ಹೆಬ್ಬಾರ್ ರಾಜೀನಾಮೆ ನೀಡಿ ಚುನಾವಣೆ ಎದುರಿಸಲಿ: ಉಷಾ ಹೆಗಡೆ

| Published : Jun 18 2024, 12:46 AM IST

ಹೆಬ್ಬಾರ್ ರಾಜೀನಾಮೆ ನೀಡಿ ಚುನಾವಣೆ ಎದುರಿಸಲಿ: ಉಷಾ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆ ವೇಳೆ ಜವಾಬ್ದಾರಿ ವಹಿಸಿಕೊಳ್ಳದೇ, ಪ್ರಚಾರದಲ್ಲಿ ತೊಡಗಿಕೊಳ್ಳದೇ, ಪರೋಕ್ಷವಾಗಿ ಕಾಂಗ್ರೆಸ್ ಬೆಂಬಲ ನೀಡಿದ್ದಾರೆ. ಈ ಕಾರಣದಿಂದ ಶಿವರಾಮ ಹೆಬ್ಬಾರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಉಪ ಚುನಾವಣೆ ಎದುರಿಸಲಿ ಎಂದು ಬಿಜೆಪಿ ಮುಖಂಡರು ಒತ್ತಾಯಿಸಿದರು.

ಶಿರಸಿ: ಪಕ್ಷದ ಅಧಿಕಾರ ಅನುಭವಿಸಿ, ಸಚಿವರಾಗಿ ಕಾರ್ಯನಿರ್ವಹಿಸಿ, ಹಿರಿಯರಿಗೆ ಮೋಸ ಮಾಡಿರುವ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಉಪಚುನಾವಣೆ ಎದುರಿಸಲಿ ಎಂದು ಬಿಜೆಪಿ ಶಿರಸಿ, ಯಲ್ಲಾಪುರ ಮತ್ತು ಮುಂಡಗೋಡ ಮಂಡಲಾಧ್ಯಕ್ಷರು ಆಗ್ರಹಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಶಿರಸಿ ಗ್ರಾಮೀಣ ಮಂಡಲಾಧ್ಯಕ್ಷೆ ಉಷಾ ಹೆಗಡೆ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿವರಾಮ ಹೆಬ್ಬಾರ್ ಕಾರ್ಮಿಕ ಸಚಿವರಾಗಿ ಕೆಲಸ ಮಾಡಿದ್ದಾರೆ. ಈಗ ಬಿಜೆಪಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ದೂರ ಉಳಿದಿದ್ದು, ಲೋಕಸಭಾ ಚುನಾವಣೆ ವೇಳೆ ಜವಾಬ್ದಾರಿ ವಹಿಸಿಕೊಳ್ಳದೇ, ಪ್ರಚಾರದಲ್ಲಿ ತೊಡಗಿಕೊಳ್ಳದೇ, ಪರೋಕ್ಷವಾಗಿ ಕಾಂಗ್ರೆಸ್ ಬೆಂಬಲ ನೀಡಿದ್ದಾರೆ. ಈ ಕಾರಣದಿಂದ ಶಿವರಾಮ ಹೆಬ್ಬಾರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಉಪ ಚುನಾವಣೆ ಎದುರಿಸಲಿ ಎಂದು ಒತ್ತಾಯಿಸಿದರು.

ಯಲ್ಲಾಪುರ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ಶಿವರಾಮ ಹೆಬ್ಬಾರ್ ಬಿಜೆಪಿಯಿಂದ ಆಯ್ಕೆಯಾಗಿ ಪಕ್ಷದ ಸಂಘಟಿಸಿದ್ದ ಮುಖಂಡರಿಗೆ, ಕಾರ್ಯಕರ್ತರಿಗೆ ದ್ರೋಹ, ಮೋಸ ಮಾಡಿದ್ದಾರೆ. ಬಿಜೆಪಿಗೆ ಬಂದ ನಂತರ ಮೂಲ ಕಾರ್ಯಕರ್ತರಿಗೆ ಮಲತಾಯಿ ಧೋರಣೆ ಮಾಡಿದ್ದಾರೆ. ಪಕ್ಷದ ಅಧಿಕಾರ ಅನುಭವಿಸಿ, ಹಿರಿಯರಿಗೆ ಮೋಸ ಮಾಡಿರುವ ಹೆಬ್ಬಾರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಲೋಕಸಭಾ ಚುನಾವಣೆಯಲ್ಲಿ ಯಲ್ಲಾಪುರ ತಾಲೂಕಿನ ೯೬ ಬೂತ್‌ಗಳಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದೆ. ಮುಂದಿನ ದಿನಗಳಲ್ಲಿ ಪ್ರತಿ ಬೂತ್‌ನಲ್ಲಿ ಶಿವರಾಮ ಹೆಬ್ಬಾರ್ ರಾಜೀನಾಮೆಗೆ ಆಗ್ರಹಿಸಲಾಗುತ್ತದೆ ಎಂದರು.

ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಮೇಶ ನಾಯ್ಕ ಮಾತನಾಡಿ, ಯಲ್ಲಾಪುರ, ಮುಂಡಗೋಡ ಮತ್ತು ಬನವಾಸಿ ಭಾಗದ ಮತದಾರರಿಂದ ಆಯ್ಕೆಯಾದ ಶಿವರಾಮ ಹೆಬ್ಬಾರ್ ಬಿಜೆಪಿಗೆ ಮೋಸ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಹಗಲಿನ ವೇಳೆ ಪ್ರಚಾರ ಮಾಡದೇ, ರಾತ್ರಿಯ ವೇಳೆ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕದ್ದು ಪ್ರಚಾರ ಮಾಡಿದ್ದಾರೆ. ಮಗನನ್ನು ಕಾಂಗ್ರೆಸ್‌ಗೆ ಸೇರ್ಪಡೆಗೊಳಿಸಿದ್ದು, ಕೋಟಿ ಕೋಟಿ ಲೂಟಿ ಮಾಡಿರುವ ಬೇಲೆಕರಿ ಅದಿರು ಹಗರಣ ಪ್ರಕರಣವನ್ನು ತನಿಖೆಗೆ ಇಲಾಖೆಯ ಅಧಿಕಾರಿಗಳಿಗೆ ಒತ್ತಾಯಿಸಲಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅಶೋಕ ಚಲುವಾದಿ, ಗಣೇಶ ಸಣ್ಣಲಿಂಗಣ್ಣನವರ್ ಮತ್ತಿತರರ ಪದಾಧಿಕಾರಿಗಳು ಇದ್ದರು.