ದೂರು ನೈಜವಾಗಿದ್ದರೆ ಕಾನೂನು ಕ್ರಮ ಸುಲಭ

| Published : Dec 21 2024, 01:17 AM IST

ಸಾರಾಂಶ

ವರದಕ್ಷಿಣೆ ಹಾಗೂ ಕೌಟುಂಬಿಕ ದೌರ್ಜನ್ಯದ ಕೆಲವು ಪ್ರಕರಣಗಳಲ್ಲಿ ಘಟನೆಗಳು ಏನೆಲ್ಲಾ ಘಟಿಸಿರುತ್ತವೋ ಅದರ ಜೊತೆಗೆ ಸುಳ್ಳು ಹೇಳಿಕೆಗಳನ್ನು ಮತ್ತು ಸುಳ್ಳು ದೂರುಗಳನ್ನು ಕೊಡುವುದರಿಂದ ಕೆಲವೊಮ್ಮೆ ಅಪರಾಧಿಗಳು ಶಿಕ್ಷೆಯಿಂದ ತಪ್ಪಿಹೋಗುತ್ತಾರೆ. ಕೆಲವೊಮ್ಮೆ ಕೆಲವರಿಗೆ ಅನಾಗತ್ಯವಾಗಿ ತೊಂದರೆಕೊಡಬೇಕೆಂದು ದೂರು ನೀಡುವುದು ಅಕ್ಷಮ್ಯ ತಪ್ಪಾಗುತ್ತದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಯಾವುದೇ ರೀತಿಯ ಅನ್ಯಾಯಕ್ಕೆ ಹಾಗೂ ದೌರ್ಜನ್ಯಕ್ಕೆ ಮಹಿಳೆಯರು ಒಳಗಾದರೆ ದೂರನ್ನು ನೈಜವಾಗಿ ಹಾಗೂ ನಿಖರವಾಗಿ ನೀಡಿದರೆ ಕಾನೂನಿನ ಶಿಸ್ತುಕ್ರಮಕ್ಕೆ ಒಳಪಡಿಸುವುದು ಸುಲಭವಾಗುತ್ತದೆ. ಈ ಬಗ್ಗೆ ಮಹಿಳೆಯರಿಗೆ ಅರಿವು ಮೂಡಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ನೇರಳೆ ವೀರಭದ್ರಯ್ಯ ಭವಾನಿ ತಿಳಿಸಿದರು.

ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ “ವಿಧಾನ್ ಸೆ ಸಮಾಧಾನ್” ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ “ಮಹಿಳೆಯರಿಗೆ ಕಾನೂನು ಅರಿವು ಕಾರ್ಯಾಗಾರ”ವನ್ನು ಉದ್ಘಾಟಿಸಿ ಮಾತನಾಡಿದರು.

ದೂರು ವಸ್ತುನಿಷ್ಠವಾಗಿರಲಿ

ವರದಕ್ಷಿಣೆ ಹಾಗೂ ಕೌಟುಂಬಿಕ ದೌರ್ಜನ್ಯದ ಕೆಲವು ಪ್ರಕರಣಗಳಲ್ಲಿ ಘಟನೆಗಳು ಏನೆಲ್ಲಾ ಘಟಿಸಿರುತ್ತವೋ ಅದರ ಜೊತೆಗೆ ಸುಳ್ಳು ಹೇಳಿಕೆಗಳನ್ನು ಮತ್ತು ಸುಳ್ಳು ದೂರುಗಳನ್ನು ಕೊಡುವುದರಿಂದ ಕೆಲವೊಮ್ಮೆ ಅಪರಾಧಿಗಳು ಶಿಕ್ಷೆಯಿಂದ ತಪ್ಪಿಹೋಗುತ್ತಾರೆ. ಕೆಲವೊಮ್ಮೆ ಕೆಲವರಿಗೆ ಅನಾಗತ್ಯವಾಗಿ ತೊಂದರೆಕೊಡಬೇಕೆಂದು ದೂರು ನೀಡುವುದು ಅಕ್ಷಮ್ಯ ತಪ್ಪಾಗುತ್ತದೆ. ಇದರಿಂದ ತಪ್ಪೆಸಗದ ಪುರುಷರಿಗೆ ಅನ್ಯಾಯವಾಗುತ್ತದೆ. ಈ ಅಂಶಗಳನ್ನು ಮಹಿಳೆಯರು ಅರಿತು ವಸ್ತುನಿಷ್ಠ ದೂರು ನೀಡಿದರೆ ತಪ್ಪಿತಸ್ಥರನ್ನು ಸಜೆಗೆ ಒಳಪಡಿಸುವುದು ಸುಲಭವಾಗುತ್ತದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಕುರಿತು ಹಾಗೂ ಅವರ ಸಮಸ್ಯೆಗಳ ನಿವಾರಿಸುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ವತಿಯಿಂದ ಜಾಗೃತಿ ಮೂಡಿಸುವ ಅರಿವು ಕಾರ್ಯಕ್ರಮಗಳನ್ನು ನೆಡಸಲಾಗುತ್ತಿದೆ ಎಂದು ತಿಳಿಸಿದರು.ತಪ್ಪಿತಸ್ಥರ ವಿರುದ್ಧ ಕ್ರಮ

ಗ್ರಾಮೀಣ ಭಾಗಗಳಲ್ಲಿ ನಡೆಯುವ ಭ್ರೂಣ ಹತ್ಯೆ, ಬಾಲ್ಯ ವಿವಾಹ, ಪೋಕ್ಸೋ ಪ್ರಕರಣ, ಅಪಹರಣ, ಲೈಂಗಿಕ ದೌರ್ಜನ್ಯದಂತಹ ಅಪರಾಧಗಳನ್ನು ತಡೆಯಲು 1098 ಮತ್ತು 112 ಸಹಾಯವಾಣಿಗಳು ಸಹಕರಿಯಾಗಿವೆ. ಈ ಸಹಾಯವಾಣಿಗಳಿಂದ ಹೆಚ್ಚಿನ ಪ್ರಕರಣಗಳು ಸಕ್ಷಮದ ಪ್ರಾಧಿಕಾರಗಳ ಗಮನಕ್ಕೆ ಬಂದು ತಪ್ಪಿತಸ್ಥರ ಮೇಲೆ ಕಾನೂನು ಶಿಸ್ತು ಕ್ರಮ ಜರುಗುತ್ತಿರುವುದರಿಂದ ಅಪರಾಧಗಳು ನಿಯಂತ್ರಣಕ್ಕೆ ಬರುತ್ತಿವೆ ಎಂದರು. ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ಶಿಲ್ಪ ಮಾತನಾಡಿ, ಮಹಿಳೆಯರ ಮೇಲೆ ಆಸಿಡ್ ದಾಳಿ, ಅತ್ಯಾಚಾರ, ಅಪಹರಣ, ಲೈಂಗಿಕ ದೌರ್ಜನ್ಯದಂತಹ ಅಪರಾಧಗಳ ತಡೆಗಟ್ಟುವಿಕೆ ಹಾಗೂ ಮಹಿಳೆಯರ ಹಕ್ಕುಗಳು ಮತ್ತು ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಪಂ ಸಿಇಒ ಪ್ರಕಾಶ್ ಜಿ.ಟಿ ನಿಟ್ಟಾಲಿ, ಹೆಚ್ಚುವರಿ ಎಸ್ಪಿ ಆರ್.ಐ ಖಾಸಿಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೆಂಕಟೇಶ್ ರೆಡ್ಡಿ, ವಕೀಲ ನಾರಾಯಣಸ್ವಾಮಿ ಮತ್ತಿತರರು ಇದ್ದರು.