ಸುಪ್ರೀಂ ಕೋರ್ಟ್‌ಲ್ಲಿ ಶಾಸಕ ಯತ್ನಾಳಗೆ ಗೆಲುವು :ಎಥೆನಾಲ್ ಪವರ್‌ ಘಟಕ ಪ್ರಾರಂಭಿಸಲು ಅನುಮತಿ

| Published : Dec 21 2024, 01:17 AM IST / Updated: Dec 21 2024, 12:48 PM IST

ಸಾರಾಂಶ

  ಸಿದ್ದಸಿರಿ ಸೌಹಾರ್ದಾ ಸಹಕಾರ ನಿಯಮಿತ ಸಿದ್ದಸಿರಿ ಎಥೆನಾಲ್ ಪವರ ಘಟಕ ಪ್ರಾರಂಭಿಸಲು ಸುಪ್ರಿಂಕೋರ್ಟ ಶುಕ್ರವಾರ ಐತಿಹಾಸಿಕ ತೀರ್ಪು ನೀಡಿದ ಹಿನ್ನೆಲೆ ಪಟ್ಟಣದ ಬಸವೇಶ್ವರ ಚೌಕನಲ್ಲಿ ಹಾಗೂ ಬಸ್‌ ನಿಲ್ದಾಣ ಹತ್ತಿರದಲ್ಲಿ ರೈತರು ಪಟಾಕಿ ಸಿಡಿಸಿ ಸಿಹಿತಿಂಡಿ ಹಂಚಿಕೊಂಡು ಸಂಭ್ರಮಾಚರಣೆ ಮಾಡಿದರು.

  ಚಿಂಚೋಳಿ : ಪಟ್ಟಣದ ಕಲಬುರಗಿ-ಚಿಂಚೋಳಿ ರಾಜ್ಯಹೆದ್ದಾರಿ ಪಕ್ಕದಲ್ಲಿ ಸ್ಥಾಪಿತವಾಗಿರುವ ಸಿದ್ದಸಿರಿ ಸೌಹಾರ್ದಾ ಸಹಕಾರ ನಿಯಮಿತ ಸಿದ್ದಸಿರಿ ಎಥೆನಾಲ್ ಪವರ ಘಟಕ ಪ್ರಾರಂಭಿಸಲು ಸುಪ್ರಿಂಕೋರ್ಟ ಶುಕ್ರವಾರ ಐತಿಹಾಸಿಕ ತೀರ್ಪು ನೀಡಿದ ಹಿನ್ನೆಲೆ ಪಟ್ಟಣದ ಬಸವೇಶ್ವರ ಚೌಕನಲ್ಲಿ ಹಾಗೂ ಬಸ್‌ ನಿಲ್ದಾಣ ಹತ್ತಿರದಲ್ಲಿ ರೈತರು ಪಟಾಕಿ ಸಿಡಿಸಿ ಸಿಹಿತಿಂಡಿ ಹಂಚಿಕೊಂಡು ಸಂಭ್ರಮಾಚರಣೆ ಮಾಡಿದರು.

ಪಟ್ಟಣದಲ್ಲಿ ಸಿದ್ದಸಿರಿ ಸೌಹಾರ್ದ ಎಥೆನಾಲ್ ಪವರ್‌ ಘಟಕವು ತಾಲೂಕಿನ ಸಾವಿರಾರು ರೈತರು ಬೆಳೆದ ಕಬ್ಬನ್ನು ಖರೀದಿಸಿ ಕಳೆದ 2023 ನವೆಂಬರನಲ್ಲಿ ಕಬ್ಬು ನುರಿಸುವ ಯಂತ್ರಗಳಿಗ ಪೂಜೆ ಸಲ್ಲಿಸಿ ಚಾಲನೆ ನೀಡಲಾಗಿತ್ತು, ಆದರೆ ಸಿದ್ದಸಿರಿ ಎಥೆನಾಲ್ ಪವರ ಘಟಕವು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ಮತ್ತು ನಿಯಂತ್ರಣ ಮಂಡಳಿಯ ಷರತ್ತುಬದ್ದ ನಿಯಮ ಉಲ್ಲಂಘಿಸಿದೆ ಎಂದು ನೋಟಿಸು ಜಾರಿ ಮಾಡಿ ಎಥೆನಾಲ್ ಪವರ್‌ ಬಂದ್ ಮಾಡಲಾಗಿತ್ತು.

ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ್ದ ನೋಟಿಸ್‌ಗೆ ಶಾಸಕ ಬಸನಗೌಡ ಪಾಟೀಲ ಹೈಕೋರ್ಟ ಮೋರೆ ಹೋಗಿದ್ದರು. ಹೈಕೋರ್ಟ್‌ ಸಿದ್ದಸಿರಿ ಎಥೆನಾಲ್ ಪವರ್‌ ಘಟಕವು ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ತೀರ್ಪು ನೀಡಿತ್ತು. ರಾಜ್ಯ ಪರಿಸರ ಮಾಲಿನ್ಯ ಮತ್ತು ನಿಯಂತ್ರಣ ಮಂಡಳಿ ಸುಪ್ರಿಂ ಕೋರ್ಟ್‌ಲ್ಲಿ ಮೇಲ್ಮನವಿ ಸಲ್ಲಿಸಿ ಆಕ್ಷೇಪಣೆ ಸಲ್ಲಿಸಿತು.

ಶುಕ್ರವಾರ ಸುಪ್ರೀಂ ಕೋರ್ಟ್‌ ಸಿದ್ದಸಿರಿ ಎಥೆನಾಲ್ ಪವರ್‌ ಘಟಕವನ್ನು ಪ್ರಾರಂಭಿಸಲು ರಾಜ್ಯ ಸರಕಾರವು 7 ದಿವಸದೊಳಗೆ ಅನುಮತಿ ನೀಡುವಂತೆ ತೀರ್ಪು ನೀಡಿದೆ.

ಪಟ್ಟಣದ ಬಸವೇಶ್ವರ ಚೌಕನಲ್ಲಿ ರೈತ ಹೋರಾಟರರು ಕಳೆದ 60 ದಿನಗಳಿಂದ ಧರಣಿ ನಡೆಸುತ್ತಿದ್ದ ಕಬ್ಬು ಬೆಳದ ರೈತರು ಹರ್ಷದಿಂದ ಪಟಾಕಿ ಸಿಡಿಸಿ ಸಿಹಿ ಹಂಚಿಕೊಂಡು ಸಂಭ್ರಮಿಸಿದರು.

ರಾಜಕೀಯ ದುರುದ್ದೇಶದಿಂದ ಸಿದ್ದಸಿರಿ ಎಥೆನಾಲ್ ಪವರ್‌ ಘಟಕ ಬಂದ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಶಾಸಕ ಡಾ.ಅವಿನಾಶ ಜಾಧವ್ ಅ.30 ಎಂದು ಚಿಂಚೋಳಿ ಬಂದ್ ಮಾಡಿ ಮಾಡಿ ರಾಜ್ಯ ಸರಕಾರ ರೈತರ ವಿರೋಧಿಯಾಗಿದೆ ಎಂದು ಪ್ರತಿಭಟನೆ ನಡೆಸಿದ್ದರು. ಸೇಡಂ ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರು ಡಿ.4ರಂದು ಪ್ರತಿಭಟನೆಯಲ್ಲಿ ಭಾಗವಹಿಸಿ ಸಿದ್ದಸಿರಿ ಎಥೆನಾಲ್ ಪವರ್‌ ಘಟಕ ಪರಿಸರ ಮಾಲಿನ್ಯ ಉಲ್ಲಂಘನೆ ಮಾಡಿಲ್ಲ, ಆದರೆ ಕಾಂಗ್ರೆಸ ಪಕ್ಷದ ಅರಣ್ಯ ಸಚಿವ ಈಶ್ವರ್‌ ಖಂಡ್ರೆಯವರು ಭಾಲ್ಕಿ ಸಕ್ಕರೆ ಕಾರಖಾನೆಗೆ ಕಬ್ಬು ಸಾಗಿಸಿಕೊಳ್ಳಲು ಉದ್ದೇಶ ಪೂರ್ವಕವಾಗಿ ಬಂದ್ ಮಾಡಿಸಿದ್ದರು ಗಂಭೀರ ಆರೋಪ ಮಾಡಿದ್ದರು.

ಸಿದ್ದಸಿರಿ ಎಥೆನಾಲ್ ಘಟಕವು ನ್ಯಾಯಲಯದಲ್ಲಿ ವಿಚಾರಣೆ ಹಂತದಲ್ಲಿದೆ ಎಂದು ಜಿಲ್ಲಾಧಿಕಾರಿಗಳು ಸಿದ್ದಸಿರಿ ಎಥೆನಾಲ್ ಘಟಕದ 300 ಗ್ರಾಮಗಳ ರೈತರ ಕಬ್ಬನ್ನು ಬೇರೆ ಕಂಪನಿಗಳಿಗೆ ಹಂಚಿಕೆ ಮಾಡಿದ್ದರು. 111 ಚಿಂಚೋಳಿ, 77 ಚಿತ್ತಾಪೂರ, 112 ಸೇಡಂ ತಾಲೂಕಿನ ಗ್ರಾಮಗಳ ರೈತರ ಕಬ್ಬನ್ನು ಸಾಗಿಸಲು ವಿವಿಧ ಸಕ್ಕರೆ ಕಾರ್ಖಾನೆಗಳಿಗೆ ಹಂಚಿಕೆ ಮಾಡಿ ನ.13ರಂದು ಆದೇಶ ನೀಡಿದ್ದರು.

ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನ.27ರಂದು ರೈತರ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ, ಸಕ್ಕರೆ ಕಾರ್ಖಾನೆಯಿಂದ ಚಿಂಚೋಳಿ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿಯಾಗುತ್ತಿದೆ. ಎಥೆನಾಲ್ ಪವರ್‌ ಘಟಕ ಪ್ರಾರಂಭಿಸಲು 850 ಕೋಟಿ ಬಂಡವಾಳ ಹೂಡಿಕೆ ಮಾಡಿದ್ದೇನೆ. ಆದರೆ ರಾಜ್ಯದ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ನಮ್ಮ ಕಂಪನಿ ಬಂದ್ ಮಾಡಿಸಿದ್ದಾರೆ. ಮುಂದೆ ರೈತರಿಗೋಸ್ಕರ ಯಾವುದೇ ಕೆಲಸ ಮಾಡುವುದಿಲ್ಲವೆಂದು ಭಾವುಕರಾಗಿ ಮಾತನಾಡಿ, ರಾಜ್ಯ ಸರಕಾರದ ಮಲತಾಯಿ ಧೋರಣೆ ಕುರಿತು ಆಪಾದಿಸಿದ್ದರು. ಆದರೆ ಈಗ ಸುಪ್ರಿಂ ಕೋರ್ಟ್‌ ತೀರ್ಪಿನಿಂದ ಹರ್ಷ ವ್ಯಕ್ತಪಡಿಸಿದ್ದಾರೆ.

ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರಿಂಕೋರ್ಟ್‌ ಎಥೆನಾಲ್ ಪವರ ಘಟಕ ಪುನರಾಂಭಕ್ಕೆ ತೀರ್ಪು ನೀಡಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ ಹಾಗೂ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕ ವರ್ಗದಲ್ಲಿ ಸಂತಸವನ್ನುಂಟು ಮಾಡಿದೆ.

ರೈತ ಮುಖಂಡರಾದ ನ್ಯಾಯವಾದಿ ಶಿವಶರಣಪ್ಪ ಜಾಪಟ್ಟಿ, ಜಗದೀಶ ಪಾಟೀಲ, ವೀರಣ್ಣ ಗಂಗಾಣಿ, ನಂದಕುಮಾರ ಪಾಟಿಲ, ಜನಾರ್ಧನರಾವ ಕುಲಕರ್ಣಿ, ರಾಮರಾವ್‌ ಪಾಟೀಲ, ಗೌರಿಶಂಕರ ಉಪ್ಪಿನ, ಮಲ್ಲಿಕಾರ್ಜುನ ಕೊಡದೂರ, ಆತೀಶ ಪವಾರ, ಜೆಡಿಎಸ್ ತಾಲೂಕ ಅಧ್ಯಕ್ಷ ರವಿಶಂಕರರೆಡ್ಡಿ ಮುತ್ತಂಗಿ, ಶಂಕರ ಚೌಕಾ, ಶ್ರೀನಿವಾಸ ಪೂಜಾರಿ, ಸೂರ್ಯಕಾಂತ ಹುಲಿ ‘ವಿವಿಧ ಮಠಾಧೀಶರು ಹರ್ಷ ವ್ಯಕ್ತಪಡಿಸಿದ್ದಾರೆ.