ಸಾರಾಂಶ
ಮಹಾಲಿಂಗಪುರ ಸಮೀಪದ ಅಕ್ಕಿಮರಡಿ ಗ್ರಾಮದ ಪ್ರಗತಿಪರ ರೈತ ಸದಾಶಿವ ಕಂಬಳಿ ಅವರ ಪುತ್ರ ಪಾಂಡುರಂಗ ಕಂಬಳಿ ಕೇಂದ್ರ ಲೋಕಸೇವಾ ಆಯೋಗದ ಐಎಫ್‌ಎಸ್ ಪರೀಕ್ಷೆಯಲ್ಲಿ ದೇಶಕ್ಕೆ 42ನೇ ರ್‍ಯಾಂಕ್ ಪಡೆದಿದ್ದಾನೆ.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಸಮೀಪದ ಅಕ್ಕಿಮರಡಿ ಗ್ರಾಮದ ಪ್ರಗತಿಪರ ರೈತ ಸದಾಶಿವ ಕಂಬಳಿ ಅವರ ಪುತ್ರ ಪಾಂಡುರಂಗ ಕಂಬಳಿ ಕಳೆದ ವರ್ಷ ನವೆಂಬರ್‌ನಲ್ಲಿ ಜರುಗಿದ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) (ಭಾರತೀಯ ಅರಣ್ಯ ಸೇವೆ) ಪರೀಕ್ಷೆಯಲ್ಲಿ ದೇಶಕ್ಕೆ 42ನೇ ರ್‍ಯಾಂಕ್ ಪಡೆದಿದ್ದಾನೆ.ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಸಮೀಪದ ಸೈದಾಪುರ-ಸಮೀರವಾಡಿಯ ಶಿವಲಿಂಗೇಶ್ವರ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿವರೆಗೆ ಪ್ರಾಥಮಿಕ ಶಿಕ್ಷಣ ಮುಗಿಸಿ ಕುಳಗೇರಿ ಕ್ರಾಸ್‌ನಲ್ಲಿರುವ ಜವಾಹರ ನವೋದಯ ಶಾಲೆಯಲ್ಲಿ ಮಾಧ್ಯಮಿಕ ಹಾಗೂ ಪ್ರೌಢಶಿಕ್ಷಣ, ಯಲ್ಲಟ್ಟಿಯ ಕೊಣ್ಣೂರ ಪಿಯು ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದರು. 2018ರಲ್ಲಿ ಬೆಂಗಳೂರಿನ ಆರ್‌ವಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದು, ಎರಡು ವರ್ಷ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು.ಉನ್ನತ ಅಧಿಕಾರಿ ಆಗಬೇಕೆಂಬ ಉದ್ದೇಶದಿಂದ ಉದ್ಯೋಗವನ್ನು ಕೈಬಿಟ್ಟು ಸ್ಪರ್ಧಾತ್ಮಕ ಪರೀಕ್ಷೆ ತಯಾರಿಸಿ ನಡೆಸಿದರು. ಯಾವುದೇ ಕೋಚಿಂಗ್ ಪಡೆಯದೇ ಹೋಗದೆ ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿ ಈ ಸಾಧನೆ ಮಾಡಿದ್ದಾರೆ.
ನಾನು ಈ ಮೊದಲು ಎರಡು ಬಾರಿ ಯುಪಿಎಸ್ಸಿ(ಸಿವಿಲ್) ಪರೀಕ್ಷೆ ಪಾಸಾಗಿ ದೆಹಲಿಯಲ್ಲಿ ಮೌಖಿಕ ಸಂದರ್ಶನಕ್ಕೆ ಹಾಜರಾಗಿದ್ದೆ. ಆದರೆ ಆಯ್ಕೆಯಾಗಲಿಲ್ಲ. ಈ ಬಾರಿ ಅರಣ್ಯ ಇಲಾಖೆ ಸೇವೆಗೆ ಪ್ರಥಮ ಬಾರಿ ಪ್ರಯತ್ನಿಸಿ ಆಯ್ಕೆಯಾಗಿದ್ದೇನೆ. ನನ್ನ ತಂದೆ ಹಾಗೂ ಮನೆಯಲ್ಲಿ ಎಲ್ಲರ ಸಹಕಾರದಿಂದ ಇದು ಸಾಧ್ಯವಾಯಿತು.- ಪಾಂಡುರಂಗ ಕಂಬಳಿ, ಐಎಫ್‌ಎಸ್ 42ನೇ ರ್‍ಯಾಂಕ್ ವಿಜೇತ