ಎಲ್‌ಐಸಿ ಏಜೆಂಟರು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣ

| Published : Dec 21 2024, 01:18 AM IST

ಸಾರಾಂಶ

ಕೇಂದ್ರ ಸರ್ಕಾರವು ಐಆರ್‌ಡಿಎ ಮುಖಾಂತರ ನೂರಾರು ಕಾನೂನು-ಕಟ್ಟಳೆಗಳನ್ನು ಹೇರುತ್ತಿದೆ.

ಹೊಸಪೇಟೆ: ಕೇಂದ್ರ ಸರ್ಕಾರವು ಐಆರ್‌ಡಿಎ ಮುಖಾಂತರ ನೂರಾರು ಕಾನೂನು-ಕಟ್ಟಳೆಗಳನ್ನು ಹೇರುತ್ತಿದೆ. ಇದರಿಂದ ಎಲ್‌ಐಸಿ ಏಜೆಂಟರು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿನಿಧಿಗಳ ಸಂಘಟನೆಯ ಅಧ್ಯಕ್ಷ ಸೈಯದ್ ಬಶೀರ್ ಅಹ್ಮದ್ ಆರೋಪಿಸಿದರು.

ಇಲ್ಲಿನ ಭಾರತೀಯ ಜೀವ ವಿಮಾ ನಿಗಮದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಂಘಟನೆಯ 21ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಸಂಘಟನೆಯನ್ನು ಮುಂದಿನ ಪೀಳಿಗೆಗೆ ಸುಭದ್ರ ಗೊಳಿಸಬೇಕಾಗಿದೆ. ಪ್ರತಿನಿಧಿಗಳ ನ್ಯಾಯೋಚಿತ ಹಕ್ಕು ಮತ್ತು ಬೇಡಿಕೆಗಾಗಿ ಸಂಘಟನೆ ಅತಿ ಅವಶ್ಯಕವಾಗಿದೆ. ನಮ್ಮ ದುಡಿಮೆಯ ಕೆಲಸವನ್ನು ಸಂಘಟನೆಗೆ ಮೀಸಲು ಇಡಬೇಕು ಮತ್ತು ಉತ್ತಮ ಕೆಲಸ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.

ಕೇಂದ್ರ ಸರ್ಕಾರದ ಕಾನೂನುಗಳು ಐಆರ್‌ಡಿಎ ಮುಖಾಂತರ ನೂರಾರು ಕಟ್ಟಳೆಗಳನ್ನು ಪ್ರತಿನಿಧಿಗಳ ಮೇಲೆ ಹೇರಲಾಗುತ್ತಿದೆ ಮತ್ತು ಅವರ ಕಮಿಷನ್ ಅನ್ನು ಕಡಿಮೆ ಮಾಡುತ್ತಿದೆ. ಪ್ರತಿನಿಧಿಯ ವೃತ್ತಿಯನ್ನು ಆರಿಸಿಕೊಂಡು ಬದುಕುತ್ತಿರುವ 14 ಲಕ್ಷ ಏಜೆಂಟರು ಮತ್ತು ಅವರ ಕುಟುಂಬಗಳು ಈಗ ಸರ್ಕಾರದ ನೀತಿಗಳಿಂದ ಬೀದಿಗೆ ಬರುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಪುನರುಚ್ಚರಿಸಿದರು.

ಈಗಾಗಲೇ ಪಾರ್ಲಿಮೆಂಟಿನಲ್ಲಿ ಅನೇಕ ಲೋಕಸಭಾ ಸದಸ್ಯರು ಈ ವಿಷಯವನ್ನು ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದಿದ್ದಾರೆ. ಪ್ರತಿನಿಧಿಗಳು ಕೂಡ ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಪಾರ್ಲಿಮೆಂಟಿನ ಮುಂದೆ ಧರಣಿ ಮಾಡುತ್ತೇವೆ ಎಂದರು.

ಅಖಿಲ ಭಾರತ ಸಮಿತಿಯ ಕಾರ್ಯಾಧ್ಯಕ್ಷ ಎಲ್. ಮಂಜುನಾಥ್ ಮಾತನಾಡಿ, ಜೀವ ವಿಮಾ ಪ್ರತಿನಿಧಿಗಳ ಸಮೂಹವು ನಿರಂತರ ಶ್ರಮ ಪಡುತ್ತಿದೆ. ಪ್ರತಿನಿಧಿಗಳು ಸಂಘಟಿತರಾಗಿ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು. ಬೇಡಿಕೆ ಈಡೇರಿಕೆಗೆ ಹೋರಾಟವೊಂದೇ ಮಾರ್ಗ ಎಂದರು.

ಕೇಂದ್ರ ಸರ್ಕಾರದ ನೀತಿಗಳು ಪ್ರತಿನಿಧಿಗಳ ವ್ಯಾಪಾರಕ್ಕೆ ಮಾರಕವಾಗಿವೆ ಮತ್ತು ಕೇಂದ್ರ ಸರ್ಕಾರ ಐಆರ್‌ಡಿಎ ಮುಖಾಂತರ ವಿವಿಧ ಕಾನೂನುಗಳನ್ನು ಪ್ರತಿನಿಧಿಗಳ ಮೇಲೆ ಹೇರುತ್ತಿದೆ. ಇದರ ಪರಿಣಾಮ ನೇರವಾಗಿ ಪ್ರತಿನಿಧಿಗಳ ಮೇಲೆ ಆಗುತ್ತಿದೆ ಎಂದು ತಿಳಿಸಿದರು.

ಹೊಸಪೇಟೆ ಶಾಖೆಯ ಶಾಖಾಧಿಕಾರಿ ಬಿ. ಸುರೇಶ್ ಮಾತನಾಡಿ, ಪ್ರತಿನಿಧಿಗಳ ಯಾವುದೇ ಬೇಡಿಕೆಗಳನ್ನು ನಿಗಮ ಪರಿಶೀಲಿಸುತ್ತಿದೆ ಮತ್ತು ಯಾವುದೇ ತೊಂದರೆ ಆಗಲಾರದಂತೆ ನೋಡಿಕೊಳ್ಳಲಾಗುವುದು ಎಂದರು.

ಭಾರತೀಯ ದಂತ ವೈದ್ಯಕೀಯ ಮಂಡಳಿ ಹೊಸಪೇಟೆ ಇವರ ಸಹಯೋಗದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಕೂಡ ಆಯೋಜಿಸಲಾಗಿತ್ತು. ಎಂಡಿಆರ್‌ಟಿ ಪ್ರತಿನಿಧಿಯಾದ ಬಂಕದ ಮಂಜುನಾಥ್‌ ಅವರನ್ನು ಸನ್ಮಾನಿಸಲಾಯಿತು.

ಪ್ರತಿನಿಧಿಗಳಾದ ಸರಸ್ವತಿ, ಕೆ.ನೌಶಾದ್‌, ಮೆಹಬೂಬ್ ಬಾಷಾ, ಕೆ.ಮಲ್ಲಿಕಾರ್ಜುನ, ಶಿಲ್ಪಾರಾಣಿ, ಟಿ.ಪಾಂಡುರಂಗ ರಾವ್, ಜಿ.ಎನ್. ತಿಪ್ಪೇಸ್ವಾಮಿ, ಎಚ್.ಕೊಟ್ರೇಶಪ್ಪ, ಎ. ಭಾಸ್ಕರ್ ರಾವ್, ಭಾರತಿ ದಿನಕರ, ಶಾರದಾ, ಶಶಿಕಲಾ, ಜಮೀರ ಬೇಗಂ, ಪಿ. ಪಂಪಾಪತಿ, ಕೆ.ವಿರುಪಾಕ್ಷಪ್ಪ, ಕೆ.ಬಸವರಾಜ್, ಕಟ್ಟೆ ಬಸವನಗೌಡ, ಮಂಜುನಾಥ ಬಡಿಗೇರ್, ರಾಮಕೃಷ್ಣ, ಶಿವಕುಮಾರಿ, ಶಾರದಾ, ನಾಗರಾಜ್, ಶೈಲಜಾ ಭಟ್, ಸಿಐಟಿಯುನ ರಾಜ್ಯ ಸಂಚಾಲಕಿ ನಾಗರತ್ನಮ್ಮ, ಜೆ. ಪ್ರಕಾಶ್ ಮತ್ತಿತರರಿದ್ದರು.

ಸಂಘಟನೆಯ ಕಾರ್ಯದರ್ಶಿ ಖಾಸಿಂಸಾಬ್ ನಿರ್ವಹಿಸಿದರು.

ಹೊಸಪೇಟೆಯಲ್ಲಿ ಶುಕ್ರವಾರ ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಂಘಟನೆಯ 21ನೇ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು.