ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಆಕರ್ಷಕ ರಥ

| Published : Dec 21 2024, 01:18 AM IST

ಸಾರಾಂಶ

ಮೆರವಣಿಗೆ ತಡವಾಗಿ ಆರಂಭವಾಗಿದ್ದರಿಂದ ಸಮ್ಮೇಳನಾಧ್ಯಕ್ಷರ ರಥ ತರಾತುರಿಯಲ್ಲಿ ಮುಂದೆ ಚಲಿಸಿತು. ಆದರೆ ಈ ವೇಗಕ್ಕೆ ಕಲಾತಂಡಗಳು ಸಾಥ್‌ ನೀಡಲು ಸಾಧ್ಯವಾಗದೆ ಹಿಂದುಳಿದವು. ಮಾರ್ಗಮಧ್ಯೆ ಸಾರ್ವಜನಿಕರು ಕಲಾತಂಡಗಳ ಜೊತೆ ಹೆಜ್ಜೆ ಹಾಕಿದ್ದರಿಂದ ಕಲಾತಂಡಗಳ ವೇಗ ಕಡಿಮೆಯಾಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯದಲ್ಲಿ ನಡೆದ ನುಡಿಹಬ್ಬದ ಸಮ್ಮೇಳನಾಧ್ಯಕ್ಷ ಗೊ.ರು.ಚನ್ನಬಸಪ್ಪ ಅವರ ಮೆರವಣಿಗೆ ಅದ್ಧೂರಿಯಾಗಿ, ವಿಜೃಂಭಣೆಯಿಂದ ನೆರವೇರಿತು.

ಸಮ್ಮೇಳನಾಧ್ಯಕ್ಷರ ರಥದ ಮಾದರಿಯ ವಿಶೇಷ ವಾಹನವು ಕೆಂಪು ಆಸನ, ಕೆಂಪು ಹಾಸಿನಿಂದ ಕಂಗೊಳಿಸಿದ್ದು, ಒಂದು ಬದಿಯಲ್ಲಿ 8 ಮಂದಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಮತ್ತೊಂದು ಬದಿಯಲ್ಲಿ ನಾಗಮಂಗಲದ ಆದಿಚುಂಚನಗಿರಿ ಮಠ, ಮಳವಳ್ಳಿಯ ಗಗನ ಚುಕ್ಕಿ ಫಾಲ್ಸ್, ಮದ್ದೂರಿನ ಸ್ವಾತಂತ್ರ್ಯ ಸೌಧ, ಮಂಡ್ಯದ ಸಕ್ಕರೆ ಕಾರ್ಖಾನೆ, ಕೆ.ಆರ್.ಪೇಟೆಯ ಹೊಸಹೊಳಲಿನ ಹೊಯ್ಸಳರ ಕಾಲದ ದೇವಸ್ಥಾನ, ಪಾಂಡವಪುರದ ಮೇಲುಕೋಟೆ ಚಲುವರಾಯಸ್ವಾಮಿ, ಶ್ರೀರಂಗಪಟ್ಟಣದ ಕೆ.ಆರ್.ಎಸ್ ಜಲಾಶಯದ ಭಾವಚಿತ್ರ ಅಳವಡಿಸಲಾಗಿತ್ತು.

ಕೊಂಚ ಗೊಂದಲ: ಮೆರವಣಿಗೆ ತಡವಾಗಿ ಆರಂಭವಾಗಿದ್ದರಿಂದ ಸಮ್ಮೇಳನಾಧ್ಯಕ್ಷರ ರಥ ತರಾತುರಿಯಲ್ಲಿ ಮುಂದೆ ಚಲಿಸಿತು. ಆದರೆ ಈ ವೇಗಕ್ಕೆ ಕಲಾತಂಡಗಳು ಸಾಥ್‌ ನೀಡಲು ಸಾಧ್ಯವಾಗದೆ ಹಿಂದುಳಿದವು. ಮಾರ್ಗಮಧ್ಯೆ ಸಾರ್ವಜನಿಕರು ಕಲಾತಂಡಗಳ ಜೊತೆ ಹೆಜ್ಜೆ ಹಾಕಿದ್ದರಿಂದ ಕಲಾತಂಡಗಳ ವೇಗ ಕಡಿಮೆಯಾಯಿತು. ಹಿಂದುಳಿಯುವಂತಾಯಿತು. ಸಮ್ಮೇಳನಾಧ್ಯಕ್ಷರ ವಾಹನಕ್ಕೂ ಹಿಂದೆ ಬರುತ್ತಿದ್ದ ಕಲಾತಂಡಗಳಿಗೂ ಸುಮಾರು ಅರ್ಧ ಕಿ.ಮೀ. ದೂರ ಅಂತರಸೃಷ್ಟಿಯಾಗುತ್ತಿದ್ದಂತೆ ಪೊಲೀಸರು ಕಲಾತಂಡಗಳು ಮತ್ತು ಸ್ತಬ್ದಚಿತ್ರಗಳನ್ನು ಬೇಗ ಸಾಗುವಂತೆ ಸೂಚಿಸಿದರು. ಈ ವೇಳೆ ಪೊಲೀಸರು ಮತ್ತು ಸ್ತಬ್ದಚಿತ್ರದ ಸಿಬ್ಬಂದಿ ನಡುವೆ ಪಿಇಎಸ್ ಕಾಲೇಜು ಬಳಿ ಮಾತಿನ ಚಕಮಕಿ ನಡೆಯಿತು.

ಕೆಲ ಕಡೆ ಮಕ್ಕಳು ಸುಸ್ತಾಗಿ ಕಾದು ಕುಳಿತರೆ, ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಮೆರವಣಿಗೆ ಹಾದಿಯಲ್ಲಿ ಓಡಿಕೊಂಡೇ ಮುಂದೆ ಹೋಗುವಂತಾಯಿತು. ಮೆರವಣಿಗೆಯುದ್ದಕ್ಕೂ ಮಂಡ್ಯದ ವಿವಿಧ ಶಾಲಾ, ಕಾಲೇಜು ಮಕ್ಕಳು, ಶಿಕ್ಷಕರು ರಸ್ತೆಯ ಒಂದು ಬದಿಯಲ್ಲಿ ನಿಂತು ಹೂ ಮಳೆಗರೆದು ಸಮ್ಮೇಳನಾಧ್ಯಕ್ಷರನ್ನು ಸ್ವಾಗತಿಸಿದರು. ಜನಸಂದಣಿ, ಅದ್ಧೂರಿ ಮೆರವಣಿಗೆಯ ನಡುವೆಯೂ ಸ್ವಚ್ಛತೆಗೆ ಯಾವುದೇ ಕೊರತೆ ಕಂಡು ಬರಲಿಲ್ಲ.ರೋಚಕತೆಯ ಕುಣಿತ

ಕೆ.ಆರ್. ಪೇಟೆ ತಾಲೂಕು ಕಿಕ್ಕೇರಿ ಹೋಬಳಿ ಕೃಷ್ಣಾಪುರದ ಪೆಟ್ಟಿಗೆ ಮಾರಮ್ಮನ ಸಿಂಧುಳ್ಳಿ ಜನಾಂಗದವರು ಪೆಟ್ಟಿಗೆ ಮಾರನ ಮುಂದೆ ಕುಣಿಯುತ್ತ, ರೋಷಾವೇಷದಲ್ಲಿ ಚಾವಟಿಯಿಂದ ತಮ್ಮ ಮೈಗೆ ಬಾರಿಸಿಕೊಳ್ಳುತ್ತ ಕುಣಿದ ರೀತಿ ಒಂದೆಡೆ ರೋಚಕತೆ ಸೃಷ್ಟಿಸಿದರೆ, ಚಿಕ್ಕ ಮಕ್ಕಳು ಹಾಗೂ ಶಾಲಾ ವಿದ್ಯಾರ್ಥಿಗಳಲ್ಲಿ ಕೊಂಚ ಹೆದರಿಕೆಗೂ ಕಾರಣವಾಯಿತು.ಮಹಿಳೆಯರಿಂದ ಪುಸ್ತಕ ಮೆರವಣಿಗೆ

ಕೆಲ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಪೂರ್ಣಕುಂಭ ಸ್ವಾಗತ ಕೋರಿದರೆ, 87 ಮಂದಿ ಮಹಿಳೆಯರು ಅರುಣಕುಮಾರಿ ಅವರ ನೇತೃತ್ವದಲ್ಲಿ ಪುಸ್ತಕಗಳನ್ನು ಕಳಸದ ರೀತಿ ಜೋಡಿಸಿ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಎರಡು ಪುಸ್ತಕಗಳ ನಡುವೆ ಸಾಹಿತ್ಯ ಸಮ್ಮೇಳನದ ಗೋಪುರದ ಭಾವಚಿತ್ರವನ್ನಿರಿಸಿ, ಕಳಸದ ರೀತಿ ಜೋಡಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು.ಗಮನ ಸೆಳೆದ ಆಟೋ ಚಾಲಕರು

ಟಿ. ಕೃಷ್ಣ ಆಟೋ ಚಾಲಕರ ಸಂಘದ 87 ಮಂದಿ ಆಟೋರಿಕ್ಷಾಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದವು. ಕನ್ನಡ ಹೋರಾಟದಲ್ಲಿ ಸಹಜವಾಗಿ ಆಟೋ ಚಾಲಕರ ಪಾಲು ಹೆಚ್ಚಿರುತ್ತದೆ. ಅದೇ ರೀತಿ ಮಂಡ್ಯ ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಆಟೋ ಚಾಲಕರು ಮೆರವಣಿಗೆಯುದಕ್ಕೂ ಕುಣಿದು ಕುಪ್ಪಳಿಸಿ ಕನ್ನಡಾಭಿಮಾನ ಮೆರೆದರು.ಎತ್ತಿನ ಗಾಡಿ ಮೆರವಣಿಗೆ

ಸಂಪಹಳ್ಳಿ ಶಿವಶಂಕರ ಅವರ ನೇತೃತ್ವದಲ್ಲಿ 10 ಎತ್ತಿನ ಗಾಡಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ನೂರು ವರ್ಷದ ಹಳೆಯ ನಾಗಮಂಗಲ ತಾಲೂಕಿನ ಮರಡಿಪುರದ ಪ್ರಗತಿಪರ ರೈತ ಸಂತೋಷ್ ಮತ್ತು ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು. ಸಾಹಿತ್ಯ ಪರಿಷತ್ ವತಿಯಿಂದ ಅವರಿಗೆ ವಿಶೇಷ ಆಹ್ವಾನ ನೀಡಲಾಗಿತ್ತು.ತ್ರಿಚಕ್ರ ವಾಹನದಲ್ಲಿ ವಿಶೇಷ ಚೇತನ

ಅಲಂಕೃತ ತ್ರಿಚಕ್ರ ವಾಹನದಲ್ಲಿ ಬಂದ ಅಂಗವಿಕಲ ವ್ಯಕ್ತಿಯೊಬ್ಬರು ಮೆರವಣಿಗೆಯಲ್ಲಿ ಗಮನ ಸೆಳೆದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ನಾಡಿನ ಹಿರಿಯ ಸಾಹಿತಿಗಳ ಭಾವಚಿತ್ರದೊಡನೆ ಮಕ್ಕಳ ಜೊತೆಗೆ ಮೆರವಣಿಗೆಯಲ್ಲಿ ಪಾಲ್ಗೊಂಡು ಅ‍ವರು ಕನ್ನಡಾಭಿಮಾನ ಮೆರೆದರು.