ಪೋಷಣ್ ಸಪ್ತಾಹದಲ್ಲಿ ಗರ್ಭಿಣಿಯರಿಗೆ ಸೀಮಂತ ಶಾಸ್ತ್ರ

| Published : Sep 18 2025, 01:10 AM IST

ಸಾರಾಂಶ

ಮಕ್ಕಳ ಆರೋಗ್ಯದ ಬಗ್ಗೆ ಅರಿವು ಮೂಡಿಸಿಕೊಂಡು ಪೋಷಕಾಂಶ ಹೊಂದಿರುವ ಆಹಾರ ಪೂರೈಕೆ ಮಾಡಬೇಕು, ಹಣ್ಣು, ತರಕಾರಿ, ಹಸಿರು ಸೊಪ್ಪು, ಮೊಳಕೆ ಕಟ್ಟಿದ ಕಾಳುಗಳು ನೀಡಬೇಕು. ಆರೋಗ್ಯದ ದೃಷ್ಟಿಯಿಂದ ವ್ಯಾಯಾಮ, ವಾಕಿಂಗ್ ಮಾಡುವ ಮೂಲಕ ಜೀವನ ಪದ್ಧತಿ ಬದಲಾಯಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮಕ್ಕಳಿಕೆ ಪೌಷ್ಟಿಕ ಆಹಾರ ಇರುವ ಹಣ್ಣು, ತರಕಾರಿ, ಸೊಪ್ಪು ಆಹಾರಗಳನ್ನು ನೀಡುವ ಮೂಲಕ ಆರೋಗ್ಯ ರಕ್ಷಣೆ ಮಾಡುವ ಜವಾಬ್ದಾರಿ ಪೋಷಕರ ಮೇಲಿದೆ ಎಂದು ಸಿಡಿಪಿಒ ಕೆ.ಆರ್.ಪೂರ್ಣಿಮಾ ಸಲಹೆ ನೀಡಿದರು.

ತಾಲೂಕಿನ ಕದಲಗೆರೆ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಡೆದ ಪೋಷಣ್ ಮಾಸಾಚರಣೆ ಹಾಗೂ ಪೋಷಣ್ ಸಪ್ತಾಹದಲ್ಲಿ ಮಾತನಾಡಿ, ಮಕ್ಕಳ ಆರೋಗ್ಯದ ಬಗ್ಗೆ ಅರಿವು ಮೂಡಿಸಿಕೊಂಡು ಪೋಷಕಾಂಶ ಹೊಂದಿರುವ ಆಹಾರ ಪೂರೈಕೆ ಮಾಡಬೇಕು, ಹಣ್ಣು, ತರಕಾರಿ, ಹಸಿರು ಸೊಪ್ಪು, ಮೊಳಕೆ ಕಟ್ಟಿದ ಕಾಳುಗಳು ನೀಡಬೇಕು ಎಂದರು. ಆರೋಗ್ಯದ ದೃಷ್ಟಿಯಿಂದ ವ್ಯಾಯಾಮ, ವಾಕಿಂಗ್ ಮಾಡುವ ಮೂಲಕ ಜೀವನ ಪದ್ಧತಿ ಬದಲಾಯಿಸಿಕೊಳ್ಳಬೇಕು. ಅಂಗನವಾಡಿ ಕೇಂದ್ರಗಳಲ್ಲೂ ಮಕ್ಕಳು ಹಾಗೂ ಗರ್ಭಿಣಿ, ಬಾಣಂತಿಯರಿಗೆ ಪೋಷಕಾಂಶಯುಕ್ತ ಆಹಾರ ನೀಡಲಾಗುತ್ತಿದೆ ಎಂದರು.

ಮಕ್ಕಳ ಕಲಿಕೆ ಎನ್ನುವುದು ಅಮ್ಮನ ಹೊಟ್ಟೆಯೊಳಗಿಂದಲೇ ಆರಂಭವಾಗುತ್ತದೆ. ಮಕ್ಕಳನ್ನು ಕಟ್ಟುನಿಟ್ಟಿನ ಪದ್ಧತಿಯಲ್ಲಿ ಬೆಳೆಸುವುದಕ್ಕಿಂತ ಸ್ವತಂತ್ರ್ಯವಾಗಿ ಬೆಳೆಯಲು ಅವಕಾಶ ನೀಡಬೇಕು. ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು.

ಜತೆಗೆ ಬಾಲ್ಯವಿವಾಹ, ಭ್ರೂಣಹತ್ಯೆ ಹಾಗೂ ಬಾಲ ಕಾರ್ಮಿಕ ಪದ್ಧತಿ ಎಂಬ ಅನಿಷ್ಟ ಪದ್ಧತಿಗಳ ಬಗ್ಗೆ ಅರಿವು ಮೂಡಿಸಬೇಕು, ಬಾಲ್ಯ ವಿವಾಹ ವಾಗುವಂತಹ ಮಕ್ಕಳಿಗೆ ಸಮಾಜದ ಸಮಸ್ಯೆಗಳ ಬಗ್ಗೆ ಅರಿವು ಕೊರತೆ ಇರುತ್ತದೆ. ಇದರಿಂದ ಆ ಮಕ್ಕಳು ಮುಂದೆ ಸಾಕಷ್ಟು ಸಮಸ್ಯೆ ಎದುರಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಗಳು ಸಹ ಇರುತ್ತವೆ ಎಂದರು.

ಇದೇ ವೇಳೆ ಗರ್ಭಿಣಿಯರಿಗೆ ಸೀಮಂತ ಶಾಸ್ತ್ರ ಮಾಡಲಾಯಿತು. ಕಾರ್‍ಯಕ್ರಮದಲ್ಲಿ ಅಂಗನವಾಡಿ ಮೇಲ್ವಿಚಾರಕಿಯರಾದ ಜಾಕೀಯಾ ಬಾನು, ಲಕ್ಷ್ಮೀ ಎಲ್.ದೇಶಪಾಂಡೆ, ತಾಲೂಕು ಪೋಷಣ್ ಸಂಚಾಲಕಿ ಅನುಷ, ಗ್ರಾಪಂ ಕಾರ್ಯದರ್ಶಿ ರಕ್ಷಿತ್, ಗ್ರಾಪಂ ಸದಸ್ಯ ದಾಸೇಗೌಡ, ಬಾಲವಿಕಾಶ ಸಮಿತಿ ಸದಸ್ಯ ಎಸ್.ದಿವಾಕರ್, ಎನ್.ಪ್ರಭಾ, ಗ್ರಾಮದ ಮುಖಂಡರು ಹಾಗೂ ಮೇಲುಕೋಟೆ ವೃತ್ತದ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.