ಸಾರಾಂಶ
ಚಿಕ್ಕಮಗಳೂರು ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಯಾವುದೇ ಕಾಮಗಾರಿಗಳನ್ನು ಕೈಗೊಳ್ಳುವಾಗ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಹಾಗೂ ಕಾಮಗಾರಿಗಳು ಕಳಪೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದು ಚಿಕ್ಕಮಗಳೂರು ಕ್ಷೇತ್ರದ ಶಾಸಕ ಎಚ್.ಡಿ ತಮ್ಮಯ್ಯ ಅಧಿಕಾರಿಗಳಿಗೆ ತಾಕೀತು ಮಾಡಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಚಿಕ್ಕಮಗಳೂರು ತಾಲೂಕು ಮಟ್ಟದ ತ್ರೈ ಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೀಳೆಕಲ್ಲಹಳ್ಳಿ- ಉದ್ದೇಬೋರನಹಳ್ಳಿ- ಅಯ್ಯನಕೆರೆ ಮಾರ್ಗದ ಕುಸಿದ ಏರಿ ದುರಸ್ತಿಗೆ ಕೈಗೊಂಡ ಕ್ರಮದ ಬಗ್ಗೆ ಪ್ರಸ್ತಾಪ ವಾದಾಗ ವಿವರಣೆ ನೀಡಿದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಈ ರಸ್ತೆಗೆ ₹4 ಕೋಟಿ ಅನುದಾನ ದೊರೆತಿದ್ದು, ಸರಪಳಿ 0.45 ರಲ್ಲಿ ಮೋರಿ ಭಾರಿ ಮಳೆಯಿಂದ ಕುಸಿದ ಪರಿಣಾಮ ರಸ್ತೆ ಏರಿ ಪುನಃ ನಿರ್ಮಿಸಲಾಗಿದೆ. ಹಾಳಾದ ಭಾಗಕ್ಕೆ ಡಾಂಬರ್ ರಸ್ತೆ ಮಾಡಿ ಪೂರ್ಣಗೊಳಿಸಲು ಗುತ್ತಿಗರದಾರರಿಗೆ ನೋಟಿಸ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಅಕ್ಷರ ದಾಸೋಹದ ಬಗ್ಗೆ ಪ್ರಸ್ತಾಪಿಸಿದಾಗ ಶಾಲೆಯಲ್ಲಿ ಮಕ್ಕಳಿಗೆ ವಿತರಿಸುವ ಆಹಾರದ ಗುಣಮಟ್ಟದ ಪರೀಶಿಲನೆ ಮಾಡಿ ನಂತರ ಅದನ್ನು ಮಕ್ಕಳಿಗೆ ವಿತರಣೆ ಮಾಡುವಂತೆ ತಿಳಿಸಿದರು.ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಸಭೆಗೆ ಗೈರು ಆಗಿರುವ ಅಧಿಕಾರಿಗಳಿಗೆ ಕಾನೂನಿನಡಿ ಪತ್ರ ಬರೆದು ಕ್ರಮತೆಗೆದು ಕೊಳ್ಳುವಂತೆ ಸೂಚಿಸಿದರು. ಕೆಲವರಿಗೆ ಇ- ಖಾತೆ ಸಮಸ್ಯೆ ಇದೆ. ಅದರಲ್ಲೂ ಆದಿಶಕ್ತಿನಗರದ ನಿವಾಸಿಗಳು ಸ್ವಂತ ಮನೆ ನಿರ್ಮಿಸಿ ಕೊಂಡಿದ್ದರೂ ಸಹ ಅವರಿಗೆ ಇ-ಖಾತೆ ದೊರೆತ್ತಿಲ್ಲ. ಅಲ್ಲಿನ ಜನರು ಬಡವರಿದ್ದು, ಅವರಿಗೆ ತೊಂದರೆಯಾಗದಂತೆ ಇನ್ನು ಒಂದು ತಿಂಗಳಲ್ಲಿ ಜಂಟಿ ಸರ್ವೆ ಮಾಡಿ ಆ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಹೇಳಿದರು.ತಾಲೂಕಿನಲ್ಲಿ ವೈದ್ಯರ ಕೊರತೆಯಿಂದ ಜನರಿಗೆ ತೊಂದರೆಯಾಗುತ್ತಿದ್ದು, ವೈದ್ಯರು ತಮ್ಮ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು. ಆಲ್ದೂರು ಮುಂತಾದ ಕಡೆಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಪದೇ ಪದೇ ಈ ಸಮಸ್ಯೆ ಎದುರಾಗಲು ಕಾರಣ ಹಾಗೂ ಅದಕ್ಕೆ ಶೀಘ್ರವಾಗಿ ಪರಿಹಾರ ನೀಡಿ ಜನರಿಗೆ ತೊಂದರೆಯಾಗುವುದನ್ನು ತಪ್ಪಿಸಿ ಅದರ ಜೊತೆಗೆ ಆನೆಗಳ ಹಾವಳಿಯಿಂದ ಬೆಳೆ ನಷ್ಟಗೊಂಡ ರೈತರಿಗೆ ಪರಿಹಾರ ಒದಗಿಸಿ ಎಂದು ಹೇಳಿದರು.ರಸ್ತೆ ಅಗಲೀಕರಣದಿಂದ ಹೆಚ್ಚು ಮರಗಳಿಗೆ ಹಾನಿಯಾಗಿದ್ದು, ಇದರಿಂದ ಪಕ್ಷಿಗಳಿಗೆ ಆಹಾರ ಸಿಗದಂತ್ತಾಗಿದೆ. ರಸ್ತೆಗಳ ಪಕ್ಕದಲ್ಲಿ ಹಣ್ಣು ಗಿಡ ಗಳಾದ ನೇರಳೆ, ಮಾವಿನಹಣ್ಣು, ಹತ್ತಿಹಣ್ಣು ಇವುಗಳನ್ನು ಬೆಳೆಸಿ ಎಂದು ಸಲಹೆ ಮಾಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ರವೀಶ್ ಮಾಹಿತಿ ನೀಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯದ ಫಲಿತಾಂಶ ಶೇ. 66.14, ಚಿಕ್ಕಮಗಳೂರು ಜಿಲ್ಲೆಯ ಫಲಿತಾಂಶ ಶೇ. 75.36, ಚಿಕ್ಕಮಗಳೂರು ತಾಲೂಕು ಫಲಿತಾಂಶ ಶೇ. 77.35 ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ, ಚಿಕ್ಕಮಗಳೂರು ತಹಸೀಲ್ದಾರ್ ರೇಷ್ಮಾ ಶೆಟ್ಟಿ, ಕಡೂರು ತಾಲೂಕು ತಹಸೀಲ್ದಾರ್ ಪೂರ್ಣಿಮಾ, ತಾಪಂ ಕಾರ್ಯನಿರ್ವಹಕ ಅಧಿಕಾರಿ ವಿಜಯಕುಮಾರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.12 ಕೆಸಿಕೆಎಂ 3ಚಿಕ್ಕಮಗಳೂರು ಜಿಪಂ ಸಭಾಂಗಣದಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. ವಿಧಾನಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡ, ಸಿ.ಟಿ. ರವಿ, ತಾಪಂ ಕಾರ್ಯನಿರ್ವಹಕ ಅಧಿಕಾರಿ ವಿಜಯಕುಮಾರ್ ಇದ್ದರು.--------------------