ಧಾರವಾಡ:
ಮುಂಗಾರು ಹಂಗಾಮು ಚುರುಕಾಗಿದ್ದು, ಮುಂದಿನ ಮೂರು ದಿನ ಜಿಲ್ಲೆಯಲ್ಲಿ ಆರೆಂಜ್ ಹಾಗೂ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ವಿಶೇಷವಾಗಿ ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳ ಅಚ್ಚು-ಕಟ್ಟು ಪ್ರದೇಶದಲ್ಲಿ ಭಾರಿ ಮಳೆ, ಪ್ರವಾಹದ ಸಾಧ್ಯತೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಭಾರಿ ಮಳೆಯಿಂದ ನೀರಿನ ಮಟ್ಟದಲ್ಲಿನ ಏರಿಕೆಯಾಗಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ. ಇದರಿಂದ ಬೆಣ್ಣಿಹಳ್ಳ ಮತ್ತು ತುಪ್ಪರಿ ಹಳ್ಳ, ನಗರ ಪ್ರದೇಶ ತಗ್ಗು ಪ್ರದೇಶಗಳಲ್ಲಿ, ಕಲ್ಲಿನ ಕ್ವಾರಿ, ಕಾಲುವೆ, ಕೃಷಿ ಹೊಂಡ, ತುಂಬಿ ಹರಿಯುವ ಚರಂಡಿ ಮತ್ತು ಪ್ರವಾಹ ಪೀಡಿತ ಪ್ರದೇಶಗಳ ಬಳಿ ಆಟವಾಡುವುದು, ಈಜುವುದು ಮತ್ತು ಸಂಚರಿಸಬಾರದು ಹೇಳಿದ್ದಾರೆ.
ಭಾರಿ ಮಳೆಯಿಂದಾಗಿ ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳಗಳಲ್ಲಿ ನೀರಿನ ಹೆಚ್ಚಿನ ಹರಿವಿನಿಂದ ಮುಳುಗಿರುವ ಸೇತುವೆ, ಮೇಲ್ಮಟ್ಟದಲ್ಲಿ ಹರಿಯುವ ಹಳ್ಳಗಳನ್ನು ದಾಟಲು ಪ್ರಯತ್ನಿಸಬಾರದು. ಜನ-ಜಾನುರುಗಳು ನೀರಿನ ಸೆಳೆತಕ್ಕೆ ಸಿಲುಕುವ ಸಾಧ್ಯತೆ ಇದ್ದು, ಎಚ್ಚರಿಕೆ ವಹಿಸಬೇಕು. ಹಳ್ಳ-ಕೊಳ್ಳ, ಜಲಪಾತ, ಕೆರೆ, ಕೃಷಿ ಹೊಂಡಗಳು ಅಪಾಯ ಮಟ್ಟಕ್ಕಿಂತ ಹೆಚ್ಚಾಗಿ ನೀರು ಸಂಗ್ರಹವಿರುವ ಸ್ಥಳಗಳ ಹತ್ತಿರ ಸಾರ್ವಜನಿಕರು ಸೆಲ್ಫಿ ಅಥವಾ ಪೋಟೋ ತೆಗೆಯಲು ಹೋಗಬಾರದು ಎಂದು ತಿಳಿಸಿದ್ದಾರೆ.ತಗ್ಗು ಪ್ರದೇಶ ಮತ್ತು ಪ್ರವಾಹ ಪೀಡಿತ ಜನವಸತಿ ಪ್ರದೇಶಗಳಲ್ಲಿ ಪೋಷಕರು ಮಕ್ಕಳ ಬಗ್ಗೆ ವಿಶೇಷ ಕಾಳಜಿವಹಿಸಬೇಕು. ಪ್ರವಾಹ ಸಂದರ್ಭಗಳಲ್ಲಿ, ಶಿಥಿಲಗೊಂಡ ಸೇತುವೆ, ಅದೃಶ್ಯ ತೆರೆದ ಮ್ಯಾನ್‌ಹೋಲ್, ಹಾನಿಗೊಂಡ ರಸ್ತೆಗಳ ಮುಖಾಂತರ ಸಂಚರಿಸಬಾರದು. ಈ ಪ್ರದೇಶದಲ್ಲಿ ನೀರಿನ ಸೆಳೆತದಿಂದ ಗಂಭೀರ ಪ್ರಮಾಣದ ಅಪಾಯ ಆಗಬಹುದು. ಆದ್ದರಿಂದ ಪ್ರವಾಹದ ನೀರಿನಲ್ಲಿ ಸಂಚಾರ ಮಾಡಬಾರದು ಎಂದು ತಿಳಿ ಹೇಳಿರುವ ಅವರು, ವಿದ್ಯುತ್ ಸಂಪರ್ಕ ಕಲ್ಪಿಸುವ ಸ್ಥಾವರ, ರಚನೆಗಳ ಬಳಿ ನೀರಿನಿಂದ ಆವೃತಗೊಂಡ ಪ್ರದೇಶ, ಶಿಥಿಲಗೊಂಡ, ಮುರಿದು ಬಿದ್ದ ವಿದ್ಯುತ್ ಕಂಬ, ಕಡಿತಗೊಂಡ ವಿದ್ಯುತ್ ತಂತಿ ಮುಟ್ಟಬಾರದು. ನಿರಂತರ ಮಳೆಯಿಂದ ಅಪಾಯವಿರುವ ಮನೆ, ಗೋಡೆ ಇತರೆ ಕಟ್ಟಡಗಳು ಕುಸಿಯುವ ಸಾಧ್ಯತೆ ಇದೆ. ಶಿಥಿಲಾವಸ್ಥೆಯಲ್ಲಿ ಮರಗಳು ಬೀಳುವ ಸಂಭವವಿದ್ದು ಸಾವು-ನೋವುಗಳು ಸಂಭವಿಸಬಹುದು. ಆದರಿಂದ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಾರ್ಯಾಲಯ0836-2445508 ಮತ್ತು 1077, ಧಾರವಾಡ ಎಸಿ ಕಚೇರಿ 0836-2233860 ಅಥವಾ ಆಯಾ ತಾಲೂಕು ಕಚೇರಿಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.