಾಂಬ ಜಾತ್ರೆಯಲ್ಲಿ ಯಾವುದೇ ರೀತಿಯ ಮೂಲ ಸೌಕರ್ಯಗಳ ಕೊರತೆ ಉಂಟಾಗದಂತೆ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸೂಚಿಸಿದರು.

ಅವರು ಆನಂದಪುರದ ಇತಿಹಾಸ ಪ್ರಸಿದ್ಧವಾದ ಕಡ್ಲೆ ಹಂಕ್ಲು ಮಾರಿಕಾಂಬ ದೇವಿಯ ಜಾತ್ರೆ ಮಾರ್ಚ್ 10 ರಿಂದ 16ರವರೆಗೆ ನಡೆಯುವ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ನಡೆದ ಅಧಿಕಾರಿಗಳು ಹಾಗೂ ಜಾತ್ರಾ ಸಮಿತಿ ಅವರೊಂದಿಗೆ ನಡೆಸಿದ ಜಾತ್ರಾ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿ, 7 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಆನಂದಪುರ, ಯಡೇಹಳ್ಳಿ, ಆಚಾಪುರ, ಗೌತಮ ಪುರ ಹೊಸೂರು ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿನ ಭಕ್ತರು ಹಾಗೂ ಗ್ರಾಮಸ್ಥರಿಗೆ ಜಾತ್ರೆ ಮುಗಿಯುವವರೆಗೆ ಸಮರ್ಪಕವಾಗಿ ವಿದ್ಯುತ್ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಮೂರು ವರ್ಷಕ್ಕೊಮ್ಮೆ ನಡೆಯುವ ಕಡ್ಲೆ ಹಂಕ್ಲು ಮಾರಿಕಾಂಬ ದೇವಿ ಜಾತ್ರೆಗೆ ಪಟ್ಟಣದ ಪ್ರತಿಯೊಂದು ವಾರ್ಡ್‌ಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಚರಂಡಿಗಳನ್ನು ಹಾಗೂ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೂ ಸ್ವಚ್ಛತೆಗೊಳಿಸಬೇಕು. ಹೆಚ್ಚಿನ ಬೀದಿ ದೀಪಗಳನ್ನು ಅಳವಡಿಕೆ ಮಾಡಬೇಕು. ಎಲ್ಲಾ ವ್ಯವಸ್ಥೆಯನ್ನು ಸಾಗರ ತಾಲೂಕು ಅಧಿಕಾರಿಗಳು ಸ್ಥಳದಲ್ಲೇ ನಿಂತು ಕಾರ್ಯವನ್ನು ಮೇಲ್ವಿಚಾರಣೆ ಮಾಡಬೇಕು ಎಂದು ಸೂಚಿಸಿದರು. ಜಾತ್ರಾ ಸಮಿತಿಯವರು ಗ್ರಾಮ ಆಡಳಿತದ ಸಹಕಾರದೊಂದಿಗೆ ಜಾತ್ರೆಯಲ್ಲಿ ಪ್ರತಿದಿನ ಸ್ವಚ್ಛತೆ ಮಾಡಿಸಲು ಹೆಚ್ಚಿನ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು ಎಂದು ತಿಳಿಸಿದರು.

ಪ್ರತಿದಿನ ಜಾತ್ರೆಗೆ 25 ರಿಂದ 30 ಸಾವಿರ ಜನರು ಆಗಮಿಸುವ ನಿರೀಕ್ಷೆ ಇರುವುದರಿಂದ ಟ್ರಾಫಿಕ್ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಪೊಲೀಸ್ ಇಲಾಖೆ ವಿಶೇಷ ಗಮನಹರಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು, ರಕ್ಷಣಾ ದೃಷ್ಟಿಯಿಂದ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಿಕೊಳ್ಳಬೇಕೆಂದು ಪಿಎಸ್ಐ ಪ್ರವೀಣ್ ಅವರಿಗೆ ತಿಳಿಸಿದರು.

ಜಾತ್ರೆಯ ಸುತ್ತಮುತ್ತಲಿನಲ್ಲಿ ಹೆಚ್ಚಿನ ಸಿಸಿ ಕ್ಯಾಮೆರಾ ಹಾಗೂ ವಿದ್ಯುತ್ ದೀಪಗಳನ್ನು ಅಳವಡಿಸಿ ಕಳ್ಳತನ ಹಾಗೂ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ಕೆಲಸ ಮಾಡಬೇಕು. ಅಲ್ಲದೆ ಜಾತ್ರೆಯಲ್ಲಿ ಯಾವುದೇ ರೀತಿಯ ಜೂಜಾಟಕ್ಕೆ ಅವಕಾಶ ಕೊಡಬಾರದು ಎಂದು ಸಮಿತಿ ಅವರಿಗೆ ಎಚ್ಚರಿಸಿದರು.

ಜಾತ್ರೆ ಅವಧಿಯಲ್ಲಿ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಿ, ಎರಡು ಆ್ಯಂಬುಲೆನ್ಸ್‌ಗಳನ್ನು ಜಾತ್ರೆಗೆ ಮೀಸಲಿಡಬೇಕು. ಪೊಲೀಸ್ ಚೌಕಿ ನಿರ್ಮಾಣ ಹಾಗೂ ಮೊಬೈಲ್ ಶೌಚಾಲಯಗಳ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಬೇಕು.

ಮಾರಿಕಾಂಬ ಜಾತ್ರೆಯಲ್ಲಿ ಯಾವುದೇ ರೀತಿಯ ಕುಂದುಕೊರತೆಗಳು ಉಂಟಾಗದಂತೆ ಎಲ್ಲಾ ಅಧಿಕಾರಿಗಳು ಏಳು ದಿನಗಳ ಕಾಲ ಕಡ್ಡಾಯವಾಗಿ ಜಾತ್ರಾ ಸ್ಥಳದಲ್ಲೇ ಹಾಜರಿದ್ದು, ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಹೇಳಿದರು.

ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಸಾಗರ ಇ.ಓ ಶಿವಪ್ರಕಾಶ್, ಉಪ ತಹಸೀಲ್ದಾರ್ ಶಾಂತಮೂರ್ತಿ, ಪಿಡಿಒ ವಾಣಿ, ಜಾತ್ರಾ ಸಮಿತಿ ಅಧ್ಯಕ್ಷ ವೆಂಕಟೇಶ್, ಪಕ್ಷದ ಮುಖಂಡರು, ಸಾರ್ವಜನಿಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.