ಮಂಡ್ಯದಲ್ಲಿ ಕರ್ನಾಟಕ ಸಂಘದಿಂದ ಡಿ.೨೬ರಿಂದ ೨೮ರವರೆಗೆ ಕುವೆಂಪು ಜನ್ಮೋತ್ಸವ ಪ್ರಯುಕ್ತ ಶ್ರೀರಾಮಾಯಣ ದರ್ಶನಂ ಗಮಕ ವ್ಯಾಖ್ಯಾನ, ಸಾಹಿತ್ಯ ಕುರಿತ ವಿಚಾರ ಸಂಕಿರಣ ಹಾಗೂ ಕಾಡಿನ ಕೊಳಲು ಕುವೆಂಪು ಗೀತೆಗಳ ನೃತ್ಯ ರೂಪಕವನ್ನು ಏರ್ಪಡಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಕರ್ನಾಟಕ ಸಂಘದಿಂದ ಡಿ.೨೬ರಿಂದ ೨೮ರವರೆಗೆ ಕುವೆಂಪು ಜನ್ಮೋತ್ಸವ ಪ್ರಯುಕ್ತ ಶ್ರೀರಾಮಾಯಣ ದರ್ಶನಂ ಗಮಕ ವ್ಯಾಖ್ಯಾನ, ಸಾಹಿತ್ಯ ಕುರಿತ ವಿಚಾರ ಸಂಕಿರಣ ಹಾಗೂ ಕಾಡಿನ ಕೊಳಲು ಕುವೆಂಪು ಗೀತೆಗಳ ನೃತ್ಯ ರೂಪಕವನ್ನು ಏರ್ಪಡಿಸಲಾಗಿದೆ ಎಂದು ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಹೇಳಿದರು.ಡಿ.೨೬ ಮತ್ತು ೨೭ರಂದು ಸಂಜೆ ೫.೪೬ ರಿಂದ ೭.೩೦ರವರೆಗೆ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ವಿಶ್ರಾಂತ ಪ್ರಾಚಾರ್ಯ ಡಾ.ಮ.ರಾಮಕೃಷ್ಣ ನೆರವೇರಿಸುವರು. ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ವಹಿಸುವರು. ಶ್ರೀರಾಮಾಯಣ ದರ್ಶನಂ ಬೆಳಗಿಸಿದ ಸ್ತ್ರೀಪಾತ್ರಗಳು ಕುರಿತು ತುಮಕೂರಿನ ಲಕ್ಷ್ಮೀ ಗಮಕವಾಚನ ಮಾಡುವರು. ಡಾ.ಶುಭಶ್ರೀ ವ್ಯಾಖ್ಯಾನ ಮಾಡುವರು. ಡಿ.೨೭ರಂದು ಶ್ರೀರಾಮಾಯಣ ದರ್ಶನಂ ಹಾಗೂ ಕುವೆಂಪು ಗೀತೆಗಳನ್ನು ಬೆಂಗಳೂರಿನ ಶ್ರೀ ವಾಗ್ದೇವಿ ಗಮಕ ಕಲಾ ಪ್ರತಿಷ್ಠಾನದ ಸದಸ್ಯರು ಪ್ರಸ್ತುತಪಡಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಿ.೨೮ರಂದು ಮಧ್ಯಾಹ್ನ ೨.೩೦ಕ್ಕೆ ಕುವೆಂಪು ವಿಚಾರ ಸಂಕಿರಣ ನಡೆಯಲಿದ್ದು, ಅಧ್ಯಕ್ಷತೆಯನ್ನು ಆಂಧ್ರಪ್ರದೇಶದ ಆದಾಯ ತೆರಿಗೆ ಇಲಾಖೆ ಮುಖ್ಯ ಆಯುಕ್ತ ಜಯರಾಂ ರಾಯಪುರ ವಹಿಸುವರು. ವಿಚಾರ ಕ್ರಾಂತಿಗೆ ಆಹ್ವಾನದ ಹಿನ್ನೆಲೆಯಲ್ಲಿ ನಿರಂಕುಶ ಮತಿತ್ವ ಕುರಿತು ವಿಮರ್ಶಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಕುವೆಂಪು ಸಾಹಿತ್ಯ ಪ್ರವೇಶಕ್ಕೆ ಭೂಮಿಕೆ ಕುರಿತು ವಿಮರ್ಶಕ ಪ್ರೊ.ಚಂದ್ರಶೇಖರ ನಂಗಲಿ ವಿಚಾರ ಮಂಡಿಸುವರು.ಅಂದು ಸಂಜೆ ೬ ಗಂಟೆಗೆ ಕಾಡಿನ ಕೊಳಲು ಕುವೆಂಪು ಗೀತೆಗಳ ನೃತ್ಯ ರೂಪಕ ಸಮಾರಂಭದ ದಿವ್ಯಸಾನ್ನಿಧ್ಯವನ್ನು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ವಹಿಸುವರು. ಸಾನ್ನಿಧ್ಯವನ್ನು ಕೊಮ್ಮೇರಹಳ್ಳಿ ವಿಶ್ವಮಾನವ ಕ್ಷೇತ್ರದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ವಹಿಸುವರು. ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಮಾಜಿ ರಾಜ್ಯಪಾಲ ಲಯನ್ ಕೆ.ದೇವೇಗೌಡ ಅಧ್ಯಕ್ಷತೆ ವಹಿಸುವರು ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ ಅವರು ವಿದುಷಿ ಡಾ.ಪಿ.ಮಾನಸ ಅವರನ್ನು ಸನ್ಮಾನಿಸುವರು. ಮುಖ್ಯ ಅತಿಥಿಗಳಾಗಿ ಡ್ಯಾಪೋಡಿಲ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ವಿ.ಸುಜಾತ, ಕನ್ನಿಕಾ ಶಿಲ್ಪ ನವೋದಯ ಶಿಕ್ಷಣ ಸಂಸ್ಥೆಯ ಕನ್ನಿಕಾ ಶಿಲ್ಪ, ಗುರುದೇವ ಲಲಿತಕಲಾ ಅಕಾಡೆಮಿಯ ಸಂಸ್ಥಾಪಕ ಡಾ.ಚೇತನಾ ರಾಧಾಕೃಷ್ಣ ಭಾಗವಹಿಸುವರು.ಗೋಷ್ಠಿಯಲ್ಲಿ ಪ್ರೊ.ಎಸ್.ಬಿ.ಶಂಕರೇಗೌಡ, ಎಂ.ವಿನಯ್‌ಕುಮಾರ್, ವಿ.ಸುಜಾತ, ನಾಗರೇವಕ್ಕ ಇದ್ದರು.ವಿದುಷಿ ಡಾ.ಪಿ.ಮಾನಸ
ಡಾ.ಪಿ.ಮಾನಸ ಮಂಡ್ಯದ ಹೆಣ್ಣು ಮಗಳು. ಓದಿದ್ದು ಎಂಜಿನಿಯರ್. ಸ್ನಾತಕೋತ್ತರ ಪದವಿಯೊಂದಿಗೆ ಡಾಕ್ಟರೇಟ್ ಪದವಿ ಪಡೆದು ಅಧ್ಯಾಪನ ವೃತ್ತಿಯಲ್ಲಿ ತೊಡಗಿದರು. ಪ್ರವೃತ್ತಿಯಲ್ಲಿ ನೃತ್ಯಕ್ಷೇತ್ರವನ್ನು ಅಪ್ಪಿಕೊಂಡರು. ಬೆಂಗಳೂರಿನಲ್ಲಿ ನೆಲೆನಿಂತು ಭರತನಾಟ್ಯ ಹಾಗೂ ಶಾಸ್ತ್ರೀಯ ನೃತ್ಯ ಪ್ರಾಕಾರವನ್ನು ಹೊಸ ಪೀಳಿಗೆಗೆ ಕಲಿಸುವ ಕೈಂಕರ್ಯದಲ್ಲಿ ನಿರತರಾಗಿದ್ದಾರೆ. ಮನೋಜ್ಞ ನೃತ್ಯ ಅಕಾಡೆಮಿ ಸ್ಥಾಪಿಸಿ ರಾಜ್ಯ-ರಾಷ್ಟ್ರ ವಿದೇಶಗಳಲ್ಲಿಯೂ ನೃತ್ಯ ಪ್ರದರ್ಶನ ನೀಡಿ ಜನರ ಮನಸ್ಸನ್ನು ಗೆದ್ದಿದ್ದಾರೆ.ಕಾಡಿನ ಕೊಳಲುಕೊಳಲು ಕುವೆಂಪು ಅವರ ಮೊದಲ ಕವನ ಸಂಕಲನ. ಅಷ್ಟೇ ಅಲಲದೆ ಆ ಕವನ ಸಂಕಲನದ ಮೊದಲ ಕವನ ಕೂಡ. ಕಾಡಿನ ಕೊಳಲಿದು, ಕಾಡ ಕವಿಯು ನಾ, ನಾಡಿನ ಜನರೊಲಿದಾಲಿಪುದು ಎಂದು ಘೋಷಿಸಿದ್ದಾರೆ. ಕಾಡಿನ ಕೊಳಲು ನಾಡನ್ನು ವಿವಿಧ ರೀತಿಯಲ್ಲಿ ಆಕರ್ಷಿಸಿದೆ. ಆಕರ್ಷಣೆಗೆ ಸೀಮಿತಗೊಳ್ಳದೆ ವೈಚಾರಿಕತೆ, ವೈಜ್ಞಾನಿಕತೆಯನ್ನು ಜನರಲ್ಲಿ ಬೆಳೆಸಲು ಪ್ರಯತ್ನಿಸಿದೆ. ಕುವೆಂಪು ಕಾವ್ಯಕ್ಷೇತ್ರದ ವಿಸ್ತಾರದಲ್ಲಿ ಆಯ್ದ ಕವನಗಳನ್ನು ಜೋಡಿಸಿ ಹೆಣೆದು ರೂಪಕದ ರೂಪದಲ್ಲಿ ಪ್ರಸ್ತುತಪಡಿಸಲಾಗುತ್ತಿದೆ.ಕುವೆಂಪು ದರ್ಶನ-ಪುಸ್ತಕ ಪ್ರದರ್ಶನ
ಕುವೆಂಪು ಅವರ ಜೀವನದ ಅಪರೂಪದ ಛಾಯಾಚಿತ್ರಗಳನ್ನು ವಿವೇಕಾನಂದ ರಂಗಮಂದಿರದ ಆವರಣದಲ್ಲಿ ಪ್ರದರ್ಶಿಸಲಾಗುತ್ತಿದೆ. ೧೯೫೪ರಲ್ಲಿ ಕರ್ನಾಟಕ ಸಂಘ ಕುವೆಂಪು ಅವರಿಗೆ ಸಮರ್ಪಿಸಿದ್ದ ಬೆಳ್ಳಿ ಕರಂಡಿಕೆಯನ್ನು ಪ್ರದರ್ಶನಕ್ಕೆ ಇಡಲಾಗುವುದು. ಕುವೆಂಪು, ತೇಜಸ್ವಿ, ಪರಿಸರ ಮತ್ತು ರಾಮಕೃಷ್ಣ ಆಶ್ರಮದ ಪುಸ್ತಕಗಳನ್ನು ಪ್ರದರ್ಶಿಸುತ್ತಿರುವುದು ಈ ಬಾರಿಯ ವಿಶೇಷ.