ಶೈಕ್ಷಣಿಕವಾಗಿ ಮಾದಿಗ ಸಮಾಜ ಮುಂದುವರಿಯಲಿ: ನಾಗೇಂದ್ರ ಪಿ.

| Published : Jul 16 2024, 12:32 AM IST

ಸಾರಾಂಶ

ಲಕ್ಷ್ಮೇಶ್ವರ ಪಟ್ಟಣದ ಎಪಿಎಂಸಿ ವ್ಯಾಪಾರಸ್ಥರ ಸಂಘದ ಸಭಾಭವನದಲ್ಲಿ ಭಾನುವಾರ ಮಾದಿಗ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮ ನಡೆಯಿತು.

ಲಕ್ಷ್ಮೇಶ್ವರ: ಮಾದಿಗ ಸಮಾಜದ ಮಕ್ಕಳು ಶೈಕ್ಷಣಿಕವಾಗಿ ಹೆಚ್ಚು ಪ್ರಗತಿ ಹೊಂದಬೇಕು, ಕಡ್ಡಾಯವಾಗಿ ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಕಾರ್ಯವನ್ನು ಮಾದಿಗ ಸಮಾಜದ ತಂದೆ-ತಾಯಿಗಳು ಮಾಡಬೇಕು ಎಂದು ಶಿಕ್ಷಕ ನಾಗೇಂದ್ರ ಪಿ. ಹೇಳಿದರು.

ಪಟ್ಟಣದ ಎಪಿಎಂಸಿ ವ್ಯಾಪಾರಸ್ಥರ ಸಂಘದ ಸಭಾಭವನದಲ್ಲಿ ಭಾನುವಾರ ನಡೆದ ಮಾದಿಗ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಾದಿಗ ಸಮಾಜದ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸದ ಹೊರತು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. 12ನೇ ಶತಮಾನದಲ್ಲಿ ಬಾಳಿ ಹೋದ ಶಿವಶರಣ ಮಾದಿಗರ ಚನ್ನಯ್ಯ ಮೊಟ್ಟಮೊದಲ ವಚನಕಾರರಾಗಿದ್ದರು ಎಂಬುದು ನಮಗೆ ಹೆಮ್ಮೆ ತರುವ ಸಂಗತಿಯಾಗಿದೆ. ನಾವು ನಮ್ಮನ್ನು ಮಾದಿಗ ಸಮಾಜದವರು ಎಂದು ಹೇಳಿಕೊಳ್ಳಲು ಅಭಿಮಾನ ಪಡಬೇಕು ಎಂದು ಹೇಳಿದ ಅವರು, ನಮ್ಮ ಸಮಾಜದಲ್ಲಿ ಹುಟ್ಟಿದ ಅಂಬೇಡ್ಕರ್ ಅವರಿಂದ ನಮಗೆ ಸಮಾನತೆ, ಸ್ವಾತಂತ್ರ್ಯ, ಶಿಕ್ಷಣ ಹಾಗೂ ಸಾಮಾಜಿಕ ಸ್ಥಾನಮಾನಗಳು ದೊರೆಯುವಂತಾಗಿದೆ. ನಮ್ಮ ಮಕ್ಕಳನ್ನು ಮೊಬೈಲ್‌ ಹಾಗೂ ಟಿವಿಯಿಂದ ದೂರ ಇರಿಸುವ ಮೂಲಕ ಅವರ ಬೆಳವಣಿಗೆಗೆ ಸಹಕಾರ ನೀಡಬೇಕು. ಶಿಕ್ಷಣವು ಮನುಷ್ಯನನ್ನು ಉನ್ನತ ವಿಚಾರಗಳತ್ತ ಕರೆದುಕೊಂಡು ಹೋಗುತ್ತದೆ. ಶಿಕ್ಷಣವು ಸಾಮಾಜಿಕ ಜಾಗೃತಿ ಮೂಡಿಸುವ ಜತೆಯಲ್ಲಿ ಸಾಮಾಜಿಕ ಪ್ರಜ್ಞೆ ಬೆಳೆಸುತ್ತದೆ. ಆದ್ದರಿಂದ ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದನ್ನು ಮರೆಯಬಾರದು ಎಂದು ಹೇಳಿದರು.

ಶಿಕ್ಷಕ ಎ.ಡಿ. ಸೋಮನಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುನಾಥ ದಾನಪ್ಪನವರ, ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಮಾತನಾಡಿದರು. ತಾಲೂಕು ಘಟಕದ ಸಂಘದ ಅಧ್ಯಕ್ಷ ಆರ್.ಎಫ್. ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಎಸ್.ಡಿ. ತಿರಕಪ್ಪನವರ, ಈರಣ್ಣ ಮಾದರ, ಎನ್.ಡಿ. ಮೇಗಲಮನಿ, ಸುರೇಶ ಬೀರಣ್ಣವರ, ಡಿ.ಎಫ್. ಹರಿಜನ ಇದ್ದರು.

ಈ ಮಾದಿಗ ಸಮಾಜದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ ಪಾಸಾದ ಮಕ್ಕಳನ್ನು ಹಾಗೂ ನಿವೃತ್ತ ನೌಕರರನ್ನು ಈ ವೇಳೆ ಸನ್ಮಾನಿಸಲಾಯಿತು.