ಕುಂದಾಪುರ: ಕರಾವಳಿ ಭಾಗದ ಮೀನುಗಾರರ ವಿವಿಧ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ ಬೀಜಾಡಿ ಅವರು ಕೆಪಿಸಿಸಿ ಅಧ್ಯಕ್ಷರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.ಬೆಂಗಳೂರಿನಲ್ಲಿರುವ ಕೆಪಿಸಿಸಿ ಅಧ್ಯಕ್ಷರ ನಿವಾಸದಲ್ಲಿ ಬಿ.ಕೆ. ಹರಿಪ್ರಸಾದ್ ಅವರ ಮೂಲಕ ಮನವಿ ಸಲ್ಲಿಸದ ಅವರು, ಮೀನುಗಾರರ ಬದುಕಿನ ಹಿತದೃಷ್ಟಿಯಿಂದ ಹಲವು ಪ್ರಮುಖ ಬೇಡಿಕೆಗಳನ್ನು ಮುಂದಿರಿಸಿದ್ದಾರೆ.

ಮತ್ಸ್ಯಾಶ್ರಯ ಯೋಜನೆಯಡಿ ಮೀನುಗಾರರ ಮನೆ ನಿರ್ಮಾಣಕ್ಕೆ ನೀಡಲಾಗುತ್ತಿರುವ ₹1.20 ಲಕ್ಷ ಸಹಾಯಧನವನ್ನು ₹3 ಲಕ್ಷಕ್ಕೆ ಹೆಚ್ಚಿಸುವುದು, ಮಹಿಳಾ ಮೀನುಗಾರರ ಸ್ವಸಹಾಯ ಸಂಘಗಳ ಸಾಲಗಳಿಗೆ ಸಕಾಲದಲ್ಲಿ ಬಡ್ಡಿ ಸಹಾಯಧನ ಮಂಜೂರು ಮಾಡುವುದು, ದೋಣಿ ಅಪಘಾತಗಳನ್ನು ತಡೆಗಟ್ಟಲು ಇಲಾಖೆಯಿಂದ ಜೀವರಕ್ಷಕ ಜಾಕೆಟ್‌ಗಳನ್ನು ಒದಗಿಸುವುದು, ಮೀನುಗಾರಿಕೆಯಲ್ಲಿ ಅಪಘಾತಕ್ಕೀಡಾಗಿ ಗಾಯಗೊಂಡ ಮೀನುಗಾರರಿಗೆ ತಕ್ಷಣದ ಪರಿಹಾರ ನೀಡುವುದು ಹಾಗೂ ಸಾಂಪ್ರದಾಯಿಕ ಮೀನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಮಿನಿ ಕೈರಂಪಣಿ ಬಲೆಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ವೇಳೆ ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಸಿಇಒ ರಮೇಶ್ ಕಾಂಚನ್, ಮೀನುಗಾರ ಸಂಘದ ಸದಸ್ಯರಾದ ರಾಮ ಕಾಂಚನ್ (ಕೊರವಡಿ), ಯೋಗೀಶ್ ಕುಂದರ್, ರವೀಂದ್ರ ಬೀಜಾಡಿ ಮನೆ ಹಾಗೂ ಅಶೋಕ್ ಪೂಜಾರಿ ಚಾತ್ರಬೆಟ್ಟು ಉಪಸ್ಥಿತರಿದ್ದರು.

ಕರಾವಳಿ ಭಾಗದ ಮೀನುಗಾರರು ಹಲವು ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗಳಿಗೆ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸಬೇಕು. ಮೀನುಗಾರರ ಬದುಕು ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸವಿದೆ.। ಅಶೋಕ್ ಪೂಜಾರಿ ಬೀಜಾಡಿ, ಕಾಂಗ್ರೆಸ್ ಮುಖಂಡರು