ಮುಚ್ಚಿದ್ದ ಟಿ.ಬೇಕುಪ್ಪೆ ಸರ್ಕಾರಿ ಶಾಲೆ ಪುನಾರಂಭ

| Published : Jan 04 2025, 12:32 AM IST

ಸಾರಾಂಶ

ಕನಕಪುರ: ಶಿಕ್ಷಣ ಇಲಾಖೆಯ ಕೆಲ ಅಧಿಕಾರಿಗಳ ದುರುದ್ದೇಶದಿಂದ ಸುಳ್ಳು ಮಾಹಿತಿ ನೀಡಿ ಮುಚ್ಚಲಾಗಿದ್ದ ಟಿ.ಬೇಕುಪ್ಪೆ ಗ್ರಾಮದ ಸರ್ಕಾರಿ ಶಾಲೆಯನ್ನು ಮತ್ತೆ ತೆರೆದಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತೀಗೌಡರ ಕಾರ್ಯವೈಖರಿಯನ್ನು ತಾಲೂಕು ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ ಹಾಗೂ ಗ್ರಾಮಸ್ಥರು ಪ್ರಶಂಸಿಸಿ ಅಭಿನಂದನೆ ಸಲ್ಲಿಸಿದರು.

ಕನಕಪುರ: ಶಿಕ್ಷಣ ಇಲಾಖೆಯ ಕೆಲ ಅಧಿಕಾರಿಗಳ ದುರುದ್ದೇಶದಿಂದ ಸುಳ್ಳು ಮಾಹಿತಿ ನೀಡಿ ಮುಚ್ಚಲಾಗಿದ್ದ ಟಿ.ಬೇಕುಪ್ಪೆ ಗ್ರಾಮದ ಸರ್ಕಾರಿ ಶಾಲೆಯನ್ನು ಮತ್ತೆ ತೆರೆದಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತೀಗೌಡರ ಕಾರ್ಯವೈಖರಿಯನ್ನು ತಾಲೂಕು ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ ಹಾಗೂ ಗ್ರಾಮಸ್ಥರು ಪ್ರಶಂಸಿಸಿ ಅಭಿನಂದನೆ ಸಲ್ಲಿಸಿದರು. ಟಿ.ಬೇಕುಪ್ಪೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೆ ತರಗತಿಯಲ್ಲಿ ಪುಣ್ಯ ಶ್ರೀ, ಎರಡನೇ ತರಗತಿಯಲ್ಲಿ ಸೌಮ್ಯ, ಒಂದನೇ ತರಗತಿಯಲ್ಲಿ ಪ್ರಶಾಂತ್ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರೂ ಶೂನ್ಯ ದಾಖಲಾತಿ ಎಂದು ನಮೂದಿಸಿ ಈ ಸರ್ಕಾರಿ ಶಾಲೆ ಮುಚ್ಚಲು ಇಲಾಖೆಗೆ ವರದಿ ನೀಡಿದ್ದರು. ಇದೇ ಕಾರಣದಿಂದ ಕಳೆದ ಡಿ.6ರಂದು ಶಾಲೆಯನ್ನು ಮುಚ್ಚಲಾಗಿತ್ತು. ಇದರ ಮಾಹಿತಿ ಪಡೆದ ಪ್ರಗತಿಪರ ಸಂಘಟನೆಯ ಪದಾಧಿಕಾರಿಗಳು ವಿದ್ಯಾರ್ಥಿ ಪೋಷಕರು ಹಾಗೂ ಗ್ರಾಮಸ್ಥರೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಮೂವರು ವಿದ್ಯಾರ್ಥಿಗಳ ಹೇಳಿಕೆ ಪಡೆದ ಶಿಕ್ಷಣಾಧಿಕಾರಿಗಳು ಮತ್ತೇ ಶಾಲೆ ಪುನಾರಂಭಿಸುವುದಾಗಿ ಹೇಳಿ ಶಾಲೆಯ ಬಾಗಿಲು ತೆರೆಸಿರುವುದಕ್ಕೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಕುಮಾರಸ್ವಾಮಿ ಮಾತನಾಡಿ, ಟಿ.ಬೇಕುಪ್ಪೆ ಸರ್ಕಾರಿ ಶಾಲೆಯನ್ನು ಶಾಶ್ವತವಾಗಿ ಮುಚ್ಚುವ ಪಿತೂರಿ ನಡೆಸಿದ್ದ ಕ್ಲಸ್ಟರ್ ಸಂಪನ್ಮೂಲ ಅಧಿಕಾರಿ ಶ್ರೀನಿವಾಸ್ ಹಾಗೂ ಶಿಕ್ಷಕಿ ನಿರ್ಮಲಾ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿ, ಶ್ರೀನಿವಾಸ್‌ ವರದಿ ಜೊತೆಗೆ ಶಾಲಾಭಿವೃದ್ಧಿ ಸಮಿತಿಯ ಸಹಮತವೂ ಇರುವುದಾಗಿ ಬರೆದಲ್ಲಿ ಉಲ್ಲೇಖಿಸಲಾಗಿದೆ. ಇಂತಹ ವರದಿಗೆ ಯಾವ ಶಾಲಾ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಸಹಕರಿಸುವುದಿಲ್ಲ. ನಮ್ಮಿಂದ ಶಾಲೆ ಉನ್ನತಿಕರಿಸುವುದಾಗಿ ಸುಳ್ಳು ಹೇಳಿ ಖಾಲಿ ಹಾಳೆಯಲ್ಲಿ ಸಹಿ ಪಡೆದುಕೊಂಡು ಇಂತಹ ಹೇಳಿಕೆ ಸೃಷ್ಟಿಸಿರುವುದಾಗಿ ದೂರಿದ್ದಾರೆ ಎಂದರು.

ರಾಜ್ಯ ರೈತ ಸಂಘದ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, ಶಿಕ್ಷಣ ಮಂತ್ರಿಗಳಿಗೆ ಈ ಬಗ್ಗೆ ದೂರು ನೀಡಲಿದ್ದೇವೆ. ಇದು ಅಕ್ಷಮ್ಯ ಅಪರಾಧವಾಗಿದ್ದು ರಾಜ್ಯ ಶಿಕ್ಷಣ ಇಲಾಖೆಯಲ್ಲಿ ಇಂತಹ ಬೇಜವಾಬ್ದಾರಿ ಅಧಿಕಾರಿಗಳಿರುವುದರಿಂದಲೇ ಕರ್ನಾಟಕದಲ್ಲಿ ಐದು ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಮೌಲ್ಯಾಧಾರಿತ ಶಿಕ್ಷಣ ನೀಡಬೇಕಾದ ಸರ್ಕಾರಿ ಶಾಲೆಗಳು ಮುಚ್ಚಿದರೆ ಬಡವರ ಮಕ್ಕಳು ಶಿಕ್ಷಣ ವಂಚಿತರಾಗಲಿದ್ದಾರೆ. ಮುಚ್ಚಿರುವ ಶಾಲೆಗಳ ಹಿಂದೆ ಇಂತಹ ಕೈವಾಡ ಇರುವ ಸಾಧ್ಯತೆಗಳಿದ್ದು, ಮುಚ್ಚಿದ ಶಾಲೆಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಮತ್ತೆ ಶಾಲೆಗಳ ಪುನಾರಂಭಿಸಬೇಕು ಎಂ

ದು ಆಗ್ರಹಿಸಿದರು.

ಈ ವೇಳೆ ಶಾಲಾಭಿವೃದ್ದಿ ಸದಸ್ಯೆ ರತ್ನ, ಗ್ರಾಪಂ ಸದಸ್ಯ ರಾಜಶೇಖರ್, ಮಧು, ಟಿ.ಬೇಕುಪ್ಪೆ ಗ್ರಾಮಸ್ಥರಾದ ಮರಿದೇವರು, ಕಾಡೇಗೌಡ, ಉಮೇಶ್, ವೆಂಕಟೇಶ್, ರಾಜು, ಬೋರಣ್ಣ ಹಾಜರಿದ್ದರು.

ಕೆ ಕೆ ಪಿ ಸುದ್ದಿ 01:

ಟಿ.ಬೇಕುಪ್ಪೆ ಗ್ರಾಮದಲ್ಲಿ ಮುಚ್ಚಿದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪುನಾರಂಭಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಗ್ರಾಮಸ್ಥರು ಹಾಗೂ ಹೋರಾಟಗಾರರು ಕೃತಜ್ಞತೆ ಅರ್ಪಿಸಿದರು.