ಕನ್ನಡಪ್ರಭ ವಾರ್ತೆ ಮುಳಬಾಗಿಲು

ಅಧಿಕಾರ ಬೇಕಾದರೆ ಶಾಸಕರ ಬಳಿ ಹೋಗಲಿ, ಪಕ್ಷ ಸಂಘಟನೆಗಾಗಿ ನನ್ನ ಬಳಿ ಬರಲಿ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಕಾಡೇನಹಳ್ಳಿ ಕೆ.ಎನ್.ನಾಗರಾಜ್ ಹೇಳಿದರು.

ಮುಳಬಾಗಿಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನಲ್ಲಿ ಜೆಡಿಎಸ್ ಪಕ್ಷ ಬಲಿಷ್ಠವಾಗಿದ್ದು, ಶಾಸಕ ಸಮೃದ್ಧಿ ಮಂಜುನಾಥ್ ಮತ್ತು ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ನಾವೆಲ್ಲ ಒಂದೇ ಎಂದು ಸುದ್ದಿಗಾರರ ಪ್ರಶ್ನೆವೊಂದಕ್ಕೆ ಉತ್ತರಿಸಿದರಲ್ಲದೆ, ವಿದ್ಯಾಸಂಸ್ಥೆ ನಡೆಸುವುದರಲ್ಲಿ ಮತ್ತು ಕೋಮುಲ್ ನಿರ್ದೇಶಕನಾಗಿ ರೈತರ ಕೆಲಸ ಮಾಡುವುದರಲ್ಲಿ ನಾನು ನಿರತನಾಗಿದ್ದೇನೆ, ಅಂತೆಯೇ ಮತ್ತೊಬ್ಬ ಕೋಮುಲ್ ನಿರ್ದೇಶಕ ಬಿಸನಹಳ್ಳಿ ಬಿ.ವಿ. ಸಾಮೇಗೌಡ ಸಹ ರೈತರ ಕೆಲಸದಲ್ಲಿ ನಿರತರಾಗಿದ್ದಾರೆ. ಶಾಸಕರು ಅವರ ಕೆಲಸ ಅವರು ಮಾಡುತ್ತಿದ್ದಾರೆ, ತಾಲೂಕು ಜೆಡಿಎಸ್ ಅಧ್ಯಕ್ಷನಾಗಿ ಪಕ್ಷ ಸಂಘಟನೆಯ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಅಷ್ಟು ಬಿಟ್ಟರೆ ಶಾಸಕರು ಮತ್ತು ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ, ಗುಂಪುಗಾರಿಕೆ ಇಲ್ಲವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಿನಿಗೇನಹಳ್ಳಿ ಜಿ.ಆನಂದ್ ರೆಡ್ಡಿ ಜೆಡಿಎಸ್ ಪಕ್ಷ ಸಂಘಟನೆ ಉತ್ತಮ ರೀತಿಯಲ್ಲಿ ಮಾಡಿರುವುದನ್ನು ಗುರುತಿಸಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆನಂದ ರೆಡ್ಡಿಗೆ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯರನ್ನಾಗಿ ಜವಾಬ್ದಾರಿ ನೀಡಿದ್ದಾರೆ, ಇದು ಕೋಲಾರ- ಚಿಕ್ಕಬಳ್ಳಾಪುರ ಎರಡು ಜಿಲ್ಲೆಗಳಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಸಹಕಾರಿಯಾಗಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು. ಗುಂಪುಗಾರಿಕೆ ಪ್ರಶ್ನೆಗೆ ಉತ್ತರಿಸಿ, ಈಗ ಯಾವುದೇ ಚುನಾವಣೆಗಳು ಇಲ್ಲ, ಚುನಾವಣಾ ಸಮಯ ಬಂದಾಗ ನೋಡೋಣ ಎಂದು ಉತ್ತರಿಸಿದರಲ್ಲದೆ ಆಗ ಅಧಿಕಾರ ಬೇಕಾಗಿತ್ತು, ಅವರನ್ನು ಗೆಲ್ಲಿಸಬೇಕಾಗಿತ್ತು ಗೆಲ್ಲಿಸಿದ್ದು ಆಯ್ತು. ತಾಲೂಕಿನ ಜನತೆ ಅವರನ್ನು ಉಪಯೋಗಿಸಿಕೊಳ್ಳಲಿ ಎಂದರಲ್ಲದೆ, ಸಮೃದ್ಧಿ ಮಂಜುನಾಥ್ ನಮ್ಮ ಶಾಸಕರು. ಅವರು ಮತ್ತು ನಾವು ಪಕ್ಷದ ಕೆಲಸ ಮಾಡುತ್ತಿದ್ದೇವೆ ಎಂದು ಉತ್ತರಿಸಿದರು.

ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷದ ಹೈಕಮಾಂಡ್ ಯಾರಿಗೇ ಟಿಕೆಟ್ ನೀಡಿದರೂ ನಾವು ಅವರ ಪರ ಕೆಲಸ ಮಾಡಿ ಗೆಲ್ಲಿಸುತ್ತೇವೆ. ಸಮೃದ್ಧಿ ಮಂಜುನಾಥ್ ಟಿಕೆಟ್ ತಂದರೂ ಸಹ ಅವರಿಗೆ ಕೆಲಸ ಮಾಡಿ ಮತ್ತೆ ಶಾಸಕರನ್ನಾಗಿ ಮಾಡುತ್ತೇವೆ ಎಂದು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.


ಕೋಮುಲ್ ನಿರ್ದೇಶಕ ಬಿ.ವಿ.ಸಾಮೇಗೌಡ, ಜೆಡಿಎಸ್ ವಕ್ತಾರ ಎಂ.ಎಸ್.ಶ್ರೀನಿವಾಸ ರೆಡ್ಡಿ, ಜೆಡಿಎಸ್ ಮುಖಂಡರಾದ ಗೊಲ್ಲಹಳ್ಳಿ ಪ್ರಭಾಕರ್, ನರಸಿಂಹ ರಡ್ಡಿ, ಗಣಪ್ಪ, ಆಚಂಪಲ್ಲಿ ಬಾಬು, ಲೋಕೇಶ್, ವಸಂತಪ್ಪ, ಅತ್ತಿಹಳ್ಳಿ ರೆಡ್ಡಪ್ಪ ಇದ್ದರು.