ಸಾರಾಂಶ
- ಆಯುಕ್ತರ ಆದೇಶಕ್ಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ್ ಗರಂ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಜಲಸಿರಿ ಯೋಜನೆ ಕಾಮಗಾರಿ ಪೂರ್ಣ ಅನುಷ್ಠಾನವಾಗಿ ನೀರು ಪೂರೈಸುವವರೆಗೂ ಬಿಲ್ ಪಾವತಿಸಲು ಸಾರ್ವಜನಿಕರ ಮೇಲೆ ಹೊರೆ ಹಾಕುವಂತಿಲ್ಲವೆಂದು ಸಾಮಾನ್ಯ ಸಭೆಯಲ್ಲೇ ತೀರ್ಮಾನಿಸಿದ್ದರೂ, ಪಾಲಿಕೆ ಆಯುಕ್ತರು ಜೂನ್ ತಿಂಗಳಿನಿಂದಲೇ ಶುಲ್ಕ ಸಂಗ್ರಹಿಸಲು ಕೆಯುಐಡಿಎಫ್‌ಸಿಗೆ ಪತ್ರ ಬರೆದಿದ್ದಾರೆ ಎಂದು ಪಾಲಿಕೆ ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ ಆರೋಪಿಸಿದ್ದಾರೆ.ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜನರಿಗೆ ತೆರಿಗೆ ಭಾರ ಇಳಿಸಿ, ಜನರ ಹಿತ ಕಾಯಬೇಕಾದ ಮೇಯರ್ ಕೇವಲ ಸುದ್ದಿಗೋಷ್ಟಿ ಮಾಡಿ ಕಾಲ ಕಳೆಯುತ್ತಿದ್ದಾರೆ. ಮೇ ತಿಂಗಳಲ್ಲೇ ಜಲಸಿರಿ ಬಿಲ್ ನೀಡುವಂತೆ ಆದೇಶವಾಗಿದೆ. ಜಲಸಿರಿ ಬಿಲ್ ನೀಡಲು ಹಾಗೂ ಶುಲ್ಕ ಸಂಗ್ರಹಿಸಲು ಆಯುಕ್ತರೇ ಆದೇಶಿಸಿದ್ದಾರೆ ಎಂದು ಕಿಡಿಕಾರಿದರು.
20 ದಿನಗಳಿಂದಲೂ ಜಲಸಿರಿಯ ಬಿಲ್‌ಗಳನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಇದಕ್ಕಿಂತಲೂ ಬೇರೆ ಸಾಕ್ಷಿ ಬೇಕೇ? ಬಿಲ್ ನೀಡಿದ 15 ದಿನಗಳ ಒಳಗಾಗಿ ಜಲಸಿರಿ ನೀರಿನ ಶುಲ್ಕ ಪಾವತಿಸುವಂತೆ ಸಾರ್ವಜನಿಕರ ಮೇಲೆ ಒತ್ತಡ ಹೇರುತ್ತಿರುವುದು ಮೇಯರ್ ಮತ್ತು ಆಡಳಿತ ಪಕ್ಷದ ಸದಸ್ಯರ ಗಮನಕ್ಕೆ ಬರುತ್ತಿಲ್ಲವೇ? ನಿದ್ದೆಯಲ್ಲಿದ್ದ ದಾವಣಗೆರೆ ಮೇಯರ್ ಹಾಗೂ ಕಾಂಗ್ರೆಸ್ಸಿನ ಪಾಲಿಕೆ ಸದಸ್ಯರು ಈಗ ಎಚ್ಚೆತ್ತುಕೊಂಡಿದ್ದಾರೆ. ಆಡಳಿತ ಪಕ್ಷದ ಕಾಂಗ್ರೆಸ್ಸಿಗರ ಜಲಸಿರಿ ಬಿಲ್ ನೀಡಿಲ್ಲವೆಂಬ ಹಾರಿಕೆ ಉತ್ತರ ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದರು.ದಾವಣಗೆರೆ ಮಹಾನಗರದಲ್ಲಿ ಜಲಸಿರಿ ಬಿಲ್ ಮೊತ್ತ ಕಟ್ಟಿಸಿಕೊಳ್ಳದಂತೆ ವಿಪಕ್ಷ ಸದಸ್ಯರು ಒತ್ತಡ ಹೇರಿದ್ದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ, ತಿಳಿಸುವುದಾಗಿ ಆಯುಕ್ತರು ಮತ್ತು ಆಡಳಿತ ಪಕ್ಷದವರು ಈಗ ಹೇಳುತ್ತಿದ್ದಾರೆ. ಅಸಲಿಗೆ ಜಲಸಿರಿ ಬಿಲ್ ಪಾವತಿಗೂ, ಜಿಲ್ಲಾ ಉಸ್ತುವಾರಿ ಸಚಿವರಿಗೂ ಸಂಬಂಧವೇ ಇಲ್ಲ. ಪಾಲಿಕೆ ಸಾಮಾನ್ಯ ಸಭೆಯ ನಿರ್ಧಾರವೇ ಇಲ್ಲಿ ಅಂತಿಮ ಎಂಬ ಅರಿವಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.
ಉಪ ಮೇಯರ್ ಯಶೋಧ ಯೋಗೇಶ ಮಾತನಾಡಿ, ಮೇಯರ್ ಉತ್ತಮ ಆಡಳಿತ ನೀಡುವಲ್ಲಿ ನಿಷ್ಕ್ರಿಯರಾಗಿದ್ದಾರೆ. ಜನರಿಗೆ ಉತ್ತಮ ಕೆಲಸ ಮಾಡಲಾಗದ ಮೇಯರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. ನಾವು ಜನಪರ ಆಡಳಿತ ನಡೆಸಿಕೊಂಡು ಹೋಗುತ್ತೇವೆ ಎಂದು ಆಗ್ರಹಿಸಿದರು.ಸುದ್ದಿಗೋಷ್ಟಿಯಲ್ಲಿ ಪಾಲಿಕೆ ಸದಸ್ಯ ಕೆ.ಎಂ.ಸುರೇಶ್ ಮತ್ತು ಇತರರು ಇದ್ದರು.
- - -ಕೋಟ್ ಮೇಯರ್ ಹಾಗೂ ಕಾಂಗ್ರೆಸ್ಸಿನ ಸದಸ್ಯರು ಸಾಮಾನ್ಯ ಸಭೆಯ ನಿರ್ಣಯಕ್ಕೆ ಗೌರವ ನೀಡಿ, ಪಾಲಿಕೆ ಆಯುಕ್ತರ ಆದೇಶವನ್ನು ರದ್ದುಪಡಿಸುವುದನ್ನು ಬಿಟ್ಟು, ಪತ್ರಿಕಾಗೋಷ್ಟಿಯಲ್ಲಿ, ಸಚಿವರಿಗೆ ಕಾಯುತ್ತಿರುವ ಪರಿಯನ್ನು ನೋಡಿದರೆ ನಗೆ ಬರುವಂತಿದೆ. ಆಡಳಿತ ನಡೆಸಲು ಸಂಪೂರ್ಣ ವಿಫಲವಾಗಿರುವುದಕ್ಕೆ ಸಾಮಾನ್ಯ ಸಭೆಯ ನಿರ್ಣಯವನ್ನೇ ಕಡೆಗಣಿಸಿ, ಆಯುಕ್ತರು ಆದೇಶ ಹೊರಡಿಸಿರುವುದೇ ಸಾಕ್ಷಿ
- ಕೆ.ಪ್ರಸನ್ನಕುಮಾರ, ವಿಪಕ್ಷ ನಾಯಕ, ಪಾಲಿಕೆ- - - -26ಕೆಡಿವಿಜಿ1:
ದಾವಣಗೆರೆಯಲ್ಲಿ ಬುಧವಾರ ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಉಪ ಮೇಯರ್ ಯಶೋಧ ಯೋಗೇಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.