ಕನ್ನಡಪ್ರಭ ವಾರ್ತೆ ಮಳವಳ್ಳಿ

ನಾಯಕತ್ವಕ್ಕೆ ಕೇವಲ ಅಧಿಕಾರ ಅಥವಾ ಹುದ್ದೆಯಲ್ಲ. ಅದು ಸೇವೆ, ತ್ಯಾಗ, ಜವಾಬ್ದಾರಿ ಹಾಗೂ ನೈತಿಕ ಮೌಲ್ಯಗಳ ಪ್ರತೀಕಾರವಾಗಿದೆ ಎಂದು ಅನಿತಾ ಕಾನ್ಟೆಂಟ್ ಮುಖ್ಯಸ್ಥ ಇಸಬೆಲ್ ಡಿಸೋಜಾ ತಿಳಿಸಿದರು.

ತಾಲೂಕಿನ ಬೊಪ್ಪೇಗೌಡನಪುರ (ಬಿಜಿಪುರ) ಹೋಬಳಿಯ ಪಂಡಿತಹಳ್ಳಿಯ ಸೆಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಮಂಗಳವಾರ ನಡೆದ 2026-27ನೇ ಸಾಲಿನ ವಿದ್ಯಾರ್ಥಿಗಳ ಸಂಸತ್ತಿನ ಪದಗ್ರಹಣ ಹಾಗೂ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ನಿಜವಾದ ನಾಯಕರು ತಮ್ಮ ಮಾತುಗಳಿಂದಲ್ಲ ತಮ್ಮ ನಡೆ-ನುಡಿಗಳ ಮೂಲಕ ಇತರರಿಗೆ ಪ್ರೇರಣೆಯಾಗುತ್ತಾರೆ. ಅವರ ಆಡಳಿತ ವೈಖರಿ ಅವರ ನಾಯಕತ್ವವನ್ನು ತೋರಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಎಲ್ಲರನ್ನು ಗೌರವದಿಂದ ಕಾಣಬೇಕು ಎಂದರು.

ಮಕ್ಕಳ ಬಾಲ್ಯದಿಂದಲೇ ಪ್ರೀತಿ, ಸಹಾನುಭೂತಿ ಮತ್ತು ಸಹಕಾರದ ಮನೋಭಾವ ಬೆಳೆಸಿಕೊಳ್ಳಬೇಕು. ಶಿಕ್ಷಣವು ಕೇವಲ ಜ್ಞಾನವನ್ನು ನೀಡುವುದಲ್ಲ ಬದಲಾಗಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ನಾಯಕತ್ವದಲ್ಲಿ ಪ್ರಾಮಾಣಿಕತೆ, ಶಿಸ್ತು, ಸಮಯಪಾಲನೆ, ವಿನಯ ಮತ್ತು ನ್ಯಾಯವನ್ನು ತನ್ನ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದರು.


ಯಶಸ್ವಿ ನಾಯಕತ್ವವು ಅಧಿಕಾರ ಚಲಾಯಿಸುವುದರಿಂದ ಬರುವುದಿಲ್ಲ. ಇತರರನ್ನು ಬೆಳೆಸುವ ಪ್ರೋತ್ಸಾಹಿಸುವ ಮತ್ತು ಒಗ್ಗೂಡಿಸುವ ಗುಣಗಳಿಂದ ಕಾಣುತ್ತದೆ. ನಾಯಕರಾಗಿರುವ ವಿದ್ಯಾರ್ಥಿಗಳು ಶಾಲೆ ಗೌರವ ಹೆಚ್ಚಿಸುವ ಜವಾಬ್ದಾರಿ ಇದೆ ಎಂದರು.

ಪ್ರಾಂಶುಪಾಲ ಎಸ್.ಜೆ.ಫಾದರ್ ಆಲ್ವಿನ್ ಡಿಸೋಜ ಮಾತನಾಡಿ, ವಿದ್ಯಾರ್ಥಿ ನಾಯಕರು ತಮ್ಮ ಹುದ್ದೆಯನ್ನು ಗೌರವದ ಸಂಕೇತವಾಗಿ ಮಾತ್ರವಲ್ಲ ಜವಾಬ್ದಾರಿಯ ಅವಕಾಶವೆಂದು ಪರಿಗಣಿಸಿ ಕಾರ್ಯನಿರ್ವಹಿಸಬೇಕು ಹಾಗೂ ಶಾಲೆಯ ಮೌಲ್ಯಗಳು, ಶಿಸ್ತು ಮತ್ತು ಸಂಪ್ರದಾಯಗಳನ್ನು ಎತ್ತಿಹಿಡಿದು ಪ್ರಾಮಾಣಿಕತೆ, ಸಮಯಪಾಲನೆ ಹಾಗೂ ಸೇವಾ ಮನೋಭಾವದ ಮೂಲಕ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದರು.

ಶಾಲೆ ಸಂಚಾಲಕ ಎಸ್.ಜೆ.ಪ್ರದೀಪ್ ಆಂತೋನಿ ಮಾತನಾಡಿ, ಇಂದಿನ ನಿಮ್ಮ ಸಣ್ಣ ಪ್ರಯತ್ನಗಳೇ ನಾಳೆಯ ಯಶಸ್ಸು ನಾಯಕತ್ವಕ್ಕೆ ಭದ್ರಬುನಾದಿಯಾಗಲಿದೆ. ಜೆಸ್ಯೂಟ್ ಶಿಕ್ಷಣದ ಉದ್ದೇಶವು ಕೇವಲ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವುದಲ್ಲ. ಸಮಾಜ ಮುಖಿ ಮೌಲ್ಯ ಆಧಾರಿತ ಮತ್ತು ಸೇವಾ ಮನೋಭಾವವುಳ್ಳ ನಾಯಕರನ್ನು ರೂಪಿಸುವುದಾಗಿದೆ. ಇತರರಿಗಾಗಿ ಬದುಕುವ ವ್ಯಕ್ತಿಗಳಾಗಿರಿ ಎಂಬ ಜೆಸ್ಯೂಟ್ ಶಿಕ್ಷಣದ ಧೈರ್ಯವನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಪಥಸಂಚಲನ ಮೂಲಕ ವೇದಿಕೆ ಕರೆತಂದು ನೂತನ ನಾಯಕತ್ವ ಪಡೆದ ವಿದ್ಯಾರ್ಥಿ ಪರಿಷತ್ತಿನ ಸದಸ್ಯರಿಗೆ ಸ್ಯಾಶ್ ಮತ್ತು ಬ್ಯಾಡ್ಜ್ ಗಳನ್ನು ಪ್ರಧಾನ ಮಾಡಲಾಯಿತು. ಪ್ರಮುಖರಾದ ನಿತಾ, ಶಿಕ್ಷಕರುಗಳು, ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು.