ಕನ್ನಡಪ್ರಭ ವಾರ್ತೆ ಬೆಂಗಳೂರು

ಭಾರಿ ಮಳೆ, ಗಾಳಿಗೆ ಬಿದ್ದಿರುವ 460ಕ್ಕೂ ಹೆಚ್ಚು ಮರಗಳು ಹಾಗೂ 1,200ಕ್ಕೂ ಹೆಚ್ಚು ಮರದ ರೆಂಬೆ-ಕೊಂಬೆಗಳನ್ನು ತೆರವುಗೊಳಿಸಲು ಜಿಬಿಎ ಅರಣ್ಯ ಇಲಾಖೆಗೆ ಸಿಬ್ಬಂದಿ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಸಕಲೇಶಪುರದಿಂದ ಮರ ಕಡಿಯುವ ತಂಡಗಳನ್ನು ಕರೆಸಿಕೊಂಡಿದೆ.

ಜಿಬಿಎ ಅರಣ್ಯ ಇಲಾಖೆಯಲ್ಲಿ ಪ್ರಸ್ತುತ 13 ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಾರೆ. ಇವರ ಅಧೀನದಲ್ಲಿ ಮರ ಗಿಡಗಳ ನಿರ್ವಹಣೆಗಾಗಿ ಗುತ್ತಿಗೆ ಆಧಾರದ ಮೇಲೆ ತಲಾ 8 ಸಿಬ್ಬಂದಿ ಇರುವ 33 ‘ಟ್ರಿ ಕೆನಾಪಿ ಮ್ಯಾನೇಜ್‌ಮೆಂಟ್‌’ ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ, ಒಂದೇ ದಿನದಲ್ಲಿ ಸಾವಿರಾರು ಮರಗಳಿಗೆ ಹಾನಿಯಾಗಿರುವ ಕಾರಣ ಸೀಮಿತ ಸಂಖ್ಯೆಯ ಸಿಬ್ಬಂದಿಯಿಂದ ಮರಗಳನ್ನು ತೆರವುಗೊಳಿಸುವುದು ಸವಾಲಿನ ಕೆಲಸವಾಗಿದೆ.

ಮರ ಕಡಿಯಲು ಹೊರಜಿಲ್ಲೆಯ ಸಿಬ್ಬಂದಿ ಬಳಕೆ

ಮರಗಳನ್ನು ಕಡಿಯಲು ಸಕಲೇಶಪುರದಿಂದ ಕಾರ್ಮಿಕರನ್ನು ಕರೆಸಲಾಗುತ್ತಿದೆ. ಆದರೆ, ಅಲ್ಲಿಯು ಸ್ಥಳೀಯವಾಗಿ ಆಚರಿಸುವ ಸುಗ್ಗಿ ಹಬ್ಬ, ಮದುವೆ ಕಾರ್ಯಕ್ರಮಗಳು, ಸಾಲು ರಜೆಗಳು ಇರುವುದರಿಂದ ಕಾರ್ಮಿಕರು ಸಿಗುತ್ತಿಲ್ಲ. ಆದರೂ, ಇಲಾಖೆಯ ಸಂಪರ್ಕದಿಂದ ಹೆಚ್ಚೆಚ್ಚು ಕಾರ್ಮಿಕರನ್ನು ಮರ ಕಡಿಯುವ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಜಿಬಿಎ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಕೆ.ಸುದರ್ಶನ್ ಹೇಳಿದರು.


ನಗರದ ಕಾರ್ಮಿಕರು ಒಂದು ಮರ ತೆರವು ಮಾಡಲು 50 ಸಾವಿರ ರು. ಕೇಳುತ್ತಿದ್ದಾರೆ. ಹೀಗಾಗಿ, ಇಲಾಖೆ ನಿಗದಿಪಡಿಸಿರುವ ದರದಲ್ಲಿ ಕಾರ್ಮಿಕರ ಸೇವೆ ಪಡೆಯಲು ಪ್ರಯತ್ನ ನಡೆದಿದೆ. ಜಿಬಿಎ ಎಂಜಿನಿಯರಿಂಗ್ ವಿಭಾಗ, ಅಗ್ನಿಶಾಮಕ ಇಲಾಖೆ, ಎನ್‌ಜಿಒಗಳು ಹಾಗೂ ಶಾಸಕರು, ಸಚಿವರು ಸಹಾಯದಿಂದ ಮರ, ಕೊಂಬೆಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ‘ಹೊಸದಾಗಿ 66 ಟ್ರಿ ಕೆನಾಪಿ ಮ್ಯಾನೇಜ್ಮೆಂಟ್ ಸೇವೆಯನ್ನು ಪಡೆಯಲು ಟೆಂಡರ್ ಕರೆಯಲಾಗಿದ್ದು ಹೊಸ ಟೆಂಡರ್ ಅಂತಿಮಗೊಂಡರೆ ಮರಗಳನ್ನು ಇನ್ನು ಬೇಗ ತೆರವುಗೊಳಿಸಬಹುದು ಎಂದು ಅವರು ಹೇಳಿದರು.

ದುರ್ಬಲ ಮರಗಳೇ ಹೆಚ್ಚು ಧರಶಾಹಿ

ನಗರದ ಕೇಂದ್ರ, ದಕ್ಷಿಣ ಮತ್ತು ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚು ಮರಗಳು ಬಿದ್ದಿವೆ. ಅದರಲ್ಲೂ ದುರ್ಬಲ ತಳಿಯ ಮರಗಳು ಎನ್ನಲಾಗುವ ಸ್ಪತೋಡಿಯಾ, ಕಾಪರ್ ಪಾಡ್, ಗುಲ್ ಮೋಹರ್ ಮುಂತಾದ ಮರಗಳೇ ಹೆಚ್ಚಾಗಿ ಬಿದ್ದಿವೆ. ಇನ್ನು ಬಹಳ ವಿಶಾಲವಾಗಿ ಬೆಳೆದಿರುವ ಮರಗಳು ದಶಕಗಳ ಹಿಂದೆ ನೆಟ್ಟಿರುವ ಮರಗಳು ಕೂಡ ಬುಡ ಸಮೇತ ಬಿದ್ದಿವೆ. ಕಟ್ಟಡ ನಿರ್ಮಾಣ, ಕಾಮಗಾರಿಯಿಂದ ಬೇರು ದುರ್ಬಲಗೊಂಡಿರುವುದು ಕೂಡ ಮರಗಳು ಬೀಳಲು ಕಾರಣವಾಗಿದೆ. ಕೇಂದ್ರ ಪಾಲಿಕೆ, ಪಶ್ಚಿಮ ಮತ್ತು ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲೇ ಹೆಚ್ಚು ಮರಗಳು ಬಿದ್ದಿವೆ. ಈಗಾಗಲೇ ಶೇ.75ಕ್ಕಿಂತ ಹೆಚ್ಚು ಮರಗಳನ್ನು ತೆರವುಗೊಳಿಸಲಾಗಿದೆ ಎಂದು ಜಿ.ಕೆ. ಸುದರ್ಶನ್ ತಿಳಿಸಿದರು.

ಬಿದ್ದಿರುವ ಮರಗಳನ್ನು ತೆರವುಗೊಳಿಸಲು ಅಗತ್ಯವಿರುವ ಹೆಚ್ಚಿನ ಸಿಬ್ಬಂದಿಯನ್ನು ಸಕಲೇಶಪುರದಿಂದ ಕರೆಸಿಕೊಳ್ಳಲಾಗಿದೆ. ಹೊಸ ಟೆಂಡರ್ ಪ್ರಕ್ರಿಯೆ ಅಂತಿಮಗೊಂಡರೆ ಹೆಚ್ಚಿನ ಸಿಬ್ಬಂದಿ ಲಭ್ಯವಾಗುತ್ತಾರೆ.

ಜಿ.ಕೆ. ಸುದರ್ಶನ್‌ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿಬಿಎ