ವಚನ ಸಾಹಿತ್ಯದಲ್ಲಿನ ಸಪ್ತಶೀಲಗಳನ್ನು ಪಾಲಿಸಿದರೆ ಬದುಕು ಸಾರ್ಥಕ: ಸಿ.ಎಂ. ಶಿಗ್ಗಾವಿ

| Published : Jan 04 2025, 12:32 AM IST

ವಚನ ಸಾಹಿತ್ಯದಲ್ಲಿನ ಸಪ್ತಶೀಲಗಳನ್ನು ಪಾಲಿಸಿದರೆ ಬದುಕು ಸಾರ್ಥಕ: ಸಿ.ಎಂ. ಶಿಗ್ಗಾವಿ
Share this Article
  • FB
  • TW
  • Linkdin
  • Email

ಸಾರಾಂಶ

ಸಂಡೂರು ಪಟ್ಟಣದ ಬಪ್ಪಕಾನ ಕುಮಾರಸ್ವಾಮಿ ಅವರ ಮನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ದತ್ತಿ ಉಪನ್ಯಾಸ ಹಾಗೂ ಸಿದ್ದೇಶ್ವರ ಸ್ವಾಮೀಜಿ ಅವರ ಎರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸಂಡೂರು: ಜನ ಭಾಷೆಯನ್ನು ದೇವ ಭಾಷೆಯನ್ನಾಗಿಸಿದವರು ವಚನಕಾರರು. ವಚನ ಸಾಹಿತ್ಯದ ಕಾಲವನ್ನು ಸಾಹಿತ್ಯದ ಸುವರ್ಣಯುಗ ಎನ್ನಬಹುದು. ವಚನ ಸಾಹಿತ್ಯದಲ್ಲಿನ ಸಪ್ತ ಶೀಲಗಳನ್ನು ಪಾಲಿಸಿದರೆ ಬದುಕು ಸಾರ್ಥಕವಾಗಲಿದೆ ಎಂದು ನಿವೃತ್ತ ಉಪನ್ಯಾಸಕ ಸಿ.ಎಂ. ಶಿಗ್ಗಾವಿ ಅಭಿಪ್ರಾಯಪಟ್ಟರು.

ಪಟ್ಟಣದ ಬಪ್ಪಕಾನ ಕುಮಾರಸ್ವಾಮಿ ಅವರ ಮನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಹಾಗೂ ಸಿದ್ದೇಶ್ವರ ಸ್ವಾಮೀಜಿ ಅವರ ಎರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಬಪ್ಪಕಾನ ನೀಲಮ್ಮ ದೊಡ್ಡಪ್ಪ ದತ್ತಿ ವಿಷಯ ವಚನ ಸಾಹಿತ್ಯ ಹಾಗೂ ಜಿ. ಶಿವಮ್ಮ ವೀರಭದ್ರಪ್ಪ ದತ್ತಿ ವಿಷಯ ಕಾಯಕವೇ ಕೈಲಾಸ ಕುರಿತು ಅವರು ಉಪನ್ಯಾಸ ನೀಡಿದರು.

ವಚನಕಾರರು ತಮ್ಮ ವಚನಗಳ ಮೂಲಕ ಸಹಕಾರ ತತ್ವ, ಹಂಚಿ ತಿನ್ನುವ ತತ್ವ, ದಾಸೋಹ, ಕಾಯಕ ತತ್ವವನ್ನು ತಿಳಿಸಿಕೊಟ್ಟರು. ದಯವೇ ಧರ್ಮದ ಮೂಲವೆಂದು ಸಾರಿದರು. ನಡೆನುಡಿ ಒಂದಾದಾಗಲೆ ಜೀವನ ಸಾರ್ಥಕ. ದೇವಲೋಕ, ಮರ್ತ್ಯಲೋಕ, ಸ್ವರ್ಗ, ನರಕಗಳ ಬಗ್ಗೆ ವಚನಗಳ ಮೂಲಕ ಹೊಸ ವ್ಯಾಖ್ಯಾನವನ್ನು ನೀಡಿದರು. ವಚನಗಳಲ್ಲಿ ಸಾರ್ವಕಾಲಿಕ ಸಾಮಾಜಿಕ, ಬದುಕಿನ ಸಾಕ್ಷಾತ್ಕಾರದ ಜೀವನ ಮೌಲ್ಯಗಳನ್ನು ಕಾಣುತ್ತಿದ್ದೇವೆ. ವಚನಕಾರರು ಕಾಯಕ ಹಾಗೂ ದಾಸೋಹ ಸಂಸ್ಕೃತಿಯನ್ನು ಬಿತ್ತಿದರು. ಜಗತ್ತಿನ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯ ಕೊಟ್ಟ ಮಹತ್ವದ ಕೊಡುಗೆ ಎಂದರೆ ವಚನ ಸಾಹಿತ್ಯ. ಆರೋಗ್ಯವಂತ ಸಮಾಜ ನಿರ್ಮಾಣ ವಚನ ಸಾಹಿತ್ಯದ ಗುರಿಯಾಗಿತ್ತು ಎಂದು ವಿವರಿಸಿದರು.

ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಸಾಕಷ್ಟು ವಚನ ಸಾಹಿತ್ಯ ನಾಶವಾಗಿದೆ. ಉಳಿದ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಪ್ರಕಟಿಸಿದ ಕೀರ್ತಿ ಫ.ಗು. ಹಳಕಟ್ಟಿ, ಎಂ.ಎಂ. ಕಲಬುರ್ಗಿ, ಆರ್.ಸಿ. ಹಿರೇಮಠ ಅವರಿಗೆ ಸಲ್ಲುತ್ತದೆ. ಪಾಲಕರು ತಮ್ಮ ಮಕ್ಕಳಿಗೆ ವಚನಗಳನ್ನು ಕಲಿಸಬೇಕಿದೆ. ಪ್ರತಿ ಮನೆಯಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಪುಸ್ತಕ ಹಾಗೂ ಫೋಟೋ ಇರಲಿ ಎಂದರು.

ದತ್ತಿ ದಾನಿಗಳಾದ ಬಪ್ಪಕಾನ ಕುಮಾರಸ್ವಾಮಿ ಮಾತನಾಡಿ, ಪ್ರತಿ ಮನೆಗಳಲ್ಲಿಯೂ ಸಾಹಿತ್ಯದ ಕಾರ್ಯಕ್ರಮಗಳಾಗಬೇಕು. ನಮ್ಮ ಇತಿಹಾಸ, ಸಾಹಿತ್ಯ, ಸಂಸ್ಕೃತಿ ಉಳಿಯಬೇಕಿದೆ. ವಚನ ಸಾಹಿತ್ಯವನ್ನು ಒಂದು ವಿಷಯವಾಗಿ ಮಕ್ಕಳಿಗೆ ಬೋಧಿಸುವಂತಾಗಬೇಕು ಎಂದರು.

ದತ್ತಿ ದಾನಿ ಹಾಗೂ ಕಸಾಪ ಗೌರವ ಕಾರ್ಯದರ್ಶಿ ಜಿ. ವೀರೇಶ ಮಾತನಾಡಿ, ಸಾರ್ವಜನಿಕರು ತಮ್ಮ ಮನೆಗಳಲ್ಲಿ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಬಯಸಿ, ತಿಳಿಸಿದಲ್ಲಿ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಾಡಲಾಗುವುದು ಎಂದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಬಿ. ನಾಗನಗೌಡ ಅಧ್ಯಕ್ಷೀಯ ನುಡಿಗಳನ್ನಾಡಿದರು.

ಸಿದ್ದೇಶ್ವರ ಸ್ವಾಮೀಜಿ ಅವರ ಪುಣ್ಯಸ್ಮರಣೆ ಜರುಗಿತು. ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಗಣ್ಯರು ನುಡಿನಮನ ಸಲ್ಲಿಸಿದರು. ಟಿ. ವೆಂಕಟೇಶ್ ಹಾಗೂ ಎಚ್. ಕುಮಾರಸ್ವಾಮಿ ಸಂಗೀತ ಕಾರ್ಯಕ್ರಮ ನೀಡಿದರು. ಬಸವರಾಜ ಬಣಕಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅರಳಿ ಕುಮಾರಸ್ವಾಮಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಬಪ್ಪಕಾನ ಕುಮಾರಸ್ವಾಮಿ ಅವರು ದಾಸೋಹ ಸೇವೆಗೈದರು.

ಬಸವರಾಜ ಮಸೂತಿ, ಎ.ಎಂ. ಶಿವಮೂರ್ತಿಸ್ವಾಮಿ, ಎಚ್.ಎನ್. ಭೋಸ್ಲೆ, ಎಂ.ಟಿ. ರಾಥೋಡ್, ಷಣ್ಮುಖರಾವ್, ಸುಭಾಷ್ ಶಿಂಧೆ, ಮಂಜುನಾಥ, ಹಗರಿ ಬಸವರಾಜಪ್ಪ, ಕೆ. ಕುಮಾರಸ್ವಾಮಿ, ಬಿ.ಎಂ. ಮಹಾಂತೇಶ್, ಶ್ರೀನಾಥ ಕಾಳೆ, ಪುಷ್ಪಾ, ಎಸ್.ಡಿ. ಪ್ರೇಮಲೀಲಾ ಹಾಗೂ ಬಪ್ಪಕಾನ ಕುಮಾರಸ್ವಾಮಿ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.