ಕನ್ನಡಪ್ರಭ ವಾರ್ತೆ ತುಮಕೂರು

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಪ್ರತಿವರ್ಷ ನಡೆಯುವ ದನಗಳ ಜಾತ್ರೆ ಈ ಬಾರಿ ಸಾಕಷ್ಟು ಗಮನ ಸೆಳೆದಿದ್ದು ಜಾತ್ರೆಯಲ್ಲಿ ‘ಹಳ್ಳಿಕಾರ್’ ತಳಿಯ ಹೋರಿಗಳು 4 ಲಕ್ಷ ರು.ನಿಂದ 18 ಲಕ್ಷ ರು.ವರೆಗೂ ಮಾರಾಟಕ್ಕೆ ಬಂದಿರುವುದು ವಿಶೇಷವಾಗಿದೆ.

ಸಿದ್ದಗಂಗಾ ದನಗಳ ಜಾತ್ರೆಗೆ ಸಾವಿರಾರು ಹೋರಿಗಳನ್ನು ರೈತರು ತಂದಿದ್ದಾರೆ. ತುಮಕೂರು, ಹಾಸನ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಜಿಲ್ಲೆಗಳ ರೈತರು ಹಳ್ಳಿಕಾರ್ ತಳಿಯ ಹೋರಿಗಳನ್ನು ತಂದು ಮಾರಾಟಕ್ಕೆ ಇಟ್ಟಿದ್ದರೆ, ವಿವಿಧ ಕಡೆಯಿಂದ ರೈತರು ಕೂಡ ಅವುಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ.

ರೈತ ಮಧು ಎಂಬುವರು ಈ ಕುರಿತು ಮಾತನಾಡಿದ್ದು, ‘ಈ ಭಾಗದಲ್ಲಿ ಹಳ್ಳಿಕಾರ್ ತಳಿಯ ಹೋರಿಗಳನ್ನು ರೈತರು ಬಳಸುತ್ತಾರೆ ಹೀಗಾಗಿ ಅನೇಕ ವರ್ಷಗಳಿಂದ ನಾವು ಇವುಗಳನ್ನು ಸಾಕಿ ಸಿದ್ಧಗಂಗಾ ಜಾತ್ರೆಗೆ ತರುತ್ತೇವೆ. ಮೂರುವರೆ ಲಕ್ಷ ರು. ಮೌಲ್ಯದ ಹೋರಿಗಳು ಸೇರಿದಂತೆ ಸುಮಾರು 18 ಲಕ್ಷ ರು.ವರೆಗಿನ ಹೋರಿಗಳನ್ನು ಕೂಡ ನಾವು ಸಾಕುತ್ತಿದ್ದೇವೆ. ಹೋರಿಗಳನ್ನು ಅವುಗಳ ಹಲ್ಲುಗಳು ಇರುವ ಮಾನದಂಡ ಹಾಗೂ ಅವುಗಳ ಆರೋಗ್ಯಪೂರ್ಣ ಮೈಕಟ್ಟಿನಿಂದ ದರ ನಿಗದಿಪಡಿಸಲಾಗುತ್ತಿದೆ.

ಕಳೆದ ವರ್ಷ 15 ಲಕ್ಷ ರು.ಗಳಿಗೆ ಹೋರಿಗಳನ್ನು ಮಾರಾಟ ಮಾಡಿದ್ದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಮೌಲ್ಯದ ಹೋರಿಗಳು ಎಂದು ಪರಿಗಣಿಸಲಾಗಿತ್ತು. ಪ್ರಸ್ತುತ ದಿನಗಳಲ್ಲಿ ಹಳ್ಳಿಕಾರ್ ಹೋರಿಗಳ ಸಾಕಾಣಿಕೆ ಕ್ಷೀಣಿಸುತ್ತಿದೆ. ಆದರೆ ಇನ್ನೊಂದೆಡೆ ಅವುಗಳ ಬೇಡಿಕೆ ಹೆಚ್ಚಾಗುತ್ತಿರುವುದು ಗಮನಾರ್ಹಂಶವಾಗಿದೆ’ ಎಂದರು.