ಕೇಂದ್ರ ಸರ್ಕಾರ ಎಲೆಕ್ಟ್ರೋಲ್ ಬಾಂಡ್ ಬಗ್ಗೆ ಶ್ವೇತ ಪತ್ರ ಹೊರಡಿಸಲಿ

| Published : Mar 31 2024, 02:07 AM IST

ಸಾರಾಂಶ

ಎಲೆಕ್ಟ್ರೋಲ್ ಬಾಂಡ್ ವಿಷಯದಲ್ಲಿ ಕೇಂದ್ರ ಸರ್ಕಾರ ಡೋನೆಷನ್ ಪಡೆದುಕೊಳ್ಳುವುದು ಅಷ್ಟೆ ಅಲ್ಲ. ಶೋಷಣೆ ಮಾಡಿ ಚುನಾವಣೆಗೆ ಹಣ ಪಡೆದಿದ್ದಾರೆ

ಗದಗ: ಚುನಾವಣೆ ಪೂರ್ವದಲ್ಲೇ ಕೇಂದ್ರ ಸರ್ಕಾರ ಎಲೆಕ್ಟ್ರೋಲ್ ಬಾಂಡ್ ಗಳ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ಕಾನೂನು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲೆಕ್ಟ್ರೋಲ್ ಬಾಂಡ್ ವಿಷಯದಲ್ಲಿ ಕೇಂದ್ರ ಸರ್ಕಾರ ಡೋನೆಷನ್ ಪಡೆದುಕೊಳ್ಳುವುದು ಅಷ್ಟೆ ಅಲ್ಲ. ಶೋಷಣೆ ಮಾಡಿ ಚುನಾವಣೆಗೆ ಹಣ ಪಡೆದಿದ್ದಾರೆ. ಅಧಿಕೃತವಾಗಿ ಇಷ್ಟೊಂದು ಹಣ ಪಡೆದಿದ್ದಾರೆ ಎಂದರೆ ಆಂತರಿಕವಾಗಿ ಎಷ್ಟು ಸಾವಿರ ಕೋಟಿ ಹಣ ಪಡೆದಿರಬಹುದು ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ದೊಡ್ಡ ಕುಳಗಳಿಂದ ಬಾಂಡ್ ರೂಪದಲ್ಲಿ ಹಣ ಪಡೆದಿದ್ದಾರೆ. ನಂತರ ಅವರ ಮೇಲಿದ್ದ ವಿವಿಧ ರೀತಿಯ ಕೇಸ್ ಹಿಂದಕ್ಕೆ ಪಡೆದಿದ್ದಾರೆ ಎಂದರು.

ಭ್ರಷ್ಟಾಚಾರಿಗಳು ಬಿಜೆಪಿ ಸೇರಿದ ನಂತರ ಅವರ ಮೇಲಿನ ಕೇಸ್ ಗಳು ಖುಲಾಸೆಯಾಗುತ್ತಿವೆ. ಇದೆಲ್ಲವನ್ನು ನೋಡುತ್ತಿದ್ದರೇ ಬಿಜೆಪಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎನ್ನುವುದಕ್ಕೆ ತಾಜಾ ಉದಾಹರಣೆ. ಮೋದಿ ಜಾಗತಿಕ ಮಟ್ಟದಲ್ಲಿ ಅತ್ಯಂತ ದೊಡ್ಡ ಸ್ಕ್ಯಾಮ್ ಮಾಡಿದ್ದಾರೆ. ಯಾರ್ಯಾರ ಮೇಲೆ ಇಡಿ ಕೇಸ್ ಇವೆ ಅದರ ಮಾಹಿತಿ ಚುನಾವಣಾ ಆಯೋಗದವರು ಪಡೆದು ಜನರ ಮುಂದೆ ಇಡಬೇಕು ಎಂದು ಚುನಾವಣಾ ಆಯೋಗಕ್ಕೂ ಆಗ್ರಹಿಸಿದರು.

ದೊಡ್ಡ ರಾಜಕೀಯ ಪಕ್ಷ (ಬಿಜೆಪಿ) ವಿರೋಧ ಪಕ್ಷದವರ ಹಳೆಯ ಕೇಸ್ ಹೊರ ತೆಗೆದು ₹1800 ಕೋಟಿ ದಂಡ ಪಾವತಿಸಬೇಕು ಎಂದು ನೋಟಿಸ್ ನೀಡಿರುವುದು ಸರಿಯಾದ ಕ್ರಮವಲ್ಲ. ಭಯ ಹುಟ್ಟಿಸುವ ನಿಮ್ಮ ಕೆಲಸಕ್ಕೆ ಯಾರೂ ಅಂಜುವುದಿಲ್ಲ. ಅವರ ನೋಟಿಸ್ ಗೆ ಕಾಂಗ್ರೆಸ್ ಹೆದರುವುದಿಲ್ಲ. 30 ವರ್ಷದ ಹಿಂದಿನ ನೋಟಿಸ್ ಅನ್ನು ಚುನಾವಣೆ ಸಮಯದಲ್ಲಿ ಯಾಕೆ ನೀಡಿದರು.? ಇಷ್ಟು ದಿನ ಯಾಕೆ ನೀಡಲಿಲ್ಲ ? ಇದಕ್ಕೆ ತಕ್ಕ ಉತ್ತರ ಜನ ನೀಡುತ್ತಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಕಮೀಟಿ ಅಧ್ಯಕ್ಷ ಬಿ.ಬಿ. ಅಸೂಟಿ, ಜಿಪಂ ಮಾಜಿ ಅಧ್ಯಕ್ಷ ಸಿದ್ದಲಿಂಗೇಶ ಪಾಟೀಲ, ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಶೋಕ ಮಂದಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವೆ: ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರ ಬಗ್ಗೆ ಮಾತನಾಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಬಸವರಾಜ ಬೊಮ್ಮಾಯಿಗೆ ದಾವಣಗೆರೆ ಚಾರ್ಲಿ, ಉತ್ತರ ಕರ್ನಾಟದಲ್ಲಿ ಹೆಸರು ಮಾಡಿರುವ ಹಿರಿಯ ಪೈಲ್ವಾನ್. ಬಸವರಾಜ್ ಬೊಮ್ಮಾಯಿ ಹಿರಿಯ ಪೈಲ್ವಾನ್, ವಯಸ್ಸಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಯುವ ಪೈಲ್ವಾನ್ ಅಖಾಡದಲ್ಲಿದ್ದಾರೆ. ಹಿರಿಯ, ಕಿರಿಯ ಪೈಲ್ವಾನ್ ಹೋಲಿಕೆ ಮಾಡಿದ್ದೆ, ಆದರೆ ಅದನ್ನ ಕೆಲವರು ತಪ್ಪು ಗ್ರಹಿಕೆ ಮಾಡಿಕೊಂಡಿದ್ದಾರೆ. ಬೊಮ್ಮಾಯಿ ಅವರೂ ತಪ್ಪು ಅರ್ಥೈಸಿಕೊಂಡಿದ್ದಾರೆ ಅಷ್ಟೇ ಎಂದರು.

ಶ್ರೀಗಳ ಬಗ್ಗೆ ಲಘುವಾಗಿ ಮಾತನಾಡಿದರೆ ಸಮಾಜ ಸಹಿಸಲ್ಲ: ದಿಂಗಾಲೇಶ್ವರ ಸ್ವಾಮೀಜಿ ಕಾಂಗ್ರೆಸ್ ಏಜೆಂಟ್ ಎಂಬ ಹೇಳಿಕೆ ವಿಚಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಎಚ್.ಕೆ. ಪಾಟೀಲ, ಸ್ವಾಮಿಗಳ ಬಗ್ಗೆ ಲಘುವಾಗಿ ಮಾತನಾಡುವುದನ್ನು ಸಮಾಜ ಸಹಿಸಲ್ಲ. ಸ್ವಾಮೀಜಿಗಳ ನಿಲುವಿನ ಬಗ್ಗೆ ಟೀಕೆ ಮಾಡೋದಿದ್ದರೆ ಮಾಡಲಿ, ಆದರೆ ಒಂದು ಪಕ್ಷದ ಏಜೆಂಟ್ ಅಂತಾ ಗೂಬೆ ಕೂರಿಸುವುದು ಕೆಳಮಟ್ಟದ ಕೆಲಸವಾಗುತ್ತದೆ. ಸ್ವಾಮಿಗಳ ನಿಲುವಿನ ಬಗ್ಗೆ ಚರ್ಚೆಯಾಗಲಿ, ಚರ್ಚೆಯಾಗಬೇಕು. ಸ್ವಾಮಿಗಳು ನಮ್ಮ ಪಕ್ಷದ ಜತೆಗೆ ಯಾವುದೇ ಸಂಬಂಧ ಇಟ್ಟುಕೊಂಡಿಲ್ಲ, ಎಲ್ಲ ಸ್ವಾಮಿಗಳು ಬಿಜೆಪಿ ಕಡೆಯೇ ಇದ್ದಾರೆ ಎಂದು ಬಿಜೆಪಿ ಹೇಳುವ ಹಸಿ ಸುಳ್ಳು ಬಹಿರಂಗವಾಗಿದೆ. ಯಾರು ಬಿಜೆಪಿಗೆ ಹೊಂದಿಕೊಳ್ಳುವುದಿಲ್ಲ ಅವರನ್ನು ಕಟುವಾಗಿ ನಿಂದಿಸುತ್ತಾರೆ. ಚುನಾವಣೆ ಸಂದರ್ಭದಲ್ಲಿ ಎಂಇಎಸ್ ರಾಜಕೀಯವಾಗಿ ಸಕ್ರಿಯವಾಗುತ್ತೆ. ಇದುವರೆಗೂ ಕಾರ್ಪೊರೇಷನ್, ಎಂಎಲ್ಎ ಎಲೆಕ್ಷನಲ್ಲಿ ಚುನಾವಣೆಗೆ ನಿಲ್ಲಿಸುತ್ತಿದ್ದರು ಆದರೆ ಲೋಕಸಭೆ ಚುನಾವಣೆಯಲ್ಲಿ ನಿಲ್ಲಲ್ಲ ಅನ್ಸುತ್ತೆ ನೋಡೋಣ ಎಂದರು.