ಕನ್ನಡಪ್ರಭ ವಾರ್ತೆ ದೇವನಹಳ್ಳಿ

ಪಟ್ಟಣದ ಖಾಸಗಿ ವಸತಿಶಾಲೆಯೊಂದರಲ್ಲಿ ಓರ್ವ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ, ಮತ್ತೋರ್ವ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ ನಡೆಸಿರುವ ಆರೋಪದಲ್ಲಿ ಶಾಲೆಯ ಸಂಸ್ಥಾಪಕ ಧನಂಜಯ ಹಾಗೂ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಆರೋಪದಲ್ಲಿ ಆರೋಪಿ ಪತ್ನಿ, ಶಾಲೆಯ ಪ್ರಾಂಶುಪಾಲರಾದ ಶೈಲಜಾ ಎಂಬುವರ ವಿರುದ್ಧ ದೇವನಹಳ್ಳಿ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು ಇಬ್ಬರನ್ನೂ ಬಂಧಿಸಲಾಗಿದೆ.

ಫೆ.೯ ರಂದು ಪ್ರಕರಣ:

ಬೆಂಗಳೂರು ಮೂಲದ ಅಕ್ಕ ತಂಗಿಯಾಗಿರುವ ಇಬ್ಬರು ವಿದ್ಯಾರ್ಥಿನಿಯರು ವಸತಿ ಶಾಲೆಯಲ್ಲಿ ೭ ಹಾಗೂ ೮ ನೇ ತರಗತಿಯಲ್ಲಿ ಓದುತ್ತಿದ್ದರು. ಫೆ.೯ರಂದು ಆರೋಪಿ ಧನಂಜಯ ಪುಸಲಾಯಿಸಿ ಅದೇ ಶಾಲೆಯ ಕೊಠಡಿಯೊಂದರಲ್ಲಿ ಅಕ್ಕನ ಮೇಲೆ ಎರಡು ಬಾರಿ ಅತ್ಯಾಚಾರ ಎಸಗಿದ್ದಾನೆ. ನಂತರ ತಂಗಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಆ ವಿದ್ಯಾರ್ಥಿನಿ ತಪ್ಪಿಸಿಕೊಂಡು ಬಾತ್ ರೂಮಿನಲ್ಲಿ ಅವಿತುಕೊಂಡಿದ್ದರಿಂದ ಬಚಾವಾಗಿದ್ದಾಳೆ. ನಂತರ ಮತ್ತೆ ಅಕ್ಕನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪತ್ನಿಯಿಂದ ಪ್ರಕರಣ ಮುಚ್ಚಿಹಾಕಲು ಯತ್ನ:


ಅತ್ಯಾಚಾರ ಪ್ರಕರಣವನ್ನು ಮುಚ್ಚಿಹಾಕಲು ಆರೋಪಿಯ ಪತ್ನಿ ಶೈಲಜಾ ಯತ್ನಿಸಿದ್ದಾಳೆ. ಸಂತ್ರಸ್ಥ ವಿದ್ಯಾರ್ಥಿನಿಯೊಬ್ಬಳಿಗೆ ವಾರಗಟ್ಟಲೆ ಪರಂಗಿ ಕಾಯಿಗಳನ್ನು ಬಲವಂತವಾಗಿ ತಿನ್ನಿಸಿ ಗರ್ಭ ಧರಿಸದಂತೆ ನೋಡಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಎಸ್ಸೆಸ್ಸೆಲ್ಸಿವರೆಗೆ ಯಾವುದೇ ಶುಲ್ಕ ಪಡೆಯುವುದಿಲ್ಲ, ಮುಂದೆ ಚೆನ್ನಾಗಿ ಓದಿಸುತ್ತೇವೆ ಎಂದು ಆಮಿಷವೊಡ್ಡುವ ಪ್ರಯತ್ನ ಮಾಡಿದ್ದಾಳೆ. ಜತೆಗೆ ಯಾರಿಗಾದರೂ ವಿಷಯ ತಿಳಿಸಿದರೆ ನಿಮ್ಮನ್ನು ಅನುತ್ತೀರ್ಣಗೊಳಿಸುತ್ತೇವೆ ಎಂದು ಬೆದರಿಕೆಯೊಡ್ಡಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿರುವ ಆರೋಪ ಕೇಳಿಬಂದಿದೆ.

ಪಾಲಕರಿಗೆ ವಿಷಯ ತಿಳಿಸಿದ ಮಕ್ಕಳು:

ವಿದ್ಯಾರ್ಥಿನಿಯರ ಪಾಲಕರು ಶಾಲೆಗೆ ಬಂದು ಮಕ್ಕಳನ್ನು ಭೇಟಿ ಮಾಡಲೇಬೇಕೆಂದು ಒತ್ತಾಯ ಮಾಡಿದಾಗ ಐದು ನಿಮಿಷ ಮಾತನಾಡಲು ಅವಕಾಶ ಮಾಡಿಕೊಡಲಾಗಿದೆ. ಈ ವೇಳೆ ಮಕ್ಕಳು ನಡೆದ ಘಟನೆ ಬಗ್ಗೆ ಅಳುತ್ತಾ ಪಾಲಕರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ದೇವನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಪಾಲಕರ ಭೇಟಿಗೆ ನಿರಾಕರಣೆ:

ಪ್ರಕರಣ ನಡೆದ ದಿನದಿಂದ ಮಕ್ಕಳಿಬ್ಬರು ಪಾಲಕರನ್ನು ಭೇಟಿಯಾಗದಂತೆ ನೋಡಿಕೊಳ್ಳಲಾಗಿದೆ, ಪಾಲಕರ ಪೋನ್ ಕರೆಗೂ ಮಕ್ಕಳು ಸಿಗದಂತೆ ಅಡ್ಡಿಪಡಿಸಲಾಗಿದೆ. ಪ್ರವಾಸಕ್ಕೆ ಕಳುಹಿಸಿದ್ದೇವೆ, ಪರೀಕ್ಷೆಗಾಗಿ ಓದುತ್ತಿದ್ದಾರೆ ಎಂದು ಕಾರಣ ನೀಡಿ ಪಾಲಕರೊಂದಿಗೆ ಮಕ್ಕಳ ಸಂಪರ್ಕ ಸಿಗದಂತೆ ಮಾಡಲಾಗಿದೆ ಎಂದು ವಿದ್ಯಾರ್ಥಿನಿಯರ ಪಾಲಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕೊಠಡಿಗೆ ಬೀಗ ಇಲ್ಲ:

ವಿದ್ಯಾರ್ಥಿನಿಯರು ಮಲಗುತ್ತಿದ್ದ ಕೊಠಡಿಗೆ ಬೋಲ್ಟ್- ಬೀಗವೇ ಇರಲಿಲ್ಲ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿ ಉದ್ದೇಶಪೂರ್ವಕವಾಗಿಯೇ ಕೊಠಡಿಯನ್ನು ಸುಲಭವಾಗಿ ಪ್ರವೇಶಿಸಲು ಈ ರೀತಿ ಮಾಡಿದ್ದ ಎಂಬ ಶಂಕೆ ವ್ಯಕ್ತವಾಗಿದೆ.

ಅತ್ತೆಯನ್ನು ಮನೆಗೆ ಕಳುಹಿಸಿದ್ದ:

ಆರೋಪಿ ಧನಂಜಯ ಅತ್ತೆ ವಸತಿ ಶಾಲೆಯ ವಾರ್ಡನ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಫೆ.೯ರಂದು ಪತ್ನಿಗೆ ಆರೋಗ್ಯ ಸರಿಯಿಲ್ಲ ಎಂಬ ಕಾರಣ ಹೇಳಿ ಅತ್ತೆಯನ್ನು ಮನೆಗೆ ಕಳುಹಿಸಿದ್ದ. ವಸತಿ ಶಾಲೆಯಲ್ಲಿ ಈತನೊಬ್ಬನೇ ಇದ್ದು, ಪೈಶಾಚಿಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಎನ್ನಲಾಗಿದೆ.

ಈ ಸಂಬಂಧ ದೇವನಹಳ್ಳಿ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಘಟನೆ ನಡೆದ ಖಾಸಗಿ ಶಾಲೆಗೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಭೇಟಿ ನೀಡಿ ಘಟನೆಯ ಬಗ್ಗೆ ಮಾತನಾಡಿ, ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಖಾಸಗಿ ವಸತಿ ಶಾಲೆಯಲ್ಲಿ ಕಳೆದ ಫೆ.9ರಂದು ಈ ದುರ್ಘಟನೆ ನಡೆದಿದೆ. ಘಟನೆ ಬಗ್ಗೆ ರಾಜ್ಯ ಮಕ್ಕಳ ಆಯೋಗ ಕಳವಳ ವ್ಯಕ್ತಪಡಿಸಿದೆ. ಇಂತಹ ದುರ್ಘಟನೆಗಳನ್ನು ಮಕ್ಕಳ ಆಯೋಗ ಸಹಿಸಲ್ಲ. ನಾನು ಜಿಲ್ಲಾಧಿಕಾರಿಗಳಿಗೆ, ಶಿಕ್ಷಣ ಇಲಾಖೆಗೆ ಮತ್ತು ಪೊಲೀಸ್ ಇಲಾಖೆಗೆ ಕೂಡಲೇ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದ್ದೇನೆ. ಈ ಕೂಡಲೇ ಸಿಆರ್‌ಪಿ ಮತ್ತು ಇಸಿ ಇಬ್ಬರನ್ನು ಅಮಾನತು ಮಾಡುವಂತೆ ಡಿಡಿಪಿಐಗೆ ಸೂಚಿಸಿದ್ದೇನೆ ಎಂದರು.

ಈ ವೇಳೆ ಎಸಿಪಿ ಶ್ರೀ ಹರ್ಷ, ಡಿಡಿಪಿಐ ಬೈಲಾಂಜಿನಪ್ಪ, ಬಿಇಒ ಲಲಿತಮ್ಮ, ಪೊಲೀಸ್ ಸಿಬ್ಬಂದಿ ಇದ್ದರು.

--------

ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಭೇಟಿ ನೀಡಿ ಘಟನೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.