ರಾಮನಿಗೆ ಮಂದಿರ ಆಯ್ತು, ರಾಮರಾಜ್ಯದಲ್ಲಿ ಪ್ರಜೆಗಳಿಗೆ ಸೂರಿಲ್ಲ ಎಂದಾಗಬಾರದು: ಪೇಜಾವರಶ್ರೀ

| Published : Mar 31 2024, 02:07 AM IST

ರಾಮನಿಗೆ ಮಂದಿರ ಆಯ್ತು, ರಾಮರಾಜ್ಯದಲ್ಲಿ ಪ್ರಜೆಗಳಿಗೆ ಸೂರಿಲ್ಲ ಎಂದಾಗಬಾರದು: ಪೇಜಾವರಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಪಷ್ಟ್ಯಬ್ದ ಹಿನ್ನೆಲೆಯಲ್ಲಿ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಗೆ ತೆಂಕು ತಿಟ್ಟು ಯಕ್ಷಗಾನದ ರಾಜ ಕಿರೀಟವನ್ನು ತೊಡಿಸಲಾಯಿತು

ಕನ್ನಡಪ್ರಭ ವಾರ್ತೆ ಮಂಗಳೂರುಶ್ರೀರಾಮನಿಗೆ ಮಂದಿರ ಆಯ್ತು, ಆದರೆ ರಾಮರಾಜ್ಯದಲ್ಲಿ ನನಗೆ ಮನೆ ಇಲ್ಲ ಎಂದು ಪ್ರಜೆಯೊಬ್ಬ ದುಃಖಿಸುವಂತೆ ಆಗಬಾರದು, ಆಗ ರಾಮನಿಗೆ ಸಂತೋಷ ಆಗದು. ರಾಮರಾಜ್ಯದ ಸಾಕಾರಕ್ಕಾಗಿ ಬಡವರ ಅವಶ್ಯಕತೆಗಳನ್ನು ಪೂರೈಸುವ ಕಾರ್ಯ ನಡೆಯಬೇಕು ಎಂದು ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ ಆಗಿರುವ ಉಡುಪಿ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶಿಸಿದ್ದಾರೆ.

ಮಂಗಳೂರಿನ ಶರವು ಶ್ರೀಮಹಾಗಣಪತಿ ದೇವಸ್ಥಾನ ವಠಾರದಲ್ಲಿ ಶನಿವಾರ ಷಷ್ಟ್ಯಬ್ದ ಅಭಿವಂದನೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.

ರಾಮನ ಆಳ್ವಿಕೆಯಲ್ಲಿ ಬಡವರು ಎಂಬುದೇ ಇರಬಾರದು, ಪ್ರತಿ ಮನೆಯಲ್ಲೂ ರಾಜ್ಯದಲ್ಲಿ ಸುಖಮಯ ಬದುಕು ಕಳೆಯಬೇಕು. ಬಡವರು, ದುಃಖಿತರ ಮಧ್ಯೆ ಭಗವಂತ ಮಂಗಳಾರತಿ ಸ್ವೀಕರಿಸಿದರೂ ತೃಪ್ತನಾಗಲಾರ. ಬಡತನದಿಂದ ಮೇಲೆತ್ತಿದಾಗ ಮಾತ್ರ ದೇವರು ಸಂಪ್ರೀತನಾಗಲು ಸಾಧ್ಯ. ಬಡವರ ಸೇವೆಗೆ ಹಣದ ಕೊರತೆ ಬಾಧಿಸದು, ಹಾಗೇನಾದರೂ ಆದರೆ ಸಂಪತ್ತು ರಾಮದೇವರೇ ಅನುಗ್ರಹಿಸುತ್ತಾರೆ ಎಂದರು.

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ, ಮಂಡಲೋತ್ಸವಗಳಲ್ಲಿ ಕರಾವಳಿ ಮಂದಿಯ ಪ್ರತಿನಿಧ್ಯ ಸ್ಮರಣೀಯ. ಇಲ್ಲಿನ ಜಿಎಸ್‌ಬಿ ಸಮಾಜ ಕೂಡ ಬಾಲರಾಮನಿಗೆ ಸುವರ್ಣ ಪ್ರಭಾವಳಿ, ಪಲ್ಲಕಿ ಇತ್ಯಾದಿ ಕೊಡುಗೆ ನೀಡಿದೆ. ಅಯೋಧ್ಯೆಯ ಎಲ್ಲ ಕಾರ್ಯಕ್ರಮಗಳ ಯಶಸ್ಸಿನ ಹಿಂದೆ ಭಕ್ತಜನರ ಸಹಕಾರ ಲಭಿಸಿದೆ ಎಂದರು.

ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ ಆಶೀರ್ವಚನದಲ್ಲಿ, ಪೇಜಾವರ ಹಿರಿಯ ಶ್ರೀಗಳು ರಾಮಮಂದಿರಕ್ಕೆ ಕರಸೇವೆಯಲ್ಲಿ ತೊಡಗಿಸಿಕೊಂಡವರು. ರಾಮನ ತ್ಯಾಗದಂತೆ ವಿಶ್ವೇಶತೀರ್ಥ ಶ್ರೀಪಾದರು ಹಾಗೂ ಅವರ ಶಿಷ್ಯ ಶ್ರೀವಿಶ್ವಪ್ರಸನ್ನ ತೀರ್ಥರು ಇದ್ದಾರೆ. ಸದ್ಗುಣಗಳಿಗೆ ಬೆಲೆ ನೀಡಿದರೆ ನಾವು ಸಜ್ಜನರಾಗುತ್ತೇವೆ ಎಂದರು.

ಇದೇ ಸಂದರ್ಭ ನೂರಕ್ಕೂ ಅಧಿಕ ಮಂದಿ ಸಾಧಕರಿಂದ ಪೇಜಾವರಶ್ರೀಗೆ ಅಭಿವಂದನೆ ನೆರವೇರಿತು.

ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಪ್ರಾಸ್ತಾವಿಕ ಮಾತನಾಡಿ, ಪೇಜಾವರಶ್ರೀಗಳಿಂದಾಗಿ ಅಯೋಧ್ಯೆಯ ಮಂಡಲೋತ್ಸವದಲ್ಲಿ ಕನ್ನಡಿಗರಿಗೆ ಸೇವೆ ಸಲ್ಲಿಸಲು ಸಾಕಷ್ಟು ಅವಕಾಶ ಲಭಿಸಿದೆ ಎಂದರು.

ಪ್ರೊ.ಎಂ.ಬಿ.ಪುರಾಣಿಕ್‌ ಸ್ವಾಗತಿಸಿದರು. ಸುಧಾಕರ ರಾವ್ ಪೇಜಾವರ ನಿರೂಪಿಸಿದರು.

ವೇದಿಕೆಯಲ್ಲಿ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಲಕ್ಷ್ಮೀನಾರಾಯಣ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ, ಶರವು ರಾಘವೇಂದ್ರ ಶಾಸ್ತ್ರಿ, ಅಯೋಧ್ಯೆ ಮಂದಿರಕ್ಕೆ ವಿದ್ಯುದ್ದೀಪಾಲಂಕಾರದ ಉಸ್ತುವಾರಿ ರಾಜೇಶ್‌ ಶೆಟ್ಟಿ, ಜನಾರ್ದನ ಹಂದೆ ಮತ್ತಿತರರಿದ್ದರು. ಪೇಜಾವರಶ್ರೀಗೆ ರಾಜಕಿರೀಟ ತೊಡಿಸಿ ಅಭಿವಂದನೆ!

ಪಷ್ಟ್ಯಬ್ದ ಹಿನ್ನೆಲೆಯಲ್ಲಿ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಗೆ ತೆಂಕು ತಿಟ್ಟು ಯಕ್ಷಗಾನದ ರಾಜ ಕಿರೀಟವನ್ನು ತೊಡಿಸಲಾಯಿತು. ಕೃಷ್ಣಾಪುರ ಮಠಾಧೀಶರು ಪುಷ್ಪ ವೃಷ್ಟಿ ಮಾಡುವ ಮೂಲಕ ಅಭಿವಂದನೆಗೆ ಚಾಲನೆ ನೀಡಿದರು. ಬಳಿಕ ವೇದಿಕೆಯಲ್ಲಿದ್ದ ಗಣ್ಯರು ಪುಷ್ಪವೃಷ್ಟಿ ಮಾಡಿ ತುಳಸಿ ಹಾರ, ಶಾಲು, ಫಲಪುಷ್ಪ ನೀಡಿ ಗೌರವಿಸಿದರು. ಇದೇ ವೇಳೆ ರಾಜೇಶ್‌ ಬಾಗ್ಲೋಡಿ ತಂಡದಿಂದ ಶಾಸ್ತ್ರೀಯ ಕೊಳಲು ವಾದನ ಕಛೇರಿ, ಅದಕ್ಕೂ ಮುನ್ನ ವಿವಿಧ ಭಜನಾ ತಂಡಗಳಿಂದ ಭಜನೆ ನೆರವೇರಿತು. ಕಾರ್ಯಕ್ರಮಕ್ಕೆ ಮುನ್ನ ಉಭಯಶ್ರೀಗಳನ್ನು ಚೆಂಡೆ, ವಾಲಗದಲ್ಲಿ ಶರವು ದೇವಸ್ಥಾನಕ್ಕೆ ಕರೆತಂದು ಅಲ್ಲಿ ಪಾದಪೂಜೆ ನೆರವೇರಿಸಲಾಯಿತು.