ಕುಂದಾಪುರ: ಕುಂದಾಪುರ ನಗರದ ಚರ್ಚ್ ರಸ್ತೆಯಲ್ಲಿ ಜು. 31ರಂದು ನಸುಕಿನ ವೇಳೆ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಹೆಮ್ಮಾಡಿ ಸಮೀಪದ ಕನ್ನಡಕುದ್ರು ಮೂಲದ, ಪ್ರಸ್ತುತ ಕುಂದಾಪುರದಲ್ಲಿ ವಾಸವಿರುವ ಡೆರಿಕ್ ಕ್ರಾಸ್ತಾ (55) ಬಂಧಿತ ಆರೋಪಿ.
ಹೆಬ್ರಿ ಮೂಲದ, ಪ್ರಸ್ತುತ ಬಾರ್ಕೂರು-ಕಚ್ಚೂರು ಸಮೀಪ ಬಾಡಿಗೆ ಮನೆಯಲ್ಲಿ ವಾಸವಿದ್ದ ಐವನ್ ರಿಚರ್ಡ್ ಮಸ್ಕರೇನಸ್ ಯಾನೆ ಮುನ್ನಾ (45) ಅವರನ್ನು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಗಲಾಟೆಯಲ್ಲಿ ಗುಂಡಿಕ್ಕಿ ಹತ್ಯೆಗೈದ ಬಳಿಕ ಡೆರಿಕ್ ತಲೆಮರೆಸಿಕೊಂಡಿದ್ದ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಆರೋಪಿಯ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು.ಉಡುಪಿ ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ಅವರ ಮೇಲ್ವಿಚಾರಣೆಯಲ್ಲಿ ತನಿಖೆ ಮುಂದುವರಿದಿದೆ. ಕುಂದಾಪುರ ನಗರ ಠಾಣೆ ಇನ್‌ಸ್ಪೆಕ್ಟರ್ ಹಾಗೂ ಪ್ರಕರಣದ ತನಿಖಾಧಿಕಾರಿ ಜಯರಾಮ ಗೌಡ ನೇತೃತ್ವದ ತಂಡದಲ್ಲಿ ಪಿಎಸ್ಐಗಳಾದ ನಂಜಾ ನಾಯ್ಕ್, ಪವನ್ ನಾಯಕ್, ವಿನಯ್ ಎಂ. ಕೊರ್ಲಹಳ್ಳಿ ಹಾಗೂ ಸಿಬ್ಬಂದಿ ಇದ್ದರು.ತಾಂತ್ರಿಕ ಮಾಹಿತಿಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ತಂಡವು ಆರೋಪಿಯ ಚಲನವಲನದ ಸುಳಿವು ಪಡೆದು ಬಂಧಿಸುವಲ್ಲಿ ಯಶಸ್ವಿಯಾಗಿದೆ.ಸ್ಥಳ ಮಹಜರು: ಬಂಧಿತ ಆರೋಪಿಯನ್ನು ಕುಂದಾಪುರಕ್ಕೆ ಕರೆತಂದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬಳಿಕ ಚರ್ಚ್ ರಸ್ತೆಯಲ್ಲಿರುವ ಘಟನೆ ನಡೆದ ಸ್ಥಳಕ್ಕೆ ಆರೋಪಿಯನ್ನು ಕರೆದೊಯ್ದು ಮಹಜರು ನಡೆಸಲಾಗಿದೆ. ಪ್ರಕರಣ ಕುರಿತು ಪೊಲೀಸರು ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ.