ಬುದ್ಧನ ಆದರ್ಶ ಅಳವಡಿಸಿಕೊಂಡರೆ ಜೀವನ ಪರಿಪೂರ್ಣ: ಕಾವ್ಯರಾಣಿ

| Published : May 13 2025, 01:17 AM IST

ಸಾರಾಂಶ

ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ಕೂಡ ಪರಿಪೂರ್ಣವಾಗಿಸಿಕೊಳ್ಳಲು ಸಹಕಾರಿಯಾಗುತ್ತದೆ.

ಮುಂಡಗೋಡ; ಗೌತಮ ಬುದ್ಧನ ತತ್ವ ಸಿದ್ಧಾಂತ ಹಾಗೂ ಅವರ ಮಾರ್ಗದರ್ಶನವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ಕೂಡ ಪರಿಪೂರ್ಣವಾಗಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಿರಸಿ ಉಪ ವಿಭಾಗ ಸಹಾಯಕ ಆಯುಕ್ತೆ ಕಾವ್ಯರಾಣಿ ಹೇಳಿದರು.ಸೋಮವಾರ ಇಲ್ಲಿಯ ಟಿಬೇಟಿಯನ್ ಕ್ಯಾಂಪ್ ನ ಎಕ್ಸ್ ಸರ್ವಿಸ್‌ಮ್ಯಾನ್‌ ಅಸೋಸಿಯೇಷನ್ ಕಟ್ಟಡದಲ್ಲಿ ತಾಲೂಕು ಆಡಳಿತ, ಪಟ್ಟಣ ಪಂಚಾಯತ, ತಾಲೂಕ ಪಂಚಾಯತಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡಾ. ಬಿ.ಆರ್. ಅಂಬೇಡ್ಕರ್ ಕೂಡ ಬೌದ್ಧ ಧರ್ಮಕ್ಕೆ ಮತಾಂತರಗೊಂಡು ಬೌದ್ದನ ಆದರ್ಶಗಳನ್ನು ಅಳವಡಿಸಿಕೊಂಡಿದ್ದರು. ಇದು ಬೌದ್ಧ ಧರ್ಮ ಎಷ್ಟು ಪ್ರಭಾವ ಶಾಲಿಯಾಗಿದೆ ಎಂಬುವುದಕ್ಕೆ ನಿದರ್ಶನವಾಗಿದೆ. ಸುಮಾರು ೯ ಸಾವಿರ ಬೌದ್ಧ ಅನುಯಾಯಿಗಳು ಮುಂಡಗೋಡ ಟಿಬೇಟಿಯನ್ ಕಾಲನಿಯಲ್ಲಿ ವಾಸವಾಗಿದ್ದು, ಬುದ್ದನ ಮೌಲ್ಯವನ್ನು ಸಾರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಬೌದ್ಧ ಜಯಂತಿಯನ್ನು ಇಲ್ಲಿ ಆಚರಣೆ ಮಾಡಲು ರಾಜ್ಯ ಸರ್ಕಾರ ಘೋಷಣೆ ಮಾಡಿದೆ ಎಂದರು. ಇದಕ್ಕೂ ಮುನ್ನ ಬುದ್ದನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಲಾಯಿತು.

ಮುಂಡಗೋಡ ತಹಶೀಲ್ದಾರ ಶಂಕರ್ ಗೌಡಿ, ತಾಲೂಕ ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ಟಿ.ವೈ ದಾಸನಕೊಪ್ಪ, ಟಿಬೇಟಿಯನ್ ಪ್ರತಿನಿಧಿ ಜಿಗೆ ತುಲ್ಲಿಮ್, ರಿಂಚೆನ್ ವಾಂಗೋ, ದಲಿತ ಸಂಘಟನೆಗಳ ಮುಖಂಡರಾದ ಎಸ್. ಫಕ್ಕೀರಪ್ಪ, ಚಿದಾನಂದ ಹರಿಜನ, ಪಟ್ಟಣ ಪಂಚಾಯ್ತಿ ಸದಸ್ಯ ಅಶೋಕ ಛಲವಾದಿ, ರಜಾ ಖಾನ್ ಪಠಾಣ್, ಶಾರದಾಬಾಯಿ ರಾಥೋಡ ಸೇರಿದಂತೆ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹಾಗೂ ನೂರಾರು ಬೌದ್ಧ ಬಿಕ್ಕುಗಳು ಉಪಸ್ಥಿತರಿದ್ದರು.

ಇದೇ ವೇಳೆ ಟಿಬೇಟಿಯನ್ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.