ಹೆಣ್ಣುಮಕ್ಕಳ ಅಕ್ಷರ ಕ್ರಾಂತಿ ಮೂಡಿಸಿದ ಸಾವಿತ್ರಾಬಾಯಿ ಫುಲೆ

| Published : Jan 04 2025, 12:32 AM IST

ಸಾರಾಂಶ

ಮಹಿಳೆಯನ್ನು ಮನುಷ್ಯಳೆಂದೆ ಪರಿಗಣಿಸದ ಸಮಾಜದಲ್ಲಿ, ಒಬ್ಬ ಮಹಿಳೆಯಾಗಿ ಓದು-ಬರಹ ಕಲಿತು, ಅದನ್ನೇ ಜ್ವಾಲೆಯಾಗಿ ಹಿಡಿದುಕೊಂಡು ಮುನ್ನಡೆದ ಧೀಮಂತ ಮಹಿಳೆ ಸಾವಿತ್ರಿಬಾಯಿ ಫುಲೆ.

ಧಾರವಾಡ:

ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ರಾಜ್ಯ ಸಮಿತಿ ಕರೆಯ ಮೇರೆಗೆ ಮಹಿಳಾ ಶಿಕ್ಷಣದ ರೂವಾರಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದ ಅಂಗವಾಗಿ ಜಿಲ್ಲಾದ್ಯಂತ ಶುಕ್ರವಾರದಿಂದ ಜ. 18ರ ವರೆಗೆ ಪಾಕ್ಷಿಕ ಕಾರ್ಯಕ್ರಮ ನಡೆಯಲಿದೆ.

ಅದರ ಅಂಗವಾಗಿ ತಾಲೂಕಿನ ಜೋಡಳ್ಳಿ ಗ್ರಾಮದಲ್ಲಿ ಕಾರ್ಯಕ್ರಮ ನಡೆಯಿತು.ಈ ವೇಳೆ ಮಾತನಾಡಿದ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸ್ಕಾಂಘಟನೆ ಜಿಲ್ಲಾಧ್ಯಕ್ಷೆ ಮಧುಲತಾ ಗೌಡರ, ಮಹಿಳೆಯನ್ನು ಮನುಷ್ಯಳೆಂದೆ ಪರಿಗಣಿಸದ ಸಮಾಜದಲ್ಲಿ, ಒಬ್ಬ ಮಹಿಳೆಯಾಗಿ ಓದು-ಬರಹ ಕಲಿತು, ಅದನ್ನೇ ಜ್ವಾಲೆಯಾಗಿ ಹಿಡಿದುಕೊಂಡು ಮುನ್ನಡೆದ ಧೀಮಂತ ಮಹಿಳೆ ಸಾವಿತ್ರಿಬಾಯಿ ಫುಲೆ. ಸಮಾನತೆಯ ಕಲ್ಪನೆ ಇನ್ನೂ ಸಮಾಜದಲ್ಲಿ ಸ್ಪಷ್ಟವಾಗಿ ಬೇರೂರುವ ಮೊದಲೇ ಶಿಕ್ಷಣದ ಮಹತ್ವ ಅರಿತು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ದಿಟ್ಟ ವ್ಯಕ್ತಿತ್ವ ಅವರದು ಎಂದರು.

ಜಾತಿ, ಲಿಂಗ ತಾರತಮ್ಯ, ಅಸ್ಪೃಶ್ಯತೆ, ಬಾಲ್ಯ ವಿವಾಹ, ವಿಧವಾ ದೌರ್ಜನ್ಯ, ಮಹಿಳಾ ಅನಕ್ಷರತೆಯಂತಹ ಹಲವು ಅಮಾನವೀಯ ಧೋರಣೆಗಳ ವಿರುದ್ಧ ಸಮರ ಸಾರಿ, ಲಿಂಗ ಸಮಾನತೆ, ದೀನ-ದಲಿತರೂ ಕೂಡ ಮನುಷ್ಯರೇ ಎಂದು ಸಾವಿತ್ರಿಬಾಯಿ ಫುಲೆ ಪ್ರತಿಪಾದಿಸಿದರು ಎಂದು ಹೇಳಿದರು.

ನಾವು ಸಾವಿತ್ರಿಬಾಯಿ ಫುಲೆ ಅವರನ್ನು ನೆನೆಯುವಾಗ ಇಂದಿನ ಸಂದರ್ಭದಕ್ಕೆ ಅವರ ವಿಚಾರಗಳ ಅವಶ್ಯಕತೆ ಹಾಗೂ ಪ್ರಸ್ತುತತೆ ಅರ್ಥಮಾಡಿಕೊಳ್ಳಬೇಕು. ಅಂದು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಅವರು ಹೋರಾಡಿದ ಪರಿಣಾಮವಾಗಿ ಸಾಕಷ್ಟು ಜನ ವಿದ್ಯಾವಂತರಾಗಿದ್ದಾರೆ. ಆದರೆ, ಇಂದಿಗೂ ಹೆಣ್ಣನ್ನು ನೋಡುವ ಮನೋಭಾವದಲ್ಲಿ ಮೂಲಭೂತ ವ್ಯತ್ಯಾಸ ಕಾಣುವುದಿಲ್ಲ. ದಬ್ಬಾಳಿಕೆ, ದೌರ್ಜನ್ಯ ಹೊಸ ರೂಪ ಪಡೆದುಕೊಂಡಿವೆ ಎಂದರು.

ಒಂದೆಡೆ ಪುರುಷ ಪ್ರಧಾನ ಅಧೀನತೆ, ಇನ್ನೊಂದೆಡೆ ಬಂಡವಾಳ ಶಾಹಿ ಆರ್ಥಿಕ ಶೋಷಣೆ. ಈ ಕುರಿತು ಪ್ರಜ್ಞೆ ಮೂಡಿಸಿ, ಅವರನ್ನು ಒಗ್ಗೂಡಿಸಿದಾಗ ಜನರು ಚಳವಳಿ ಬೆಳೆಸಿದಾಗ ಮಾತ್ರ ಸಾವಿತ್ರಿಬಾಯಿ ಫುಲೆ ಅವರಿಗೆ ಗೌರವ ಸಲ್ಲಿಸಿದಂತೆ ಆಗುತ್ತದೆ ಎಂದ ಗೌಡರ, ಮಹಾನ್ ವ್ಯಕ್ತಿಗಳ ದಿನಗಳ ಆಚರಣೆ ಕೇವಲ ಸಂಪ್ರದಾಯವಾಗದೆ, ಬದಲಾಗಿ ಅವರ ವಿಚಾರಧಾರೆ ನಮ್ಮ ಜೀವನಕ್ಕೆ ಸ್ಫೂರ್ತಿದಾಯಕ ಆದರ್ಶವಾಗಬೇಕು ಎಂದು ಕರೆ ನೀಡಿದರು.

ಈ ವೇಳೆ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷೆ ದೇವಮ್ಮ ದೇವತ್ಕಲ್, ಸಂಘಟನಾಕಾರರಾದ ಅನುಸೂಯ, ಜೋಡಳ್ಳಿ ಗ್ರಾಮ ಘಟಕದ ಸದಸ್ಯರಾದ ಮಲ್ಲಮ್ಮ ಶಿರಗುಪ್ಪಿ, ಜ್ಯೋತಿ, ದೀಪಾ, ಸರಸ್ವತಿ, ವಿದ್ಯಾ ಮುಂತಾದವರು ಭಾಗವಹಿಸಿದ್ದರು.