ಉಡುಪಿ: ಡಾ. ಬಾಬು ಜಗಜೀವನ್ ರಾಮ್ ಅವರನ್ನು ನಾವು ಹಸಿರು ಕ್ರಾಂತಿಯ ಹರಿಕಾರ ಎಂದು ಸ್ಮರಿಸುತ್ತೇವೆ. ಇದರ ಜೊತೆಗೆ ಬಾಬೂಜಿಯವರು ದೇಶದ ರಕ್ಷಣಾಮಂತ್ರಿಯಾಗಿ 1971 ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಭಾರತಕ್ಕೆ ಐತಿಹಾಸಿಕ ಜಯಗಳಿಸಿಕೊಟ್ಟಿರುವುದನ್ನೂ ನಾವು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ತಮ್ಮ ಧೀಮಂತ ವ್ಯಕ್ತಿತ್ವದಿಂದ ಬಾಂಗ್ಲಾ ವಿಮೋಚನೆಯಲ್ಲಿ ಮಹತ್ವಪೂರ್ಣ ಪಾತ್ರವನ್ನು ಅವರು ನಿರ್ವಹಿಸಿದ್ದಾರೆ. ಇಂತಹ ಮಹಾನ್ ನಾಯಕರ ಉದಾತ್ತ ಗುಣಗಳು ನಮಗೆಲ್ಲರಿಗೂ ಮಾದರಿಯಾಗಿದ್ದು ನಾವು ಕೂಡಾ ಇದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಹೇಳಿದರು.

ಅವರು ಜಿಲ್ಲಾಡಳಿತ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಸಿರು ಕ್ರಾಂತಿಯ ಹರಿಕಾರ ಮಾಜಿ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ರವರ 119 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಡಾ.ಬಾಬು ಜಗಜೀವನ್ ರಾಮ್ ಅವರ ಜನ್ಮ ದಿನಾಚರಣೆಯನ್ನು ಸಮತಾ ದಿವಸ್ ಎಂದು ಆಚರಿಸುತ್ತೇವೆ. ಜಾತಿ-ಮತ, ಮೇಲು-ಕೀಳುಗಳ ತಾರತಮ್ಯದಿಂದ ಮುಕ್ತವಾದ ಸಮಾನತೆಯ ಸಮಾಜವನ್ನು ನಿರ್ಮಿಸಲು ಬಾಬೂಜಿಯವರು ಅವಿರತ ಶ್ರಮಿಸಿದ್ದರು. ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಇಂತಹ ಮಹಾನ್ ನಾಯಕರ ಗುಣಗಳನ್ನು ನಮ್ಮಲ್ಲಿಯೂ ಅಳವಡಿಸಿಕೊಂಡು ಸಮಾನತೆಯ ಸಮಾಜವನ್ನು ನಿರ್ಮಿಸಲು ಪಣತೊಡಬೇಕು ಎಂದು ಅವರು ಹೇಳಿದರು. ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕ ದಯಾನಂದ ಡಿ. ಕಿದಿಯೂರು ವಿಶೇಷ ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಇಲಾಖೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣ ಸ್ವಾಮಿ ಸ್ವಾಗತಿಸಿ, ಇಲಾಖೆಯ ಸಿಬ್ಬಂದಿ ಶ್ರೀದೇವಿ ನಿರೂಪಿಸಿ ವಂದಿಸಿದರು.