ಕೂಡ್ಲಿಗಿ: ಹಳ್ಳಿಗಳಲ್ಲಿ ದಲಿತ ಕೇರಿಗಳಿಗೆ ಮೂಲಸೌಲಭ್ಯ ಒದಗಿಸುವುದು, ನೂರಾರು ವರ್ಷಗಳಿಂದ ದಲಿತರು ಸರ್ಕಾರಿ ಭೂಮಿ ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಕಬಳಿಸುವುದು, ದಲಿತರ ಮೇಲಿನ ದೌರ್ಜನ್ಯ ತಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.ಪಟ್ಟಣದ ಗಾಂಧೀಜಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕದಿಂದ ದಸಂಸ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ಮುಖ್ಯರಸ್ತೆ ಮೂಲಕ ಡಾ.ಬಿ.ಆರ್. ಅಂಬೇಡ್ಕರ್, ರಾಜವೀರ ಮದಕರಿ ನಾಯಕ, ಹಳೆ ಸಂತೆ ಮೈದಾನ, ಕೊತ್ತಲ ಆಂಜನೇಯ ದೇವಸ್ಥಾನ ಮಾರ್ಗವಾಗಿ ತಹಸೀಲ್ದಾರ್ ಕಚೇರಿವರೆಗೆ ಸಾಗಿ ಸಮಾವೇಶಗೊಳ್ಳಲಾಯಿತು.

ಜಿಲ್ಲಾ ಸಂಚಾಲಕ ಕೂಡ್ಲಿಗಿ ಎಸ್.ದುರುಗೇಶ್ ಮಾತನಾಡಿ, ತಾಲೂಕಿನಲ್ಲಿ ಪರಿಶಿಷ್ಟ ಜಾತಿಯವರು ಸರ್ಕಾರಿ ಭೂಮಿ ಸಾಗುವಳಿ ಮಾಡಿದ್ದರೆ, ಅದೇ ಜಮೀನುಗಳಲ್ಲಿ ಬೇರೆ ಸಮುದಾಯದವರು ದಬ್ಬಾಳಿಕೆ, ದೌರ್ಜನ್ಯ ನಡೆಸುವ ಮೂಲಕ ಮಾದಿಗರಿಂದ ಭೂಮಿ ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿವೆ. ಈ ಬಗ್ಗೆ ಶಾಸಕರು ಸರಿಪಡಿಸುವ ಭರವಸೆ ನೀಡಿದ್ದರೂ ಈಡೇರಿಸಿಲ್ಲ. ದಲಿತರಿಗೆ ಸ್ಮಶಾನಗಳಿಲ್ಲ. ಗಡ್ಡದಬೋರಯ್ಯನಹಟ್ಟಿ ದಲಿತ ಕಾಲೊನಿಯಲ್ಲಿ ಮಳೆ ನೀರು ನಿಂತು ಸಮಸ್ಯೆಯಾಗುತ್ತಿದ್ದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಪರಿಶಿಷ್ಟ ಜಾತಿಯ ಅಧಿಕಾರಿಗಳ ವಿರುದ್ಧ ಬೇರೆಯವರಿಂದ ಅರ್ಜಿಗಳನ್ನು ಬರೆಸಿ ಅವರನ್ನು ಸಸ್ಪೆಂಡ್ ಮಾಡುವಂಥ ಹುನ್ನಾರಗಳು ನಡೆಸಲಾಗುತ್ತಿದೆ ಎಂದರು.

ಎಸ್ಸಿ, ಎಸ್ಟಿ ಜಮೀನುಗಳನ್ನು ದಲ್ಲಾಳಿಗಳ ಮೂಲಕ ವಿಂಡ್ ಫ್ಯಾನ್ ಗಳಿಗೆ ಕೊಡಿಸಲಾಗುತ್ತಿದೆ. ಸರ್ಕಾರಿ ಜಮೀನುಗಳಲ್ಲಿ ಖಾಸಗಿ ಕಂಪನಿಗಳು ವಿಂಡ್ ಫ್ಯಾನ್ ಅಳವಡಿಸುತ್ತಿದ್ದರೂ, ವಿದ್ಯುತ್ ಮಾರ್ಗಗಳನ್ನು ಅಳವಡಿಸುತ್ತಿದರೂ ಅಧಿಕಾರಿಗಳು ಸುಮ್ಮನಿದ್ದಾರೆ. ಈ ಬಗ್ಗೆ ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ತಾಲೂಕು ಸಂಚಾಲಕ ಬಡೇಲಡುಕು ದುರುಗೇಶ್, ಜಿಲ್ಲಾ ಸಂಘಟನಾ ಸಂಚಾಲಕ ಕಂದಗಲ್ಲು ಪರಶುರಾಮ, ಕೊಟ್ಟೂರು ಮರಿಸ್ವಾಮಿ, ಬಿ.ಟಿ.ಗುದ್ದಿ ದುರುಗೇಶ್, ಡಿ.ಎಂ.ಈಶ್ವರಪ್ಪ, ಕಾನಮಡುಗು ಫಕೀರಪ್ಪ, ಎಚ್.ದುರುಗಪ್ಪ, ಮಹೇಶ್, ಲೋಕಿಕೆರೆ ಕರಿಬಸಪ್ಪ, ಬಣವಿಕಲ್ಲು ಸೈಕಲ್ ಬಸಣ್ಣ, ಬಿ.ಚೌಡೇಶ್, ಜಿ.ಚೌಡೇಶ್, ಮಹೇಶ್, ಮೂಗಪ್ಪ, ಅಜಯಕುಮಾರ್, ಜಿತೇಂದ್ರ, ಮಾಳೆಹಳ್ಳಿ ಎ.ಕೆ.ಮಂಜಪ್ಪ, ಸಕಲಾಪುರದಹಟ್ಟಿ ಚೌಡಪ್ಪ, ಯಲ್ಲಪ್ಪ, ಹಾರಕಬಾವಿ ಎಚ್.ಕಾಡಪ್ಪ, ಕಲ್ಲಹಳ್ಳಿ ಸೇದಬಾವಿ ಬಸವರಾಜ, ಕರಡಿ ತಿಪ್ಪೇಸ್ವಾಮಿ, ಜುಮ್ಮೋಬನಹಳ್ಳಿ ಹೊನ್ನೂರಪ್ಪ, ಹುಲಿಕೆರೆ ನಿಂಗಪ್ಪ, ಕಾನಹೊಸಹಳ್ಳಿ ಕರಿಬಸಪ್ಪ, ಮಲ್ಲೇಶ್, ತಾಯಕನಹಳ್ಳಿ ಕೃಷ್ಣಪ್ಪ, ಕುಮತಿ ಯಲ್ಲಪ್ಪ, ರಮೇಶ್, ಹುಲಿಕೆರೆ ನಿಂಗಮ್ಮ, ನಾಗರಾಜ, ಕುರಿಹಟ್ಟಿ ಮಹಾಂತೇಶ್, ಕಲ್ಲಹಳ್ಳಿ ಬಸವರಾಜ, ರುದ್ರಮುನಿ ಸೇರಿ ಸಾವಿರಕ್ಕೂ ಅಧಿಕ ಜನರು ಇದ್ದರು.