ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಭೂಪರಿವರ್ತನೆಗೆ ಉತ್ತೇಜನ: ಎನ್.ಯು.ನಾಚಪ್ಪಆರೋಪ

| Published : Jul 16 2024, 12:32 AM IST

ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಭೂಪರಿವರ್ತನೆಗೆ ಉತ್ತೇಜನ: ಎನ್.ಯು.ನಾಚಪ್ಪಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಆರ್ಥಿಕ ಹೊರೆ ಅನುಭವಿಸುತ್ತಿರುವ ರಾಜ್ಯ ಸರ್ಕಾರ ಕೊಡಗು ಜಿಲ್ಲೆಯಲ್ಲಿ ಭೂ ಪರಿವರ್ತನೆಗೆ ಉತ್ತೇಜನ ನೀಡುತ್ತಿದೆ ಎಂದು ಕೊಡವ ನ್ಯಾಷನಲ್‌ ಕೌನ್ಸಿಲ್‌ ಅಧ್ಯಕ್ಷ ಎನ್‌. ಯು. ನಾಚಪ್ಪ ಆರೋಪ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಆರ್ಥಿಕ ಹೊರೆಯನ್ನು ಅನುಭವಿಸುತ್ತಿರುವ ರಾಜ್ಯ ಸರ್ಕಾರ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಕೊಡಗು ಜಿಲ್ಲೆಯಲ್ಲಿ ಬೃಹತ್ ಭೂ ಪರಿವರ್ತನೆ ಮತ್ತು ಭೂ ವಿಲೇವಾರಿಗೆ ಪರೋಕ್ಷವಾಗಿ ಉತ್ತೇಜನ ನೀಡುತ್ತಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಸಿದ್ದಾಪುರದ ಭೂತಪೂರ್ವ ಬಿಬಿಟಿಸಿಯ 2400 ಎಕರೆ ಕಾಫಿ ತೋಟಗಳು ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂ ವಿಲೇವಾರಿಯನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ಸಿಎನ್‌ಸಿ ವತಿಯಿಂದ ಪೊನ್ನಂಪೇಟೆ ಪಟ್ಟಣದಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಭೂ ಪರಿವರ್ತನೆ ಮತ್ತು ನೋಂದಣಿಗೆ ದೊಡ್ಡ ಮೊತ್ತದ ಶುಲ್ಕ ವಸೂಲಿ ಮಾಡುತ್ತಿರುವ ಸರ್ಕಾರ ಕೊಡಗು ಜಿಲ್ಲೆಯ ಕೃಷಿ ಭೂಮಿಯನ್ನು ಸುಲಭವಾಗಿ ಪರಭಾರೆ ಮಾಡಲು ಅವಕಾಶ ನೀಡುತ್ತಿದೆ. ಸರ್ಕಾರ ದಿನಕ್ಕೊಂದು ಕರಾಳ ಕಾನೂನನ್ನು ಜಾರಿಗೆ ತಂದು ಕೊಡವರಿಗೆ ಕಿರುಕುಳ ನೀಡುತ್ತಿದೆ. ಕೊಡವ ಲ್ಯಾಂಡ್ ನಿಂದಲೇ ಒಕ್ಕಲೆಬ್ಬಿಸುವ ಪ್ರಯತ್ನಗಳು ನಡೆಯುತ್ತಿದೆ. ದೊಡ್ಡ ದೊಡ್ಡ ಬಂಡವಾಳಶಾಹಿಗಳ ಪರ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿರುವ ಸರ್ಕಾರ ಮತಬ್ಯಾಂಕ್ ಗಾಗಿ ಕೊಡಗನ್ನು ಬಲಿಪಶು ಮಾಡುತ್ತಿದೆ.

ಈ ಹಿಂದಿನ ಸರ್ಕಾರ 30 ಎಕರೆವರೆಗಿನ ಒತ್ತುವರಿ ಜಮೀನನ್ನು 30 ವರ್ಷ ಗುತ್ತಿಗೆ ನೀಡುವ ಕ್ರಮ ಜಾರಿಗೆ ತಂದಿತ್ತು. ಇದಕ್ಕೆ ಪೂರಕವಾಗಿ ಈಗಿನ ಸರ್ಕಾರ ವಿಧಾನಸಭೆಯಲ್ಲಿ ಅನುಮೋದನೆ ನೀಡಿ ಕೃಷಿಕರನ್ನು ನಿರಾಳಗೊಳಿಸಿತ್ತು. ಆದರೆ ಇತ್ತೀಚಿನ ಬೆಳವಣಿಗೆಗಳು ವ್ಯತಿರಿಕ್ತವಾಗಿದ್ದು, ಗುತ್ತಿಗೆ ಆಧಾರದ ಯೋಜನೆ ಅನುಷ್ಠಾನಗೊಳ್ಳುವ ಬಗ್ಗೆ ಅನುಮಾನ ಕಾಡುತ್ತಿದೆ. ಆದಿಮಸಂಜಾತ ಕೊಡವ ಬುಡಕಟ್ಟು ಜನರಿಗೆ ಒಂದಿಲ್ಲ ಒಂದು ಕಾನೂನಿನ ಮೂಲಕ ಕಿರುಕುಳವಾಗುತ್ತಿದೆ. ಸದಾ ಜನರ ಕಲ್ಯಾಣವನ್ನು ಬಯಸುವ ಸರ್ಕಾರದಿಂದ ನಾವು ಇದನ್ನು ನಿರೀಕ್ಷೆ ಮಾಡಿರಲಿಲ್ಲ, ಕೊಡವರು ಕಲ್ಯಾಣ ರಾಜ್ಯದ ವ್ಯಾಪ್ತಿಯಲ್ಲಿ ಸ್ವತಂತ್ರವಾಗಿ ಬದುಕಬೇಕೆ ಅಥವಾ ಬೇಡವೇ ಎನ್ನುವ ಗೊಂದಲವನ್ನು ಸರ್ಕಾರ ಸೃಷ್ಟಿಸಿದೆ.

ತಿತಿಮತಿ ಸೇರಿದಂತೆ ಕೆಲವು ಗ್ರಾಮಗಳ ಬೆಳೆಗಾರರಿಗೆ ಅಧಿಕಾರಿಗಳು ಕರೆ ಮಾಡಿ ಜಮೀನು ಸರ್ವೆ ಮಾಡಬೇಕು, ಒತ್ತುವರಿ ಇದ್ದರೆ ವಾಪಾಸ್ ಪಡೆಯುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ಕೊಡವರಿಗೆ ಆಗುತ್ತಿರುವ ದೊಡ್ಡ ಅನ್ಯಾಯವಾಗಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು.

ಸರ್ಕಾರಕ್ಕೆ ಧೈರ್ಯವಿದ್ದರೆ ಮೊದಲು ದೊಡ್ಡ ದೊಡ್ಡ ಕಂಪೆನಿಗಳು ಒತ್ತುವರಿ ಮಾಡಿಕೊಂಡಿರುವ ನೂರಾರು ಎಕರೆ ಭೂಮಿಯನ್ನು ತೆರವುಗೊಳಿಸಲಿ ಎಂದು ಒತ್ತಾಯಿಸಿದರು.

ಜಿಲ್ಲೆಯ ಇತರೆಡೆಯಂತೆ ಕಕ್ಕಬ್ಬೆಯಲ್ಲಿ 300 ಎಕರೆ ಜಾಗವನ್ನು ಭೂಪರಿವರ್ತನೆ ಮಾಡಲು ಹುನ್ನಾರ ನಡೆದಿದೆ. ಜನರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದರೂ ದೆಹಲಿ ಮತ್ತು ಮುಂಬೈ ಭಾಗದ ರಾಜಕೀಯ ಸಂಕುಲಗಳು ಭೂಮಾಫಿಯಾದ ಪರವಾಗಿ ರೆಸಾರ್ಟ್ ನಿರ್ಮಾಣದ ಅನುಮತಿಗೆ ಪ್ರಭಾವ ಬೀರುತ್ತಿದ್ದಾರೆ. ಮರಂದೋಡು ಗ್ರಾಮದ ಮೇರಿಯಂಡ ಅಂಗಡಿ ಪ್ರದೇಶದಲ್ಲಿ ಬತ್ತದ ಗದ್ದೆ ಮತ್ತು ಪರ್ವತ ಕೊರೆದು ಟೌನ್ ಶಿಪ್ ಗಾಗಿ ಭೂಪರಿವರ್ತನೆಯಾಗುತ್ತಿದ್ದು, ಕೊಡವ ಲ್ಯಾಂಡ್ ನ ಕಾವೇರಿ ಒಡಲು ನಾಶವಾಗುತ್ತಿದೆ.

ಓರ್ವರು ಸಾವಿರ ಮರ ಕತ್ತರಿಸುವ ಅನುಮತಿಯಲ್ಲಿ ಮೂರು ಸಾವಿರ ಬೀಟೆ ಮರಗಳನ್ನು ಹನನ ಮಾಡಿದ್ದಾರೆ. ಅಲ್ಲದೆ ಎಲ್‌ಕಿಲ್ ಬ್ಲಾಕ್ ನ 10 ಎಕರೆ ತೋಟವನ್ನು ಬೃಹತ್ ವಿಲ್ಲಾ ನಿರ್ಮಾಣಕ್ಕಾಗಿ 9.9 ಕೋಟಿ ರು. ಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದರು.

ನಮ್ಮ ಅನುವಂಶಿಕ ಭೂಮಿಯನ್ನು ಉಳಿಸಿಕೊಳ್ಳಲು, ಮಾತೃಭೂಮಿ, ಶಾಶ್ವತವಾದ ದೀರ್ಘಕಾಲಿಕ ಜಲಸಂಪನ್ಮೂಲಗಳು, ನಯನ ಮನೋಹರ ಪರಿಸರ, ಭೂಗೋಳವನ್ನು ನೈಸರ್ಗಿಕವಾಗಿ ವಿಹಂಗಮ ಪರ್ವತಗಳು, ಬೆಟ್ಟಗಳು, ನಿತ್ಯಹರಿದ್ವರ್ಣದ ಸಸ್ಯ ಮತ್ತು ಪ್ರಾಣಿ ಸಂಕುಲಗಳು ಜೈವಿಕ ವೈವಿಧ್ಯತೆ, ಕೊಡವ ಬುಡಕಟ್ಟು ಜನಾಂಗದ ಶ್ರೀಮಂತ ಜಾನಪದ ಪರಂಪರೆ ಮತ್ತು ಭೂಮಿಯೊಂದಿಗೆ ಬೆಸೆದುಕೊಂಡಿರುವ ಕೊಡವರ ಯೋಧರ ಪರಂಪರೆಯನ್ನು ಉಳಿಸಿಕೊಳ್ಳಬೇಕಾಗಿದೆ. ಈ ಮಣ್ಣಿನಲ್ಲಿ ನಮ್ಮ ಐತಿಹಾಸಿಕ ನಿರಂತರತೆಗಾಗಿ ಸ್ವಯಂ-ಆಡಳಿತವನ್ನು ಸಂವಿಧಾನದ ವಿಧಿ 244, 371 ಆರ್/ಡಬ್ಲ್ಯೂ 6 ಮತ್ತು 8ನೇ ಶೆಡ್ಯೂಲ್ ಮತ್ತು ಆಂತರಿಕ ರಾಜಕೀಯ ಸ್ವ-ನಿರ್ಣಯ ಹಕ್ಕುಗಳು ವಿಶ್ವರಾಷ್ಟ್ರ ಸಂಸ್ಥೆ ಹೊರಡಿಸಿರುವ ಆದಿಮಸಂಜಾತ ಜನಾಂಗದ ಹಕ್ಕುಗಳ ಅಂತಾರಾಷ್ಟ್ರೀಯ ಕಾನೂನಿನಂತೆ ಜಾರಿಯಾಗುವ ಅಗತ್ಯವಿದೆ ಎಂದರು.

ಇದಕ್ಕಾಗಿ ವ್ಯಾಪಕ ಜನಜಾಗೃತಿ ಅಗತ್ಯವಾಗಿದ್ದು, ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು. ಜು. 24 ರಂದು ವಿರಾಜಪೇಟೆ ಜು. 29 ರಂದು ಟಿ. ಶೆಟ್ಟಿಗೇರಿ ಮತ್ತು ಆ.10 ರಂದು ಮಾದಾಪುರದಲ್ಲಿ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ನಾಚಪ್ಪ ಇದೇ ಸಂದರ್ಭ ತಿಳಿಸಿದರು.

ಚೇಂದಿರ ಶೈಲಾ, ಮುದ್ದಿಯಡ ಲೀಲಾವತಿ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಮತ್ರಂಡ ಬೋಜಮ್ಮ, ಮಾಚಿಮಾಡ ಲವ್ಲಿ, ಮಾಣಿಪಂಡ ರತಿ, ಮಲ್ಚಿರ ಕವಿತಾ, ಕಾಯಮಾಡ ಕಮಲ, ಕೇಚೆಟ್ಟಿರ ಕಾಮುನಿ, ಕಾಳಮಂಡ ನಯನ, ಕಾಳಮಂಡ ಕಲ್ಪಕ್, ಮಲ್ಚಿರ ಪ್ರತೀಮ, ಬೊಳ್ಳಮ್ಮ, ಸುಳ್ಳಿಮಾಡ ವಿನು, ಆಲೆಮಾಡ ರೋಶನ್, ಆಲೆಮಾಡ ನವೀನ, ಮತ್ರಂಡ ನವೀ ಮತ್ತಿತರರು ಮಾನವ ಸರಪಳಿಯಲ್ಲಿ ಪಾಲ್ಗೊಂಡು ಬೃಹತ್ ಭೂಪರಿವರ್ತನೆ, ಭೂವಿಲೇವಾರಿ ವಿರುದ್ಧ ಮತ್ತು ಕೊಡವ ಲ್ಯಾಂಡ್ ಪರ ಪ್ರತಿಜ್ಞಾವಿಧಿ ಸ್ವೀಕರಿಸಿದರು.