ಮಾದಕ ದ್ರವ್ಯ ಸೇವನೆಯಿಂದ ದೂರ ಇರೋಣ: ಎಸ್ಪಿ ಶ್ರೀಹರಿಬಾಬು

| Published : Jun 27 2024, 01:02 AM IST

ಸಾರಾಂಶ

ತಾತ್ಕಾಲಿಕವಾಗಿ ಆನಂದ ನೀಡುವ ಮಾದಕ ದ್ರವ್ಯ ವಸ್ತುಗಳ ಅವಲಂಬನೆಗೆ ಒಳಗಾಗುವುದನ್ನು ಹೆಚ್ಚಾಗಿ ಸಮಾಜದಲ್ಲಿ ಕಾಣುತ್ತಿದ್ದೇವೆ.

ಹೊಸಪೇಟೆ: ಮಾದಕ ವಸ್ತುಗಳ ಬಳಕೆ ಮನುಷ್ಯನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಜೊತೆಗೆ ನೆರೆಹೊರೆಯ ವಾತಾವರಣವನ್ನು ಕಲುಷಿತಗೊಳಿಸುತ್ತದೆ ಎಂದು ಎಸ್ಪಿ ಬಿ.ಎಲ್. ಶ್ರೀಹರಿಬಾಬು ಹೇಳಿದರು.

ಜಿಲ್ಲಾಧಿಕಾರಿ, ಜಿಪಂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ ಸಹಯೋಗದಲ್ಲಿ ಡಾ.ಪುನೀತ್ ರಾಜಕುಮಾರ ವೃತ್ತದಲ್ಲಿ ಬುಧವಾರ ನಡೆದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಬಳಕೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ನಿಮಿತ್ತ ಜಾಗೃತಿ ಜಾಥಾ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ವ್ಯಸನ ಎನ್ನುವುದು ಒಂದು ಸಂಕೀರ್ಣವಾದ ಸಮಸ್ಯೆಯಾಗಿದೆ. ತಾತ್ಕಾಲಿಕವಾಗಿ ಆನಂದ ನೀಡುವ ಮಾದಕ ದ್ರವ್ಯ ವಸ್ತುಗಳ ಅವಲಂಬನೆಗೆ ಒಳಗಾಗುವುದನ್ನು ಹೆಚ್ಚಾಗಿ ಸಮಾಜದಲ್ಲಿ ಕಾಣುತ್ತಿದ್ದೇವೆ. ಸ್ನೇಹಿತರ ಒತ್ತಾಯ, ದೈಹಿಕ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಹೀಗೆ ಅನೇಕ ಕಾರಣಗಳಿಗಾಗಿ ಜನರು ಮಾದಕ ವ್ಯಸನಿಗಳಿಗೆ ದಾಸರಾಗಿದ್ದಾರೆ. ಇಂತಹ ಹವ್ಯಾಸ ಬಿಟ್ಟು ಹೊರಬರಲಾರದ ಸ್ಥಿತಿಯಲ್ಲಿ ಬಳಲುತ್ತಿದ್ದಾರೆ ಎಂದರು.

ಡಿಎಚ್.ಒ ಎಲ್.ಆರ್. ಶಂಕರ್ ನಾಯ್ಕ ಮಾತನಾಡಿ, ಜನರು ಮಾದಕ ವಸ್ತಗಳನ್ನು ಬಳಕೆ ಮಾಡಿ ತಾವೇ ಕಾಯಿಲೆಯನ್ನು ತಂದೊಡ್ಡಿಕೊಳ್ಳುತ್ತಿದ್ದಾರೆ. ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಸರ್ವೆ ಪ್ರಕಾರ ಮದ್ಯ ವ್ಯಸನಕ್ಕೆ ಒಳಗಾಗಿ ವಾಹನ ಚಲಾಯಿಸಿದವರಲ್ಲಿ ಶೇ.30 ಅಪಘಾತಗಳು ನಡೆದರೆ, ಶೇ.40 ಮಂದಿ ಮೃತಪಟ್ಟಿದ್ದಾರೆ. ಮಾದಕ ವಸ್ತಗಳನ್ನು ದೂರವಿಟ್ಟು, ಚಟಕ್ಕೆ ಒಳಗಾಗಿರುವ ಜನರನ್ನು ಹೊರತರಲು ಸರ್ಕಾರ ರೂಪಿಸಿರುವ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದ್ದು, ಸಂಘ ಸಂಸ್ಥೆಗಳು ಈ ಕಾರ್ಯಕ್ಕೆ ಕೈಜೋಡಿಬೇಕು ಎಂದರು.

ಎಎಸ್ಪಿ ಸಲೀಂ, ಡಿವೈಎಸ್ಪಿ ಮಂಜುನಾಥ, ವೈದ್ಯಾಧಿಕಾರಿಗಳಾದ ಡಾ.ಕಮಲಮ್ಮ, ಡಾ.ರಾಧಿಕಾ, ಡಾ.ಷಣ್ಮುಖ ನಾಯ್ಕ, ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡಮನಿ ಮತ್ತಿತರರಿದ್ದರು.