ಧಾರವಾಡ:
ಗ್ರಂಥಾಲಯಗಳಲ್ಲಿ ಮಾಹಿತಿ ಪಡೆಯಲು ಹಳೆಯ ವಿಧಾನ ಬಳಸಿಕೊಳ್ಳಲಾಗುತ್ತಿತ್ತು. ಆದರೆ, ಇಂದು ಎಲ್ಲ ಗ್ರಂಥ, ಪುಸ್ತಕ, ಸಂಶೋಧನಾ ಗ್ರಂಥಗಳು ಡಿಜಿಟಲೀಕರಣಗೊಂಡಿವೆ ಎಂದು ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ ಅಭಿಪ್ರಾಯಪಟ್ಟರು.ಕವಿವಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ವತಿಯಿಂದ ಪ್ರೊ. ಎಂ.ಆರ್. ಕುಂಬಾರ ಅವರ ಜನ್ಮ ಶತಮಾನೋತ್ಸವ ಸವಿ ನೆನಪಿಗಾಗಿ ಸುವರ್ಣ ಮಹೋತ್ಸವದ ಸಭಾಂಗಣದಲ್ಲಿ "ಡಿಜಿಟಲ್, ಕೃತಕ ಬುದ್ಧಿಮತ್ತೆ " ಜಗತ್ತಿನಲ್ಲಿ ಸಾಂಪ್ರದಾಯಿಕ ವರ್ಗಿಕರಣ, ಕ್ಯಾಟಲಾಗ್ ಪದ್ಧತಿಯಿಂದ ಜ್ಞಾನ ಸಂಘಟನೆಯತ್ತ ಮುನ್ನಡೆಯುವಿಕೆ : ಹಿಂದಿನ ಭವಿಷ್ಯದ ದೃಷ್ಟಿಕೋನಗಳು ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರಮಟ್ಟದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಜ್ಞಾನ ನಿರ್ವಹಣೆಗೆ ಹೊಸ ತಂತ್ರಜ್ಞಾನದ ಅನ್ವೇಷಣೆ ನಡೆಯಬೇಕಾಗಿದೆ. ತಂತ್ರಜ್ಞಾನದಿಂದ ಗ್ರಂಥಾಲಯಗಳು ಪರಿವರ್ತನೆ ಹೊಂದುತ್ತಿವೆ. ಡಿಜಿಟಲ್ ಮತ್ತು ಕೃತಕ ಬುದ್ಧಿಮತ್ತೆ ಕಾಲದಲ್ಲಿ ಪುಸ್ತಕದಿಂದ ತಂತ್ರಜ್ಞಾನವು ಮಾಹಿತಿ ಒದಗಿಸುವಲ್ಲಿ ಅಭೂತಪೂರ್ವ ಬದಲಾವಣೆ ಆಗಿದೆ ಎಂದ ಅವರು, ಪ್ರೊ. ಎಂ.ಆರ್. ಕುಂಬಾರ ಅವರು ಒಬ್ಬ ದೇಶದ ಮಾಹಿತಿ ವಿಜ್ಞಾನ ವಿಷಯದ ದಿಗ್ಗಜರಾಗಿದ್ದರು ಎಂದರು.ಕವಿವಿ ಗ್ರಂಥಾಲಯ ಮಾಹಿತಿ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಸಿ.ಆರ್. ಕರಿಸಿದ್ದಪ್ಪ ಮಾತನಾಡಿ, ಕುಂಬಾರ ಅವರೊಬ್ಬ ದೂರದೃಷ್ಟಿ ಹೊಂದಿದ್ದರು. ದೇಶದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಶಿಕ್ಷಣ ಬೆಳೆಯಲು ಕಾರಣರಾದರು ಎಂದು ಹೇಳಿದರು.
ಕವಿವಿ ಗ್ರಂಥಾಲಯ ಮಾಹಿತಿ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್.ಎಂ. ಸಂಗಮ ಮಾತನಾಡಿ, ಕುಂಬಾರ ಮಾನವೀಯ ಮೌಲ್ಯ ಹೊಂದಿದ್ದರು. ಉತ್ತಮ ಸ್ನೇಹ ಸಂಬಂಧವನ್ನು ಸಹೋದ್ಯೋಗಿಗಳ ಜತೆಗೆ ಹೊಂದಿದ್ದರು. ಅನೇಕ ವಿಶ್ವವಿದ್ಯಾಲಯಗಳ ಜತೆಗೆ ನಿಕಟ ಸಂಪರ್ಕ ಹೊಂದಿದ್ದರು ಎಂದರು. ಬೆಂಗಳೂರಿನ ಬಸವ ಇಂಟರ್‌ನ್ಯಾಷನಲ್ ಇನ್ಫಾರ್ಮೇಶನ್ ಸೆಂಟರ್‌ನ ಮಹಾನಿರ್ದೇಶಕ ಪ್ರೊ. ಎಂ.ಎಂ. ಕೂಗನೂರಮಠ ಮಾತನಾಡಿದರು. ದಾವಣಗೆರೆ ವಿವಿ ಕುಲಪತಿ ಡಾ. ಬಿ.ಡಿ. ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ಗ್ರಂಥಾಲಯದ ಪರಿಣಿತರಾದ ಪ್ರೊ. ಪಿ. ಸದಾಶಿವ ಮೂರ್ತಿ, ಡಾ. ಎಸ್.ಆರ್. ಗುಂಜಾಳ ಅವರನ್ನು ಸನ್ಮಾನಿಸಲಾಯಿತು. ಪ್ರೊ. ಎಂ.ಆರ್. ಕುಂಬಾರ ಕುರಿತು ಎರಡು ಗ್ರಂಥ ಸೇರಿದಂತೆ ಸಮ್ಮೇಳನದ ಸಂಶೋಧನಾ ಗಂಥಗಳು ಲೋಕಾರ್ಪಣೆಗೊಂಡವು. 250ಕ್ಕೂ ಹೆಚ್ಚಿನ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಕವಿವಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಸಿ. ಕೃಷ್ಣಮೂರ್ತಿ, ಡಾ.ಆರ್.ಆರ್. ನಾಯಕ, ಡಾ. ಗುರುರಾಜ ಹಡಗಲಿ, ಡಾ. ಅನಿಲ ತಳವಾರ, ಗ್ರಂಥಾಲಯದ ತಜ್ಞರಾದ ಪ್ರೊ. ಸಿ.ಆರ್. ಕರಿಸಿದ್ದಪ್ಪ, ಪ್ರೊ. ಎಸ್.ಎಲ್. ಸಂಗಮ, ಪ್ರೊ. ರಮೇಶ ಬಾಬು, ಪ್ರೊ. ಮಹೇಶ ಹೊರಕೇರಿ, ಸೇರಿದಂತೆ ಹಲವರಿದ್ದರು.