ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ 24 ಪುರುಷ, 4 ಮಹಿಳಾ ತಂಡ ಭಾಗಿ

-

ಕನ್ನಡಪ್ರಭ ವಾರ್ತೆ ತುಮಕೂರು

ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ಸಿದ್ಧಲಿಂಗೇಶ್ವರ ಜಾತ್ರೆ ಸಂದರ್ಭದಲ್ಲಿ ಜಿಲ್ಲಾ ಅಮೆಚೂರ್‌ ಕಬಡ್ಡಿ ಅಸೋಸಿಯೇಷನ್‌ ಸಹಕಾರದಲ್ಲಿ ನಗರದ ಸಿದ್ಧಗಂಗಾ ಸ್ಪೋರ್ಟ್ಸ್‌ ಅಸೋಸಿಯೇಷನ್‌ನಿಂದ ಮಠದಲ್ಲಿ ಫೆ.13ರಿಂದ 3 ದಿನಗಳ ಕಾಲ ರಾಜ್ಯ ಮಟ್ಟದ ಹೊನಲು ಬೆಳಕಿನ ಸಿದ್ಧಗಂಗಾ ಕಪ್ ಕಬಡ್ಡಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ.

ಸಿದ್ಧಗಂಗಾ ಮಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ ಮಠದಲ್ಲಿ ಸಿದ್ಧಗಂಗಾ ಕಪ್‌ಗಳನ್ನು ಅನಾವರಣಗೊಳಿಸಿ ಮಾತನಾಡಿ, ‘ಕಬಡ್ಡಿ ನಮ್ಮ ದೇಶದ ಗ್ರಾಮೀಣ ಕ್ರೀಡೆ. ಈ ಕ್ರೀಡೆಯನ್ನು ಪ್ರೋತ್ಸಾಹಿಸಬೇಕು ಎನ್ನುವ ಕಾರಣಕ್ಕೆ ಪ್ರತಿ ವರ್ಷ ಜಾತ್ರೆ ಸಂದರ್ಭದಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜಿಸಿಲು ಸಿದ್ಧಗಂಗಾ ಸ್ಪೋರ್ಟ್ಸ್ ಅಸೋಸಿಯೇಷನ್‌ನವರು ಮುಂದೆ ಬಂದಿದ್ದಾರೆ. ಈ ಪಂದ್ಯಾವಳಿಗೆ ಶ್ರೀಮಠದ ಆಶೀರ್ವಾದ, ಸಹಕಾರ ಇರುತ್ತದೆ’ ಎಂದು ಹೇಳಿದರು.


‘ಗ್ರಾಮೀಣ ಪ್ರದೇಶದಲ್ಲಿ ಅನೇಕ ಕಬಡ್ಡಿ ಆಟಗಾರರಿದ್ದಾರೆ, ಇಂತಹ ಪಂದ್ಯಾವಳಿಗಳನ್ನು ಆಯೋಜಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು. ವಿಶೇಷವಾಗಿ ಈಗಿನ ಮಕ್ಕಳು ಯಾವುದಾದರೂ ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕು. ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿಯಾಗಿದೆ’ ಎಂದು ಸ್ವಾಮೀಜಿ ಹೇಳಿದರು.

ಶ್ರೀ ಸಿದ್ಧಗಂಗಾ ಸ್ಪೋರ್ಟ್ಸ್ ಅಸೋಸಿಯೇಷನ್‌ ಗೌರವಾಧ್ಯಕ್ಷ ಎಚ್.ಎನ್. ದೀಪಕ್ ಮಾತನಾಡಿ, 13ರಂದು ಸಂಜೆ 6ಕ್ಕೆ ಶ್ರೀಮಠದ ಸಿದ್ಧಲಿಂಗ ಸ್ವಾಮೀಜಿ, ಶಿವಸಿದ್ಧೇಶ್ವರ ಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಅಧ್ಯಕ್ಷತೆಯಲ್ಲಿ ಅರವಿಂದ್ ಪ್ರಾಪರ್ಟೀಸ್ ಮಾಲೀಕ ಅಶೋಕ್ ಅವರು ಕಬಡ್ಡಿ ಪಂದ್ಯಾವಳಿ ಉದ್ಘಾಟಿಸುವರು. ರಾಜ್ಯ ಮಟ್ಟದ ಈ ಹೊನಲು ಬೆಳಕಿನ ಕಬಡ್ಡಿ ಟೂರ್ನಿಗೆ ಸಿದ್ಧಗಂಗಾ ಮಠದ ಆವರಣದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಅಂಕಣ ಸಿದ್ಧಪಡಿಸಲಾಗುತ್ತದೆ. ರಾಜ್ಯದ ಬಲಿಷ್ಠ ಪುರುಷರ 24 ಹಾಗೂ ಮಹಿಳೆಯರ 4 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. 3 ದಿನಗಳ ಈ ಟೂರ್ನಿಯಲ್ಲಿ ಭಾಗವಹಿಸುವ ಆಟಗಾರರಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಈ ವೇಳೆ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಕೆ.ಆರ್. ರವೀಂದ್ರ, ಭಾರತ ಕಬಡ್ಡಿ ತಂಡದ ತರಬೇತುದಾರರಾದ ಬಿ.ಸಿ. ರಮೇಶ್, ಸುರೇಶ್ ಸೇರಿದಂತೆ 6 ಜನರಿಗೆ ಸಿದ್ಧಗಂಗಾ ಕ್ರೀಡಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪಂದ್ಯಾವಳಿ ವೀಕ್ಷಣೆಗೆ ಸುಸಜ್ಜಿತ ಗ್ಯಾಲರಿ ನಿರ್ಮಾಣ ಮಾಡಲಾಗುವುದು. ವಿಜೇತ ತಂಡಕ್ಕೆ 2 ಲಕ್ಷ ರು. ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಪಿ ಹಾಗೂ ವಿವಿಧ ವಿಭಾಗಗಳಲ್ಲಿ ಬಹುಮಾನ ನೀಡಲಾಗುವುದು’ ಎಂದು ಎಚ್.ಎನ್.ದೀಪಕ್ ಹೇಳಿದರು.

ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಕೆ.ಆರ್.ರವೀಂದ್ರ, ಜಂಟಿ ಕಾರ್ಯದರ್ಶಿ ಮುನಿರಾಜು, ನಿರ್ದೇಶಕ ರಮೇಶ್, ಕನ್ನಡಪರ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಶಂಕರ್, ವಿಜಯಸೇನೆ ರಾಜ್ಯ ಕಾರ್ಯದರ್ಶಿ ರಂಜನ್, ಸಿದ್ಧಗಂಗಾ ಸ್ಪೋಟ್ಸ್ ಅಸೋಸಿಯೇಷನ್ ಅಧ್ಯಕ್ಷ ಆರ್.ಎಸ್.ವಿರೂಪಾಕ್ಷಯ್ಯ, ಉಪಾಧ್ಯಕ್ಷರಾದ ಕೆ.ಆರ್.ಸತೀಶ್, ಆರ್.ಗುರುಪ್ರಸಾದ್, ಆರ್.ಎಸ್.ಸೋಮಶೇಖರ್, ಬಿ.ಸಿ.ಮಲ್ಲಿಕಾರ್ಜುನ್, ಆರ್.ಹೆಚ್.ಶಿವಕುಮಾರ್, ಎಚ್.ಜಿ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಂ.ಪಿ.ಉಮಾಶಂಕರ್, ಕಾರ್ಯದರ್ಶಿ ಆರ್.ಎಂ.ಸಿದ್ದರಾಜು, ಖಜಾಂಚಿ ಎ.ಜಿ.ಹರೀಶ್ ಹಾಗೂ ನಿರ್ದೇಶಕರು ಈ ವೇಳೆ ಹಾಜರಿದ್ದರು.---

--

ಭಾರತ ಕಬಡ್ಡಿ ಕೋಚ್‌

ರಮೇಶ್‌ಗೆ ಸಿದ್ದಗಂಗಾ

ಕ್ರೀಡಾರತ್ನ ಪ್ರಶಸ್ತಿ

ಪಂದ್ಯಾವಳಿಯಲ್ಲಿ ಭಾರತ ಕಬಡ್ಡಿ ತಂಡದ ತರಬೇತುದಾರ ಬಿ.ಸಿ. ರಮೇಶ್, ಸುರೇಶ್ ಸೇರಿದಂತೆ 6 ಜನರಿಗೆ ಸಿದ್ಧಗಂಗಾ ಕ್ರೀಡಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕೆ.ಆರ್‌.ರವೀಂದ್ರ ತಿಳಿಸಿದರು.