ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯಸಭೆಯ ನಾಲ್ಕು ಮತ್ತು ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಚುನಾವಣೆ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆಗೆ ಪ್ರಕ್ರಿಯೆ ಸೋಮವಾರ ಅಂತ್ಯಗೊಂಡಿತು. ಕೊನೆಯ ದಿನ ವಿಧಾನಪರಿಷತ್ತಿಗೆ ಕಾಂಗ್ರೆಸ್‌ನ 5ನೇ ಅಭ್ಯರ್ಥಿಯಾಗಿ ವಿನಯ್ ಕಾರ್ತಿಕ್ ನಾಮಪತ್ರ ಸಲ್ಲಿಸಿದರು. ಬಿಜೆಪಿಯಿಂದ ರಘು ಕೌಟಿಲ್ಯ, ಲಿಂಗರಾಜ್ ಪಾಟೀಲ್, ಜೆಡಿಎಸ್‌ನಿಂದ ಗೋವಿಂದರಾಜು ನಾಮಪತ್ರ ಸಲ್ಲಿಸಿದರು. ರಾಜ್ಯಸಭೆಗೆ ಬಿಜೆಪಿಯಿಂದ ಎಂ.ನಾಗರಾಜ್ ನಾಮಪತ್ರ ಸಲ್ಲಿಸಿದರು.ಈ ಮೂಲಕ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಕಾಂಗ್ರೆಸ್‌ನ ಮೂವರು, ಬಿಜೆಪಿಯಿಂದ ಇಬ್ಬರು ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಕೊಡಗು ಮೂಲದ ಭೋಜಣ್ಣ ಸೋಮಯ್ಯ ನಾಮಪತ್ರ ಸಲ್ಲಿಸಿದ್ದಾರೆ. ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ಕಾಂಗ್ರೆಸ್‌ನ ಐವರು, ಬಿಜೆಪಿಯ ಇಬ್ಬರು ಹಾಗೂ ಜೆಡಿಎಸ್‌ನ ಓರ್ವ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ.
ವಿಧಾನಸೌಧದಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಕೌಟಿಲ್ಯ ರಘು, ಲಿಂಗರಾಜ್ ಪಾಟೀಲ್, ಎಂ.ನಾಗರಾಜ್ ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಉಪಮುಖ್ಯಮಂತ್ರಿ ಡಾ.ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಮೊದಲಾದ ನಾಯಕರು ಸಾಥ್ ನೀಡಿದರು.ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕಾರ್ತಿಕ್ ಪ್ರಕಾಶ್ ನಾಮಪತ್ರ ಸಲ್ಲಿಕೆ ವೇಳೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಸಚಿವ ಬೈರತಿ ಸುರೇಶ್, ಶಾಸಕ ನರೇಂದ್ರಸ್ವಾಮಿ ಮೊದಲಾದವರು ಸಾಥ್ ನೀಡಿದರು.
ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ಶಾಸಕರಾದ ಕರೆಮ್ಮ, ಸಿ.ಎನ್.ಬಾಲಕೃಷ್ಣ ಸೇರಿ ಇತರೆ ನಾಯಕರು ಸಾಥ್ ನೀಡಿದರು.
ಇಂದು ನಾಮಪತ್ರ ಪರಿಶೀಲನೆ:
ಸಲ್ಲಿಕೆಯಾದ ಅಭ್ಯರ್ಥಿಗಳ ನಾಮಪತ್ರಗಳನ್ನು ಮಂಗಳವಾರ ಚುನಾವಣಾಧಿಕಾರಿಗಳು ಪರಿಶೀಲಿಸಿದ್ದಾರೆ. ಕಾನೂನುಬದ್ಧ ಇಲ್ಲದ ನಾಮಪತ್ರಗಳನ್ನು ತಿರಸ್ಕರಿಸಲಿದ್ದಾರೆ. ಜೂ.11ರಂದು ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಜೂ.18ರಂದು ಮತದಾನ ನಡೆಯಲಿದ್ದು, ವಿಧಾನಸಭೆಯ ಸದಸ್ಯರು ಚಲಾಯಿಸಲಿದ್ದಾರೆ. ಅಂದೇ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಿಸಲಾಗುತ್ತದೆ.ಪಕ್ಷೇತರ ಅಭ್ಯರ್ಥಿ ನಾಮಪತ್ರ ತಿರಸ್ಕೃತ ಸಾಧ್ಯತೆ:
ರಾಜ್ಯಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಭೋಜಣ್ಣ ಸೋಮಯ್ಯ ಸಲ್ಲಿಸಿರುವ ನಾಮಪತ್ರದಲ್ಲಿ ಸೂಚಕರಾಗಿ ಯಾವುದೇ ಶಾಸಕರು ಸಹಿ ಮಾಡಿಲ್ಲ. ನಿಯಮದ ಪ್ರಕಾರ 10 ಮಂದಿ ಶಾಸಕರು ಸಹಿ ಮಾಡಬೇಕು. ಆದರೆ, ಇಲ್ಲಿ ಯಾವುದೇ ಶಾಸಕರು ಸಹಿ ಮಾಡಿದಿರುವ ಕಾರಣ ಭೋಜಣ್ಣ ಅವರ ನಾಮಪತ್ರ ತಿರಸ್ಕೃತವಾಗಲಿದೆ. ಮಂಗಳವಾರ ಚುನಾವಣಾಧಿಕಾರಿ ನಾಪತ್ರಗಳ ಪರಿಶೀಲನೆ ವೇಳೆ ಈ ನಾಮಪತ್ರವನ್ನು ತಿರಸ್ಕರಿಸಲಿದ್ದಾರೆ.-ಬಾಕ್ಸ್-ಅಭ್ಯರ್ಥಿಗಳು ಯಾರು?
ರಾಜ್ಯಸಭೆಗೆ- ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ, ಪವನ್ ಖೇರಾ, ಮನ್ಸೂರ್ ಅಲಿ ಖಾನ್, ಬಿಜೆಪಿಯಿಂದ ಎಂ.ನಾಗರಾಜು, ಪಕ್ಷೇತರ ಅಭ್ಯರ್ಥಿ ಭೋಜಣ್ಣ ಸೋಮಯ್ಯ.ವಿಧಾನ ಪರಿಷತ್‌ಗೆ- ಕಾಂಗ್ರೆಸ್‌ನಿಂದ ಬಿ.ಕೆ.ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರ್, ಪಿ.ವಿ.ಮೋಹನ್, ಬಿ.ಎಸ್.ಶಿವಣ್ಣ, ವಿನಯ್ ಕಾರ್ತಿಕ್ ಪ್ರಕಾಶ್, ಬಿಜೆಪಿಯಿಂದ ಕೌಟಿಲ್ಯ ರಘು ಮತ್ತು ಲಿಂಗರಾಜ್ ಪಾಟೀಲ್, ಜೆಡಿಎಸ್‌ನಿಂದ ಗೋವಿಂದರಾಜು.ಗೌಡರಿಗೆ ಟಿಕೆಟ್ ತಪ್ಪಿದ್ದಕ್ಕೆ ದಳ ಬೇಸರ:
ರಾಜ್ಯಸಭೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಮೈತ್ರಿ ಪಕ್ಷ ಬಿಜೆಪಿ ಪರಿಗಣಿಸದಿರುವುದು ಜೆಡಿಎಸ್ ಪಾಳಯದಲ್ಲಿ ಬೇಸರ ಮೂಡಿಸಿದ್ದು, ಪಕ್ಷದ ಹಲವು ನಾಯಕರು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ದೇವೇಗೌಡ ಅವರನ್ನು ರಾಜ್ಯಸಭೆಗೆ ಪರಿಗಣಿಸದಿರುವುದಕ್ಕೆ ನಮಗೇನೂ ಬೇಸರವಿಲ್ಲ. ಆದರೆ, ನಾಡಿನ ಜನರಲ್ಲಿ ಅವರನ್ನು ರಾಜ್ಯಸಭೆಗೆ ಕಳುಹಿಸುವ ಭಾವನೆ ಇತ್ತು ಎಂದರು.ದೇವೇಗೌಡರು ರಾಜ್ಯಸಭೆಯಲ್ಲಿ ರಾಜ್ಯದ ಪರ, ನಾಡಿನ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದರು. ಆದರೆ, ನಾವೇನು ಅವರನ್ನು ಪರಿಗಣಿಸುವಂತೆ ಬಿಜೆಪಿ ಜೊತೆಗೆ ಮಾತನಾಡಿರಲಿಲ್ಲ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ನಮಗೆ ಈ ಬೆಳವಣಿಗೆ ಬೇಸರ ತಂದಿರುವುದು ನಿಜ. ದೇವೇಗೌಡರು ರಾಜ್ಯಸಭೆಯಲ್ಲಿ ಇದ್ದಿದ್ದರೆ ರಾಜ್ಯದ ಪರ ಮಾತನಾಡುತ್ತಿದ್ದರು. ಆದರೆ, ಹೈಕಮಾಂಡ್ ಮಟ್ಟದಲ್ಲಿ ಏನೇನು ಚರ್ಚೆ ನಡೆದಿದೆಯೋ ಗೊತ್ತಿಲ್ಲ ಎಂದರು.ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ದೇವೇಗೌಡರು ರಾಜ್ಯಸಭೆಯಲ್ಲಿ ಇರಬೇಕಿತ್ತು. ನಾಡಿನ ಅನೇಕ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದರು. ಆದರೆ, ನಮ್ಮ ಬಳಿ ಸಂಖ್ಯಾಬಲ ಇಲ್ಲ. ಬಿಟ್ಟು ಕೊಡಿ ಎಂದು ನಾವೇನು ಬಿಜೆಪಿಯನ್ನು ಕೇಳಿರಲಿಲ್ಲ ಎಂದು ಹೇಳಿದರು.ಪಿಎಂ ಅವಕಾಶ ಕೊಡಬಹುದಿತ್ತು- ಮಂಜು:ಶಾಸಕ ಎ.ಮಂಜು ಮಾತನಾಡಿ, ದೇವೇಗೌಡರಿಗೆ ರಾಜ್ಯಸಭಾ ಸ್ಥಾನ ತಪ್ಪಿಸಿದ್ದು ಬೇಸರ ತಂದಿದೆ. ಇದರಿಂದ ದೇವೇಗೌಡರಿಗೆ ಏನೂ ನಷ್ಟವಿಲ್ಲ. ಅವರು ರಾಜ್ಯಸಭೆಯಲ್ಲಿ ಇದ್ದಿದ್ದರೆ ನಾಡಿನ ಜನಕ್ಕೆ ಅನುಕೂಲವಾಗುತ್ತಿತ್ತು. ಪ್ರಧಾನಿ ಅವರು ದೇವೇಗೌಡರನ್ನು ಕರೆಸಿ ಮಾತನಾಡಿಸಿ ಅವಕಾಶ ಕೊಡಬಹುದಿತ್ತು. ಏನೇ ಆದರೂ ದೇವೇಗೌಡರು ಮನೆಯಲ್ಲಿ ಕೂರುವ ಜಾಯಮಾನದವರಲ್ಲ. ಈಗಲೂ ಅವರು ಜನಪರವಾಗಿ ಹೋರಾಟ ಮಾಡುತ್ತಾರೆ ಎಂದು ಹೇಳಿದರು.ಗೌಡರಿಗೆ ರಾಜ್ಯಸಭಾ ಸ್ಥಾನ ನಿರಾಕರಿಸಿದಕ್ಕೆ ಕಾಂಗ್ರೆಸ್ ಕಿಡಿ:ಬಿಜೆಪಿಯು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ರಾಜ್ಯಸಭೆ ನಾಮ ನಿರ್ದೇಶನ ಅವಕಾಶ ನಿರಾಕರಿಸಿರುವ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಕಿಡಿಕಾರಿದ್ದಾರೆ.ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಸುರ್ಜೇವಾಲ, ದೇವೇಗೌಡರಿಗೆ ರಾಜ್ಯಸಭೆ ಅವಕಾಶ ನಿರಾಕರಿಸಿ ಬಿಜೆಪಿ ಅವಮಾನ ಮಾಡಿದೆ. ಹೀಗಿದ್ದರೂ ಕೇಂದ್ರ ಸಚಿವ ಸ್ಥಾನ ಉಳಿಸಿಕೊಳ್ಳುವ ಉದ್ದೇಶದಿಂದ ಎಚ್.ಡಿ. ಕುಮಾರಸ್ವಾಮಿ ರಾಜಕೀಯ ಶರಣಾಗತಿ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.ದೇಶದಲ್ಲಿ ಈಗ ಬದುಕಿರುವ ಏಕೈಕ ಮಾಜಿ ಪ್ರಧಾನಿ ದೇವೇಗೌಡರು. ಅಂತಹವರನ್ನು ರಾಜ್ಯಸಭೆಗೆ ಕಳುಹಿಸಲ್ಲ ಎಂದರೆ ಬಿಜೆಪಿಯವರ ಮನಃಸ್ಥಿತಿ ಎಂತಹದ್ದು ಇರಬೇಕು? ಜೆಡಿಎಸ್‌ನವರಿಗೆ ಸ್ವಲ್ಪ ಆದರೂ ಸ್ವಾಭಿಮಾನ ಇದ್ದರೆ ಮೊದಲು ಬಿಜೆಪಿ ಮೈತ್ರಿ ಬಿಟ್ಟು ಹೊರಗೆ ಬರಲಿ ಎಂದು ಸವಾಲು ಹಾಕಿದರು.ದೇವೇಗೌಡರಿಗೆ ಅಪಮಾನ-ಬಿ.ಕೆ:ಈ ಬಗ್ಗೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಎಚ್.ಡಿ. ದೇವೇಗೌಡರ ಸಹಾಯದಿಂದ ಸಂಸತ್ತಿನಲ್ಲಿ ಬಿಜೆಪಿ ಬಿಲ್ ಪಾಸ್ ಮಾಡಿಕೊಂಡಿತು. ಈಗ ದೇವೇಗೌಡರಿಗೆ ಅಪಮಾನ ಮಾಡಿದೆ. ಇದು ದೇವೇಗೌಡರಿಗೆ ಮಾಡಿದ ಅವಮಾನವಲ್ಲ. ಕರ್ನಾಟಕ ಜನತೆಗೆ ಮಾಡಿದ ಅವಮಾನ, ಇದಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದರು.ಕಾಂಗ್ರೆಸ್ ಪಕ್ಷ ಅವರು ರಾಜ್ಯಸಭೆಗೆ ನಿಂತಾಗ ಬೆಂಬಲ ನೀಡಿ ಅವಿರೋಧವಾಗಿ ಆಯ್ಕೆ ಮಾಡಿದ್ದರು. ಬಳಿಕ ದೇವೇಗೌಡರನ್ನು ಬಿಜೆಪಿಯವರು ದುರ್ಬಳಕೆ ಮಾಡಿಕೊಂಡರು ಎಂದು ಟೀಕಿಸಿದರು.