ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
1975 ರಲ್ಲಿ ಜಾರಿಯಾದ ತುರ್ತು ಪರಿಸ್ಥಿತಿ ಬಗ್ಗೆ ಮತ್ತಷ್ಟು ಚರ್ಚೆ ಆಗಬೇಕಿದೆ ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.ನಗರದ ಗೋಪಾಲಗೌಡ ಬಡಾವಣೆಯಲ್ಲಿರುವ ಬಂಟರ ಭವನದಲ್ಲಿ ಸೋಮವಾರ ಸಂಜೆ ಶಿವಮೊಗ್ಗ ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರು ಸಂಘಟನೆ ಏರ್ಪಡಿಸಿದ್ದ ತುರ್ತು ಪರಿಸ್ಥಿತಿ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸ್ವಾತಂತ್ರ್ಯ ಬಂದ ನಂತರ ದೇಶದಲ್ಲಿ ಅನೇಕ ಬಾರಿ ತುರ್ತು ಪರಿಸ್ಥಿತಿ ಜಾರಿಯಾಗಿದೆ. ಇಂದಿರಾಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಇಡೀ ದೇಶದ ಜನರಿಗೆ ತಿಳಿಸುವ ಕೆಲಸ ಆಗಬೇಕಿದೆ ಎಂದರು.
ಸಂವಿಧಾನ ತಿದ್ದುಪಡಿಯು ವೈಜ್ಞಾನಿಕವಾಗಿ ಆಗಬೇಕು. ದೇಶದ ಅಭಿವೃದ್ಧಿಗೆ ಪೂರಕವಾಗಿರಬೇಕು. ಆದರೆ ಮೂರ್ಖ ಕಾಂಗ್ರೆಸ್‌ನವರು ಅದನ್ನೇ ತಪ್ಪಾಗಿ ಭಾವಿಸಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನೇ ಬದಲಾವಣೆ ಮಾಡುತ್ತದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ಆರ್‌ಎಸ್‌ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ, ವೀರರಾಣಿ ಅಬ್ಬಕ್ಕನಂತಹ ಅನೇಕ ದೇಶಪ್ರೇಮಿಗಳನ್ನು ಈ ನಾಡು ಕಂಡಿದೆ. ಆದರೆ, ಅದಕ್ಕೆ ಅಪವಾದದಂತೆ ಆಡಳಿತ ನಡೆಸಿದ್ದು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಎಂದು ಆರೋಪಿಸಿದರು.
ಒಂದು ಕಾಲದಲ್ಲಿ ಇಡೀ ದೇಶದಲ್ಲೇ ಇಂದಿರಾ ಗಾಂಧಿ ಹೆಸರು ಬಿಟ್ಟು ಬೇರೆ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಇಂದಿರಾ ಎಂದರೆ ಇಂಡಿಯಾ, ಇಂಡಿಯಾ ಎಂದರೆ ಇಂದಿರಾ ಎನ್ನುವಂತಾಗಿತ್ತು. ಅವರು ಸರ್ವಾಧಿಕಾರಿಯಾಗಿ ನಡೆದುಕೊಂಡಿದ್ದರು ಎಂದು ಕಿಡಿಕಾರಿದರು.ತನ್ನ ಅಧಿಕಾರದ ಆಸೆಗೆ ಇಡೀ ದೇಶವನ್ನು ಸಂಕಷ್ಟಕ್ಕೆ ತಳ್ಳಿದ್ದು ಇಂದಿರಾ ಗಾಂಧಿ. ಸಂವಿಧಾನವನ್ನು ಇದುವರೆಗೆ 106 ಬಾರಿ ತಿದ್ದುಪಡಿ ಮಾಡಲಾಗಿದೆ. ಅದರಲ್ಲಿ ಇಂದಿರಾ ಗಾಂಧಿ ಅವರೇ ಬರೋಬ್ಬರಿ 32 ಬಾರಿ ತಿದ್ದುಪಡಿ ಮಾಡಿದ್ದಾರೆ. ಹಾಗಾಗಿ ಸಂವಿಧಾನ ಉಳಿಸಿ ಎಂಬ ಕೂಗು ಅಂದೇ ಕೇಳಿಬಂದಿತ್ತು. ಅಂದಿನಿಂದಲೂ ಆರ್‌ಎಸ್‌ಎಸ್ ಮಾತ್ರ ಸಂವಿಧಾನದ ಉಳಿವಿಗೆ ಹೋರಾಟ ಮಾಡುತ್ತಿದೆ ಎಂದು ಹೇಳಿದರು.
ತುರ್ತು ಪರಿಸ್ಥಿತಿ ಬಳಿಕ ಇಂದಿರಾ ಗಾಂಧಿ ಅವರಿಗೆ ಇಡೀ ದೇಶದಲ್ಲಿ ದೊಡ್ಡ ಜಯ ಸಿಗುತ್ತದೆಂದು ಬಿಂಬಿಸಲಾಗಿತ್ತು. ಆದರೆ ಕರ್ನಾಟಕ ಹೊರತುಪಡಿಸಿ ದೇಶದ ಹಲವು ರಾಜ್ಯಗಳಲ್ಲಿ ಒಂದೇ ಒಂದೂ ಸೀಟೂ ಗೆಲ್ಲಲಿಲ್ಲ. ಇಂದಿರಾ ಗಾಂಧಿ ದಬ್ಬಾಳಿಕೆಯನ್ನು ಕಂಡಿದ್ದ ಜನರು ಅವರ ಕೈಹಿಡಿಯಲಿಲ್ಲ. ಹಾಗಾಗಿ ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಶೂನ್ಯವಾಗಿತ್ತು. ಅದು ಪ್ರಜಾಪ್ರಭುತ್ವಕ್ಕೆ ಸಿಕ್ಕ ಯಶಸ್ಸಾಗಿತ್ತು ಎಂದು ವಿಶ್ಲೇಷಿಸಿದರು. ಚಿಂತಕ ಪ್ರೊ.ಎಚ್.ರಾಚಪ್ಪ ಅಧ್ಯಕ್ಷತೆ ವಹಿಸಿದ್ದರು. ಗದಗ ಆರ್‌ಡಿಪಿಆರ್ ವಿವಿ ನಿವೃತ್ತ ಕುಲಪತಿ ಪ್ರೊ.ವಿಷ್ಣುಕಾಂತ್ ಎಸ್. ಉಪಸ್ಥಿತರಿದ್ದರು.