ಸಾರಾಂಶ
- ಶ್ರೀ ಬೇಡರ ಕಣ್ಣಪ್ಪ ಸ್ವಾಮಿ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮ - - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಶಿವನು ನಿರ್ಮಲ, ನಿಷ್ಕಲ್ಮಶ ಭಕ್ತಿಯ ಪ್ರಿಯನಾಗಿದ್ದಾನೆ ಎಂದು ಹಲವಾರು ಮಹಾನೀಯರು ಹೇಳಿದ್ದಾರೆ. ಅದರಂತೆ ಶಿವನಿಗೆ ತನ್ನ ನೇತ್ರವನ್ನೇ ಅರ್ಪಿಸಿದ ಬೇಡರ ಕಣ್ಣಪ್ಪನ ಭಕ್ತಿ ಜಗತ್ತಿನಲ್ಲೇ ಸಾರ್ಥಕತೆಯ ಭಕ್ತಿಯಾಗಿದೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ನುಡಿದರು.ತಾಲೂಕಿನ ಹೊಳೆ ಹರಳಹಳ್ಳಿಯಲ್ಲಿ ವಾಲ್ಮೀಕಿ ಸಮಾಜದ ಸೇವಾ ಸಮಿತಿ, ಹೊಳೆ ಹರಳಹಳ್ಳಿ, ಗ್ರಾಮದ ಭಕ್ತರು ಬುಧವಾರ ಹಮ್ಮಿಕೊಂಡಿದ್ದ ನೂತನ ಶ್ರೀ ಬೇಡರ ಕಣ್ಣಪ್ಪ ಸ್ವಾಮಿ ದೇವಸ್ಥಾನ ಉದ್ಘಾಟನೆ, ಶಿಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಮತ್ತು ಗೋಪುರ ಕಳಸಾರೋಹಣ ಕಾರ್ಯಕ್ರಮದಲ್ಲಿ ನೂತನ ದೇವಸ್ಥಾನ ಪ್ರವೇಶ ಕಾರ್ಯ ನೆರವೇರಿಸಿ, ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಮಾನವನ ಜೀವನದ ಸಾರ್ಥಕತೆ ಭಗವಂತನ ಸ್ಮರಣೆಯಲ್ಲಿದೆ, ಹೊಳೆ ಹರಳಹಳ್ಳಿ ಗ್ರಾಮದವರು ಎಲ್ಲರೂ ಒಗ್ಗೂಡಿ ಬೇಡರ ಕಣ್ಣಪ್ಪ ದೇವಸ್ಥಾನ ನಿರ್ಮಾಣ ಮಾಡಿ, ಉದ್ಘಾಟನೆ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಸಂಗತಿಯಾಗಿದೆ. ದೇವರಲ್ಲಿ ಎಲ್ಲರೂ ಭಕ್ತಿ ಹೊಂದಿ, ಜೀವನದಲ್ಲಿ ಮುಂದುವರಿಯಬೇಕು ಎಂದು ಹೇಳಿದರು.ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ನೂತನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿ ಮಾತನಾಡಿ, ಗ್ರಾಮದಲ್ಲಿ ಸಮಾಜ ಮೆಚ್ಚುವಂತೆ ದೇವಸ್ಥಾನ ನಿರ್ಮಿಸಿದ್ದೀರಿ. ಜೊತೆಗೆ ದೇಗುಲ ನಿರ್ವಹಣೆ ಕೂಡ ಉತ್ತಮ ರೀತಿಯಲ್ಲಿ ಮಾಡಿಕೊಂಡು ಮಾದರಿ ಆಗಬೇಕು ಎಂದರು.
ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಗೋಪುರ ಕಳಸಾರೋಹಣ ನೇರವೇರಿಸಿ, ಧರ್ಮಸಭೆ ಸಾನ್ನಿಧ್ಯ ವಹಿಸಿ, ಬೇಡರ ಕಣ್ಣಪ್ಪ ದೇವರನ್ನು ಮುಗ್ದಭಕ್ತಿಯಿಂದ ಒಲಿಸಿಕೊಂಡ ಭಕ್ತ. ವ್ಯಕ್ತಿ ನಿಸ್ವಾರ್ಥ ಮನೋಭಾವನೆಯಿಂದ ಮಾಡುವ ಪ್ರತಿ ಕೆಲಸ ದೇವರ ಪೂಜೆಗೆ ಸಮಾನ ಎಂಬುದಕ್ಕೆ ಬೇಡರ ಕಣ್ಣಪ್ಪ ಉದಾಹರಣೆ ಎಂದರು.ಅಣಜಿ ಕಾಲೇಜಿನ ಪ್ರಾಂಶುಪಾಲ ರವಿಕುಮಾರ್ ಮಾತನಾಡಿದರು. ಅಧ್ಯಕ್ಷತೆ ವಾಲ್ಮೀಕಿ ಸಮಾಜದ ಸೇವಾ ಸಮಿತಿ ಹೊಳೆಹರಳ್ಳಿ ಸುರೇಶಪ್ಪ ತಡಕನಹಳ್ಳೇರ ವಹಿಸಿದ್ದರು. ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಶಿವಾನಂದಪ್ಪ, ಗೌರವಾಧ್ಯಕ್ಷ ತಿಮ್ಮೇನಹಳ್ಳಿ ಚಂದಪ್ಪ, ಸಮಾಜದ ನ್ಯಾಮತಿ ತಾಲೂಕಿನ ಅಧ್ಯಕ್ಷ ಬಿ.ಸೋಮಶೇಖರ್, ಆಂಜನೇಯ ಸ್ವಾಮಿ ಕಮಿಟಿಯ ರಾಮಪ್ಪ ತೋಟದಮನೆ, ವಾಗೀಶಯ್ಯ ಮಠದ, ಚಂದ್ರಶೇಖರಯ್ಯ ಮಠದ, ದರ್ಶನ್ ಬಳ್ಳೇಶ್ವರ, ಎಂ.ಪಿ.ರಾಜು, ಗ್ರಾಮದ ಮುಖಂಡರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಕೊಕ್ಕನೂರು, ಹಿರೇಗೊಣಿಗೆರೆ, ನರಸಗೊಂಡನಹಳ್ಳಿ, ಹನುಮಸಾಗರ, ದೇವರ ಹೊನ್ನಾಳಿ ಗ್ರಾಮಗಳಿಂದ ಆಂಜನೇಯ ಸ್ವಾಮಿ, ಬೇಟೆ ಮರದಮ್ಮ, ಮಾಧವ ರಂಗನಾಥ ಸ್ವಾಮಿ ದೇವರ ಪಲ್ಲಕ್ಕಿಗಳನ್ನು ತಂದು ಪೂಜೆ ಸಮರ್ಪಿಸಲಾಯಿತು. ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು.- - -
-26ಎಚ್.ಎಲ್.ಐ1: ಹೊನ್ನಾಳಿ ತಾಲೂಕಿನ ಹೊಳೆ ಹರಳಹಳ್ಳಿಯಲ್ಲಿ ಶ್ರೀ ಬೇಡರ ಕಣ್ಣಪ್ಪ ಸ್ವಾಮಿ ದೇವಸ್ಥಾನ ಉದ್ಘಾಟನೆ ಧರ್ಮಸಭೆಯನ್ನು ವಿವಿಧ ಮಠಾಧೀಶರು ಉದ್ಘಾಟಿಸಿದರು. ಗಣ್ಯರು, ಗ್ರಾಮದ ಮುಖಂಡರು ಇದ್ದಾರೆ.