ವಿಶೇಷ ವರದಿ ಕನ್ನಡಪ್ರಭ ವಾರ್ತೆ ಕುಶಾಲನಗರ
ಕಾವೇರಿ ನದಿಯಲ್ಲಿ ಮತ್ತೆ ನೀರಿನ ಹರಿವು ಬತ್ತಿ ಹೋಗಲು ಆರಂಭಗೊಂಡಿದೆ. ಪರಿಸ್ಥಿತಿ ಮುಂದುವರಿದಲ್ಲಿ ಪಟ್ಟಣ ಮತ್ತು ಸುತ್ತಮುತ್ತಲ ಗ್ರಾಮಗಳಿಗೆ ಕುಡಿಯುವ ನೀರಿನ ಅಭಾವ ತಲೆದೋರುವ ಸಾಧ್ಯತೆ ಅಧಿಕವಾಗಿದೆ.ಬಿರು ಬೇಸಿಗೆಯ ಬಿಸಿಲಿನ ನಡುವೆ ಕಾವೇರಿ ನದಿಯಲ್ಲಿ ನೀರಿನ ಹರಿವು ಬಹುತೇಕ ಕ್ಷೀಣಗೊಂಡಿದ್ದು, ನದಿಯಲ್ಲಿ ಕಲ್ಲು ಬಂಡೆಗಳೇ ಗೋಚರಿಸುತ್ತಿವೆ. ಮಾರ್ಚ್ 2ನೇ ವಾರದಲ್ಲಿ ಅಲ್ಪ ಸ್ವಲ್ಪ ಮಳೆ ಬಿದ್ದ ಹಿನ್ನೆಲೆಯಲ್ಲಿ ನದಿಯಲ್ಲಿ ನೀರಿನ ಹರಿವು ಹೆಚ್ಚಳಗೊಂಡಿತ್ತು. ಕಾವೇರಿ ನದಿ ಪಾತ್ರದಲ್ಲಿ ಕೃಷಿ ಚಟುವಟಿಕೆಗಳಿಗೆ ನೀರಿನ ಅವಶ್ಯಕತೆಗೆ ಭಾರಿ ಪ್ರಮಾಣದ ಅಶ್ವ ಶಕ್ತಿಗಳ ಮೋಟಾರ್ ಪಂಪುಗಳು ನದಿಯಿಂದ ನೀರು ಹಾಯಿಸಲು ಆರಂಭಗೊಂಡ ಹಿನ್ನೆಲೆಯಲ್ಲಿ ನದಿಯ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ.ಕುಶಾಲನಗರ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಬೈಚನಹಳ್ಳಿ ಪಂಪ್ ಹೌಸ್ ಬಳಿ ನೀರಿನ ಸಂಗ್ರಹಕ್ಕೆ ನದಿಗೆ ಅಡ್ಡಲಾಗಿ ಮರಳಿನ ಚೀಲಗಳ ಬಂಡ್ ನಿರ್ಮಾಣ ಮಾಡಲಾಗಿದ್ದು, ಪ್ರಸಕ್ತ ನೀರಿಗೆ ಕೊರತೆ ಉಂಟಾಗಿಲ್ಲ ಎಂದು ಕುಶಾಲನಗರ ಒಳಚರಂಡಿ ಮತ್ತು ಕುಡಿಯುವ ನೀರು ಸರಬರಾಜು ಮಂಡಳಿ ಅಧಿಕಾರಿಗಳು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಪಟ್ಟಣದಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ಅಭಾವ ತಲೆದೋರದಂತೆ ಕೊಳವೆಬಾವಿಗಳ ದುರಸ್ತಿ ಕಾರ್ಯ ಮಾಡಲಾಗಿದೆ. ನದಿ ನೀರಿಗೆ ಪರ್ಯಾಯವಾಗಿ ಕೊಳವೆಬಾವಿ ನೀರು ಟ್ಯಾಂಕರ್ ಗಳ ಮೂಲಕ ಸರಬರಾಜು ಮಾಡಲು ಈಗಾಗಲೇ ಕಾರ್ಯ ಯೋಜನೆ ರೂಪಿಸಲಾಗಿದೆ ಎಂದು ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ ಗಿರೀಶ್ ಅವರು ತಿಳಿಸಿದ್ದಾರೆ. ಕುಡಿಯುವ ನೀರನ್ನು ವಾಣಿಜ್ಯ ಚಟುವಟಿಕೆಗಳಿಗೆ ಬಳಸದಂತೆ ಜಾಗೃತರಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.ಪಟ್ಟಣ, ಗ್ರಾಮ ವ್ಯಾಪ್ತಿಯಲ್ಲಿ ಯಾವುದೇ ಸಂದರ್ಭ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗದಂತೆ ಎಚ್ಚರವಹಿಸಬೇಕು ಮತ್ತು ಪರ್ಯಾಯ ಕ್ರಮ ಕೈಗೊಳ್ಳಬೇಕು ಎಂದು ಇತ್ತೀಚೆಗೆ ಶಾಸಕ ಡಾ ಮಂತರ್ ಗೌಡ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಪ್ರಸಕ್ತ ಸ್ಥಿತಿ ಮುಂದುವರಿದು ನದಿ ಪಾತ್ರದಲ್ಲಿ ಮಳೆ ಬೀಳದೆ ಹೋದಲ್ಲಿ ಕಳೆದ 2024ರ ಪರಿಸ್ಥಿತಿ ಮರುಕಳಿಸುವ ಸಾಧ್ಯತೆ ಅಧಿಕವಾಗಿದೆ ಎನ್ನುತ್ತಾರೆ ಸ್ಥಳೀಯರು. ಪಟ್ಟಣದಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ಅಭಾವ ತಲೆದೋರದಂತೆ ಕೊಳವೆಬಾವಿಗಳ ದುರಸ್ತಿ ಕಾರ್ಯ ಮಾಡಲಾಗಿದೆ. ನದಿ ನೀರಿಗೆ ಪರ್ಯಾಯವಾಗಿ ಕೊಳವೆಬಾವಿ ನೀರು ಟ್ಯಾಂಕರ್ ಗಳ ಮೂಲಕ ಸರಬರಾಜು ಮಾಡಲು ಈಗಾಗಲೇ ಕಾರ್ಯ ಯೋಜನೆ ರೂಪಿಸಲಾಗಿದೆ.
-ಗಿರೀಶ್, ಕುಶಾಲನಗರ ಪುರಸಭೆ ಮುಖ್ಯ ಅಧಿಕಾರಿ