ವಿಶ್ವಕರ್ಮರ ದಾರಿದೀಪದಲ್ಲಿ ನಡೆಯೋಣ

| Published : Sep 18 2025, 01:10 AM IST

ಸಾರಾಂಶ

ದೇವಾನು ದೇವತೆಗಳಿಗೆ ಆಯುಧ, ರಥಗಳನ್ನು ಮಾಡಿಕೊಟ್ಟವರು ವಿಶ್ವಕರ್ಮ ಸಮಾಜದವರು ಇಂದು ಅವರು ಹಾಕಿಕೊಟ್ಟಿರುವ ದಾರಿದೀಪದಲ್ಲಿ ನಾವೆಲ್ಲರೂ ನಡೆಯೋಣ ಎಂದು ಸಂಸದರಾದ ಶ್ರೇಯಸ್ ಎಂ ಪಟೇಲ್ ಅವರು ತಿಳಿಸಿದ್ದಾರೆ. ವಿಶ್ವಕರ್ಮ ಮಾಡುವವರನ್ನು ನಾವು ಪ್ರಪಂಚದ ಶ್ರೇಷ್ಠ ದೇವರಿಗೆ ಹೋಲಿಸುವಂತಹ ಕೆಲಸ ಮಾಡಬೇಕು. ಕೇವಲ ಒಂದು ಸಮಾಜಕ್ಕೆ ಅಲ್ಲ ಇಡೀ ಪ್ರಪಂಚಕ್ಕೆ ತಿಳಿಹೇಳುವ, ಸಮಾಜದ ಏಳಿಗಾಗಿ ಶ್ರಮಿಸುವಂತಹ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ದೇವಾನು ದೇವತೆಗಳಿಗೆ ಆಯುಧ, ರಥಗಳನ್ನು ಮಾಡಿಕೊಟ್ಟವರು ವಿಶ್ವಕರ್ಮ ಸಮಾಜದವರು ಇಂದು ಅವರು ಹಾಕಿಕೊಟ್ಟಿರುವ ದಾರಿದೀಪದಲ್ಲಿ ನಾವೆಲ್ಲರೂ ನಡೆಯೋಣ ಎಂದು ಸಂಸದರಾದ ಶ್ರೇಯಸ್ ಎಂ ಪಟೇಲ್ ಅವರು ತಿಳಿಸಿದ್ದಾರೆ.ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿಂದು ಹಾಸನಾಂಬ ಕಲಾಕ್ಷೇತ್ರದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು, ವಿಶ್ವಕರ್ಮ ಮಾಡುವವರನ್ನು ನಾವು ಪ್ರಪಂಚದ ಶ್ರೇಷ್ಠ ದೇವರಿಗೆ ಹೋಲಿಸುವಂತಹ ಕೆಲಸ ಮಾಡಬೇಕು. ಕೇವಲ ಒಂದು ಸಮಾಜಕ್ಕೆ ಅಲ್ಲ ಇಡೀ ಪ್ರಪಂಚಕ್ಕೆ ತಿಳಿಹೇಳುವ, ಸಮಾಜದ ಏಳಿಗಾಗಿ ಶ್ರಮಿಸುವಂತಹ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಸ್ವರೂಪ್ ಪ್ರಕಾಶ್, ಸರ್ಕಾರ ಶಾಸಕರ ನಿಧಿಯಾಗಿ ೨೫ ಕೋಟಿ ಹಣವನ್ನು ನೀಡಿದೆ. ಅದರಲ್ಲಿ ಮೊದಲಿಗೆ ನಿಮ್ಮ ಸಮುದಾಯದ ಮಕ್ಕಳಿಗೆ ಅನುಕೂಲವಾಗಲೆಂದು ವಸತಿ ನಿಲಯ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ೨೫ ಲಕ್ಷವನ್ನು ನೀಡುತ್ತೇನೆ. ಮತ್ತು ಈಗಾಗಲೇ ಜಕಣಾಚಾರಿ ವೃತ್ತ ಎಂದು ಸರ್ಕಲ್‌ಗೆ ಹೆಸರನ್ನು ಇಡಲಾಗಿದೆ. ಮುಂದಿನ ದಿನಗಳಲ್ಲಿ ಅವರ ಪ್ರತಿಮೆಯನ್ನು ಮಾಡಿಸುತ್ತೇನೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಮಾತನಾಡಿ, ಜಗತ್ತಿಗೆ ರೂಪ ಕೊಟ್ಟವರು ವಿಶ್ವಕರ್ಮ ಸಮುದಾಯದವರು. ಇಂದು ಜಗತ್ತನ್ನು ಸುಂದರೀಕರಣ ಮಾಡುವ ದೈವಿಕಲೆ ಹೊಂದಿರುವ ಮಹಾನುಭಾವರ ಹೆಸರಿನಲ್ಲಿಂದು ವಿಶ್ವಕರ್ಮ ಜಯಂತಿಯನ್ನು ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.ನಮ್ಮ ನೆಲದ ಸಂಸ್ಕೃತಿ, ಪ್ರಪಂಚದ ಸೌಂದರ್ಯ ಸುಂದರವಾಗಿರಲು ವಿಶ್ವಕರ್ಮ ಸಮಾಜದವರು ಕಾರಣಕರ್ತರಾಗಿದ್ದಾರೆ. ಈ ಸಮುದಾಯದವರ ಕೊಡುಗೆ ನಮ್ಮ ದೇಶಕ್ಕೆ ಅಪಾರವಾಗಿದೆ. ಇಂದು ಆಚರಿಸುತ್ತಿರುವ ಈ ವಿಶ್ವಕರ್ಮ ಜಯಂತಿ ಒಂದು ಸಮುದಾಯಕ್ಕೆ ಮಾತ್ರ ಮೀಸಲಾಗಿಲ್ಲ ಬದಲಿಗೆ ಇಡೀ ಪ್ರಪಂಚಕ್ಕೆ ಮೀಸಲಾಗಿದೆ ಎಂದರು. ಶ್ರೀ ಶಿವಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಬಹಳ ಶ್ರೇಷ್ಠ ಹಾಗೂ ವಿಶೇಷವಾದದ್ದು ವಿಶ್ವಕರ್ಮದವರು ಮಾಡುವ ಕೆಲಸವಾಗಿದೆ. ಜೊತೆಗೆ ಶ್ರೇಷ್ಠವಾದ ಮನುಷ್ಯ ಜನ್ಮವನ್ನು ಭಗವಂತ ನಮಗೆ ನೀಡಿದ್ದಾನೆ. ಹಾಗಾಗಿ ನಾವೆಲ್ಲರೂ ಅತಃಕರಣ ಶುದ್ಧಿ ಮಾಡಿಕೊಂಡು ಮಹನೀಯರ ದಾರಿಯಲ್ಲಿ ನಡೆಯಬೇಕು ಎಂದು ತಿಳಿಸಿದರು.

ಶ್ರೀ ಕ್ಷೇತ್ರ ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿಯವರು ಮಾತನಾಡಿ, ಕರ್ಮ ಅಂದರೆ ಕೆಲಸ ಹಾಗಾಗಿ ಇಡೀ ವಿಶ್ವದ ಕೆಲಸ ಮಾಡುತ್ತಿರುವವರು ವಿಶ್ವಕರ್ಮ ಸಮುದಾಯದವರಾಗಿದ್ದಾರೆ. ಯಾವುದೇ ಅಪೇಕ್ಷೆ ಇಲ್ಲದೆ, ನಿರಾಪೇಕ್ಷತೆಯಿಂದ ವಿಶ್ವವನ್ನು ಸುಂದರಗೊಳಿಸುವ, ಯಾವುದೇ ವಸ್ತು ಸಿಕ್ಕರು ಅದನ್ನು ಸುಂದರತೆ ಮಾಡುವ ಕೆಲಸ ಮಾಡಿದ್ದಾರೆ ಎಂದರು. ಜೀವಂತವಾಗಿ ಉಳಿದಿರುವ ಕೆಲಸಗಳೆಂದರೆ ಅದು ವಿಶ್ವಕರ್ಮ ಸಮಾಜದವರು ಮಾಡಿರುವ ಕೆಲಸಗಳಾಗಿವೆ. ವಿಶ್ವ ನೋಡುತ್ತಿರುವ ಹಳೇಬೀಡು, ಬೇಲೂರಿನ ಶಿಲ್ಪ ಕಲೆ, ದೇವಾಲಯವನ್ನು ನಿರ್ಮಿಸಿದ ಜಕಣಾಚಾರಿಯವರು ಮಹಾನುಭಾವರಾಗಿದ್ದಾರೆ. ಅವರ ರೀತಿಯಲ್ಲಿ ನಿಮ್ಮ ನಿಮ್ಮ ಕರ್ಮಗಳ ಮಾಡುವುದೇ ನಿಮ್ಮನ್ನು ಶಾಶ್ವತವಾಗಿ ಉಳಿಯುವಂತೆ ಮಾಡುತ್ತದೆ. ಶಾಶ್ವತವಾಗಿ ನೆನಪಿಡುವ ಕೆಲಸವನ್ನು ಈ ಸಮಾಜ ಮಾಡಿದೆ ಅದನ್ನು ಮುಂದುವರಿಸಿ ಮಕ್ಕಳಿಗೆ ಕಲಿಸಿಕೊಡಿ ಎಂದು ತಿಳಿಸಿದರು.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಬಿ.ಪಿ ಕೃಷ್ಣೇಗೌಡ ಅವರು ಮಾತನಾಡಿ, ಮಹಾಭಾರತ, ಪೌರಾಣಿಕ ಕಾಲದಿಂದಲೂ ಎಲ್ಲಾ ಮಠಗಳಿಗೆ ಶಿಲ್ಪಗಳನ್ನು ಕೆತ್ತನೆ ಮಾಡಿಕೊಟ್ಟವರು ವಿಶ್ವಕರ್ಮ ಸಮಾಜದವರು. ರೈತರಿಗೆ ನೇಗಿಲ ಸೃಷ್ಟಿ ಮಾಡಿಕೊಟ್ಟು ಅನ್ನದಾತರಾದವರು ವಿಶ್ವಕರ್ಮ ಸಮಾಜದವರು ಎಂದರು.ಉಡುಪಿ ಜಿಲ್ಲೆಯ ಬಾರ್ಕೂರಿನ ವಾಗ್ಮಿಗಳಾದ ಎನ್.ಆರ್ ದಾಮೋದರ ಶರ್ಮ ಅವರು ಮಾತನಾಡಿ, ವಿಶ್ವಬ್ರಾಹ್ಮಣ ಪರಂಪರೆ ವೈದಿಕ ಧರ್ಮದ ಹಿನ್ನೆಲೆಯಲ್ಲಿ ಬಂದಿದೆ. ವಿಶ್ವಕರ್ಮ ದೇವತೆ ಕೇವಲ ಒಂದು ಸಮಾಜದ ದೇವತೆಯಲ್ಲ, ಜಗತ್ತಿನ ದೇವತೆ. ಜಗತ್ತನ್ನು ನಿರ್ಮಿಸಿ ಇಲ್ಲಿ ಏನೇನೂ ನಡೆಯುತ್ತಿದೆ ಅದನ್ನು ನಿಯಂತ್ರಿಸುವಂತವರೆ ವಿಶ್ವಕರ್ಮ ಸಮಾಜದವರು. ನಮ್ಮ ಪರಂಪರೆಯ ನೆನಪು ಇದ್ದರೆ ಮಾತ್ರ ಆ ಪರಂಪರೆಗೆ ಚ್ಯುತಿ ಬಾರದಂತೆ ಸರಿದಾರಿಯಲ್ಲಿ ನಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಮೂಗಿನ ನತ್ತಿನಿಂದ ಹಿಡಿದು ದೇಶದ ರಕ್ಷಣೆ ಬೇಕಾದ ಆಯುಧಗಳನ್ನು ಮಾಡಿಕೊಟ್ಟಿದ್ದು ವಿಶ್ವಕರ್ಮ ಸಮುದಾಯದವರು. ಹಾಗೂ ವಿಶ್ವಬ್ರಾಹ್ಮಣ ಸಮುದಾಯ ಕಟ್ಟಲು ಯಾವ ಸ್ವಾರ್ಥವೂ ಇಲ್ಲದೆ ಸಮಾಜಕ್ಕೆ ಶ್ರಮಿಸಿದರು ಅನೇಕರಿದ್ದಾರೆ ಎಂದು ಅನೇಕೆ ಮಹನೀಯರ ಜೀವನದ ಕುರಿತು, ವಿಶ್ವಕರ್ಮ ಸಮುದಾಯದ ಕುರಿತಾಗಿ ಸವಿವರವಾಗಿ ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಚ್.ಪಿ ತಾರಾನಾಥ್, ಸಮುದಾಯದ ಮುಖಂಡರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.