ಸಾರಾಂಶ
ಯಲ್ಲಾಪುರ: ಗುರು ಕಲಿಸಿದ ಪಾಠ ಮತ್ತು ಜೀವನಾನುಭವ ವಿಶೇಷವಾದದ್ದು. ಅದೇ ಮುಂದೆ ಜೀವನದಲ್ಲಿ ದಾರಿದೀಪವಾಗುತ್ತದೆ ಎಂದು ಶಾಲೆಯ ಹಳೆಯ ವಿದ್ಯಾರ್ಥಿನಿ, ಆಯುರ್ವೇದ ವೈದ್ಯೆ ತ್ರಿವೇಣಿ ಕಲ್ಗಾರೆ ತಿಳಿಸಿದರು.ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ನಡೆದ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ಮಾತನಾಡಿದರು.ತಮ್ಮ ಶಾಲಾ ಜೀವನದ ಅನೇಕ ಘಟನೆಗಳನ್ನು ಮೆಲುಕು ಹಾಕಿ, ಶಾಲೆಯಲ್ಲಿ ಮಾಡುವ ಅನೇಕ ತಪ್ಪುಗಳನ್ನು ಶಿಕ್ಷಕರು ತಿದ್ದುವುದು ವಿದ್ಯಾರ್ಥಿಗಳ ಭವಿಷ್ಯದ ಜೀವನವನ್ನು ರೂಪಿಸುತ್ತದೆ. ತಪ್ಪಿಗೆ ಶಿಕ್ಷೆಯನ್ನು ನೀಡಿದರೂ ಅದು ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಾಯಕ. ಅಂದು ಶಾಲೆಯಲ್ಲಿ ಕಲಿಸಿದ ಅನೇಕ ಕಲೆಗಳು ಇಂದಿಗೂ ನೆನಪಿನಲ್ಲಿದೆ ಎಂದರು.ಸಂಸ್ಥೆಯ ಗೌ. ಕಾರ್ಯದರ್ಶಿ ನರಸಿಂಹ ಕೋಣೆಮನೆ ಮಾತನಾಡಿ, ನಮ್ಮ ತಾಲೂಕಿನ, ಜಿಲ್ಲೆಯ ವಿದ್ಯಾರ್ಥಿಗಳಿಗೆ ದೂರದ ಊರುಗಳಿಗೆ ವಿದ್ಯಾಭ್ಯಾಸಕ್ಕಾಗಿ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ. ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಅನುಭವಿ ಶಿಕ್ಷಕರ ಮೂಲಕ ಶಿಕ್ಷಣ ನೀಡುತ್ತಿದ್ದೇವೆ ಎಂದರು.ಸಂಸ್ಥೆಯ ಆಡಳಿತಾಧಿಕಾರಿ ಅಜಯ ಭಾರತೀಯ ಮಾತನಾಡಿ, ವಿದ್ಯಾರ್ಥಿಯ ವೈಯಕ್ತಿಕ ಸಾಧನೆ ಸಂಸ್ಥೆಯ ಮತ್ತು ಕುಟುಂಬಕ್ಕೂ ಹೆಮ್ಮೆ ತರುವ ಸಂಗತಿಯಾಗಿದೆ. ಸ್ಪರ್ಧೆಗಳು ಮಕ್ಕಳ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಕಾರಣವಾಗುತ್ತದೆ ಎಂದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸುಧಾಕರ ನಾಯಕ ಮಾತನಾಡಿ, ವಿದ್ಯೆಯಿಂದ ವಿನಯ ಸಂಪಾದಿಸಬೇಕು. ಅದರಿಂದ ಪರಿಪೂರ್ಣತೆ ಜತೆಗೆ ಭವಿಷ್ಯಕ್ಕೆ ಬೇಕಾದವುಗಳನ್ನು ಸಾಧಿಸಲು ಸಾಧ್ಯ. ಜೀವನದಲ್ಲಿ ಶಿಸ್ತು, ಸಂಯಮಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಕೇವಲ ವಿದ್ಯೆಯೊಂದೇ ಸಾಲದು. ಸಂಸ್ಕಾರ, ಸಂಸ್ಕೃತಿ ನಮ್ಮ ಮೂಲ ಬೇರು. ಅದರಿಂದ ದೂರ ಹೋಗಬಾರದು ಎಂದರು. ನಂತರ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪಾಲಕರಾದ ರಾಜೇಶ್ವರಿ ಸಿದ್ದಿ, ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಶಿಕ್ಷಕರು, ಕೇಂದ್ರೀಯ ಶಾಲೆಯ ಮುಖ್ಯಾಧ್ಯಾಪಕಿ ಮಹಾದೇವಿ ಭಟ್ಟ, ಪತ್ರಿಕೋದ್ಯಮ ಕಾಲೇಜಿನ ಉಪನ್ಯಾಸಕಿ ಸ್ಫೂರ್ತಿ ಹೆಗಡೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ಸ್ವಾಗತಿಸಿದರು. ಶಿಕ್ಷಕರಾದ ಪ್ರೇಮಾ ಗಾವ್ಕರ್ ನಿರ್ವಹಿಸಿದರು. ಮಹೇಶ್ ನಾಯಕ ವಂದಿಸಿದರು.